September 19, 2024

Laying foundation stone for construction of shelter houses: ಡೋಂಗ್ರಿ ಗರೇಸಿಯಾ ಜನಾಂಗಕ್ಕೆ ೬೯ ಆಶ್ರಯ ಮನೆಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ

0

ಚಿಕ್ಕಮಗಳೂರುಎಕ್ಸ್‌ಪ್ರೆಸ್: ಕೆಲವರು ಕೇಸರಿ ಶಾಲು ಹಾಕಿಕೊಂಡು ಓಡಾಡಿದರೆ ಸಾಕು ಜನ ಸಿ.ಟಿ.ರವಿಗೆ ಓಟು ಹಾಕಿ ಬಿಡುತ್ತಾರೆ ಎಂದುಕೊಂಡಿದ್ದಾರೆ. ಕೇಸರಿ ಶಾಲಿನ ಜೊತೆಗೆ ಬೆಳಗಾದರೆ ಜನರ ಜೊತೆಗಿದ್ದು ಅವರ ಕಷ್ಟ ಸುಖಕ್ಕೆ ಆಗುತ್ತೇವೆ. ಈ ಕಾರಣಕ್ಕೆ ಜನ ನಮ್ಮನ್ನು ಪ್ರೀತಿಯಿಂದ ಕಾಣುತ್ತಾರೆ ಎಂದು ಶಾಸಕ ಸಿ.ಟಿ.ರವಿ ಹೇಳಿದರು.

ಅವರು ಕಲ್ಲುದೊಡ್ಡಿ ಬಡಾವಣೆಯಲ್ಲಿ ಡೋಂಗ್ರಿ ಗರೇಸಿಯಾ ಜನಾಂಗಕ್ಕೆ ೬೯ ಆಶ್ರಯ ಮನೆಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ನಾನು ಚಳುವಳಿ ಮಾಡುವಾಗ ಈ ಭಾಗದ ಜನರನ್ನೂ ಡಿಸಿ ಕಚೇರಿಗೆ ಕರೆದುಕೊಂಡು ಹೋಗಿದ್ದೇನೆ. ನಾವು ಜನರ ಬದುಕಿನ ಜೊತೆಗೆ, ಕಷ್ಟ, ಸುಖದ ಜೊತೆಗೆ ಇರುವವರು. ಇದೆಲ್ಲಾ ಅರ್ಥವಾಗದೆ ಇರುವವರು ಇಲ್ಲದ್ದನ್ನೆಲ್ಲಾ ಮಾತನಾಡುತ್ತಾರೆ. ಬಡವರ ಆಶೀರ್ವಾದ ಇರುವವರೆಗೂ ಯಾರಿಂದಲೂ ಸಿ.ಟಿ.ರವಿಯ ಕೂದಲನ್ನೂ ಕೊಂಕಿಸಲು ಆಗಲ್ಲ. ಪ್ರಜಾ ಪ್ರಭುತ್ವದಲ್ಲಿ ಜನರ ವಿಶ್ವಾಸ ಗಳಿಸಿದವನು ಮಾತ್ರ ಜನನಾಯಕನಾಗಲು ಸಾಧ್ಯ. ಫ್ಲೆಕ್ಸ್ ಹಾಕಿಸಿಕೊಂಡರೆ ಸಾಲಲ್ಲ ಎಂದರು.

ಡೋಂಗ್ರಿ ಗರೇಸಿಯಾ ಜನಾಂಗಕ್ಕೆ ಮನೆಗಳನ್ನು ನಿರ್ಮಿಸಿಕೊಡಬೇಕು ಎನ್ನುವುದು ಬಹಳ ವರ್ಷಗಳ ಪ್ರಯತ್ನವಾಗಿತ್ತು. ಒಂದು ಮನೆಯ ನಿರ್ಮಾಣ ವೆಚ್ಚ ೬.೫೦ ಲಕ್ಷ ರೂ., ಒಟ್ಟು ೬೯ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಇಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ೧ ಕೋಟಿ ಅನುದಾನ ಇಟ್ಟು, ಸಮುದಾಯ ಭವನಕ್ಕೆ ಜಾಗ ಮೀಸಲಿಡಲಾಗಿದೆ. ಇದಲ್ಲದೆ ಫಲಾನುಭವಿಗಳ ವಂತಿಕೆ ಕಟ್ಟುವುದು ಕಷ್ಟ ಎನ್ನುವ ಕಾರಣಕ್ಕೆ ಎಸ್ಸಿಪಿ-ಟಿಎಸ್ಪಿ ಅನುದಾನದಲ್ಲಿ ಭರಿಸುವ ವ್ಯವಸ್ಥೆ ಮಾಡಿದ್ದೇವೆ. ಮೇ.ಅಂತ್ಯದೊಳಗೆ ಈ ಮನೆಗಳ ಗೃಹ ಪ್ರವೇಶ ಆಗಬೇಕು. ಆಗ ಗುತ್ತಿಗೆದಾರರನ್ನು ಸನ್ಮಾನಿಸುತ್ತೇವೆ ಎಂದರು.

ಇದರೊಂದಿಗೆ ಜಿ ಪ್ಲಸ್ ಟು ಮಾದರಿಯಲ್ಲಿ ೧೫೧೧ ಮನೆಗಳ ನಿರ್ಮಾಣಕ್ಕೆ ಅಗತ್ಯವಿರುವ ತಂಡವನ್ನೂ ಇಟ್ಟುಕೊಂಡು ನಿಗಧಿತ ಸಮಯದಲ್ಲಿ ಪೂರ್ಣಗೊಳಿಸಬೇಕು. ಇಲ್ಲಿರುವವರೆಲ್ಲಾ ಬಡವರು, ಅವರ ಪ್ರೀತಿಯ ಹಾರೈಕೆಗೆ ಬೆಲೆ ಕಟ್ಟಲಾಗಲ್ಲ. ಇವರೆಲ್ಲ ನಂಬಿಕಸ್ತರು. ನಂಬಿಕೆಗೆ ಪ್ರಾಣ ಬೇಕಾದರೂ ಕೊಡುತ್ತಾರೆ. ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮದು ಎಂದರು.

ಆಶ್ರಯ ಸಮಿತಿ ಅಧ್ಯಕ್ಷ ನಾರಾಯಣ ಸ್ವಾಮಿ ಮಾತನಾಡಿ, ಡೋಂಗ್ರಿ ಗರೇಸಿಯಾ ಜನಾಂಗಕ್ಕೆ ೬೯ ಮನೆಗಳನ್ನು ನಿರ್ಮಿಸಲು ೫.೫ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಫಲಾನುಭವಿಗಳ ಪಾಲಿನ ಕಂತು ಕಟ್ಟುವುದು ಹೊರೆಯಾಗುತ್ತದೆ ಎನ್ನುವ ಕಾರಣಕ್ಕೆ ಪ್ರತಿ ಫಲಾನುಭವಿ ಖಾತೆಗೆ ೨೪.೧ ಕ್ರಿಯಾ ಯೋಜನೆ ಅನುದಾನದಲ್ಲಿ ೧.೪೪ ಲಕ್ಷ ರೂ. ಜಮೆ ಮಾಡಲಾಗಿದೆ ಎಂದರು.

ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮಾತನಾಡಿ, ಕಳೆದ ಹತ್ತು ತಿಂಗಳಿನಿಂದ ಡೋಂಗ್ರಿಗರೇಸಿಯಾ ಜನಾಂಗದ ಪ್ರಮುಖರು ಮನೆ ನಿರ್ಮಿಸಿಕೊಡಲು ನಗರಸಭೆಗೆ ಮನವಿ ಸಲ್ಲಿಸುತ್ತಿದ್ದರು. ಇದೀಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದ್ದಾರೆ ಎಂದರು. ಸಮಾರಂಭದಲ್ಲಿ ನಗರಸಭೆ ಉಪಾಧ್ಯಕ್ಷೆ ಉಮಾದೇವಿ ಕೃಷ್ಣಪ್ಪ, ಸ್ಥಳೀಯ ನಗರಸಭೆ ಸದಸ್ಯ ಮಣಿಕಂಠ, ಇತರೆ ಸದಸ್ಯರುಗಳಾದ ರಾಜು, ರೂಪಾ ಕುಮಾರ್, ರಾಜೇಶ್, ನಗರ ಆಶ್ರಯ ಸಮಿತಿ ಸದಸ್ಯರು, ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್ ಇದ್ದರು.

Laying foundation stone for construction of shelter houses

About Author

Leave a Reply

Your email address will not be published. Required fields are marked *

You may have missed