September 19, 2024

ಪ್ರಧಾನಿ ನರೇಂದ್ರ ಮೋದಿಯವರನ್ನು ಸೋಲಿಸಲು ದೇಶಾದ್ಯಂತ ಆಂದೋಲನ

0
ಕರ್ನಾಟಕ ರಾಜ್ಯ ರೈತ ಸಂಘದ ನಾಯಕರಿಂದ ಸುದ್ದಿಗೋಷ್ಠಿ

ಕರ್ನಾಟಕ ರಾಜ್ಯ ರೈತ ಸಂಘದ ನಾಯಕರಿಂದ ಸುದ್ದಿಗೋಷ್ಠಿ

ಚಿಕ್ಕಮಗಳೂರು:  ಕಳೆದ ವರ್ಷಗಳಿಂದ ರೈತರಿಗೆ ಸುಳ್ಳು ಹೇಳುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಸೋಲಿಸಲು ದೇಶಾದ್ಯಂತ ಆಂದೋಲನ ನಡೆಸುತ್ತಿದ್ದು, ಅದರಂತೆ ಕರ್ನಾಟಕದಲ್ಲಿ ಬಿಜೆಪಿ ಸೋಲಿಸಲು ಮನೆ-ಮನೆಗೆ ಕರಪತ್ರ ಹಂಚಿ ಮನವರಿಕೆ ಮಾಡಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ನಾಯಕರು ತಿಳಿಸಿದ್ದಾರೆ.

ಈ ಸಂಬಂಧ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿರುವ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಗೌರವಾಧ್ಯಕ್ಷ ಚಾಮರಸ ಮಾಲೀಪಾಟೀಲ್ ಇವರನ್ನೊಳಗೊಂಡ ತಂಡ ಇಂದು ಜಿಲ್ಲೆಗೆ ಆಗಮಿಸಿ ನಗರದ ಪ್ರಸ್‌ಕ್ಲಬ್‌ನಲ್ಲಿ ತಮ್ಮ ಆಂದೋಲನದ ಕರಪತ್ರ ಬಿಡುಗಡೆಗೊಳಿಸಿ ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷರಾಗಿರುವ ಚಾಮರಸ ಮಾಲೀಪಾಟೀಲ್ ಮಾತನಾಡಿ, ದೇಶದಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ೧೦ ವರ್ಷಗಳಲ್ಲಿ ರೈತರಿಗೆ ಸುಳ್ಳು ಹೇಳುತ್ತಾ ಬಂದಿದ್ದು ಕರ್ನಾಟಕ ರಾಜ್ಯ ರೈತ ಸಂಘ, ಸರ್ವೋದಯ ಕರ್ನಾಟಕ ಪಕ್ಷ ಸೇರಿದಂತೆ ೫೪೦ ರೈತ ಪರ ಸಂಘಟನೆಗಳು ಸೇರಿ ರಚಿಸಿಕೊಂಡಿರುವ ಸಂಯುಕ್ತ ಕಿಸಾನ್ ವತಿಯಿಂದ ದೇಶದಾದ್ಯಂತ ಎನ್‌ಡಿಎ ಮಿತ್ರ ಪಕ್ಷ ಸೋಲಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ನರೇಂದ್ರ ಮೋದಿಯವರು ೧೦ ವರ್ಷಗಳ ಹಿಂದೆ ಚುನಾವಣೆಗೆ ಸ್ಪರ್ಧಿಸಿದಾಗ ತಾವು ಜಯಗಳಿಸಿ ಅಧಿಕಾರ ವಹಿಸಿಕೊಂಡ ತಕ್ಷಣ ರೈತರ ಸಾಲ ಮನ್ನಾ, ಕನಿಷ್ಠ ಬೆಂಬಲ ಬೆಲೆ, ಸ್ವಾಮಿನಾಥನ್ ವರದಿ ಜಾರಿಗೊಳಿಸಲು ಮೊದಲ ಸಭೆಯಲ್ಲಿ ತೀರ್ಮಾನಿಸಿ ಮೊಟ್ಟಮೊದಲ ಕಾರ್ಯಕ್ರಮವಾಗಿ ಜಾರಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಅಧಿಕಾರ ವಹಿಸಿಕೊಂಡ ನಂತರ ೧೦ ವರ್ಷಗಳಾದರೂ ತಾವು ಕೊಟ್ಟ ಆಶ್ವಾಸನೆ ಈಡೇರಿಸಲಿಲ್ಲ ಎಂದು ಆರೋಪಿಸಿದರು.

ರೈತರ ಸಾಲ ಮನ್ನಾ ಮಾಡದ ಮೋದಿ ಅವರು ಕಾರ್ಪೊರೇಟ್ ಕಂಪನಿಗಳ ೧೪ ಲಕ್ಷ ಕೋಟಿ ಸಾಲ ಮನ್ನಾ ಮಾಡುವ ಮೂಲಕ ರೈತರಿಗೆ ಮಾಡಿದ ಮೊದಲ ಮೋಸ ಎಂದ ಅವರು ರೈತರ ಆದಾಯ ದ್ವಿಗುಣ ಮಾಡುವುದಾಗಿ ಹೇಳಿ ಬೆಲೆ ಏರಿಕೆ ಮೂಲಕ ಕೃಷಿ ವೆಚ್ಚವನ್ನು ದ್ವಿಗುಣವಾಗುವಂತೆ ಮಾಡಿದರು ಎಂದು ಹೇಳಿದರು.

ಫಸಲ್ ಭೀಮಾ ಹೆಸರಿನಲ್ಲಿ ರೈತರ ಜೇಬಿನಿಂದ ಹಣ ಕಿತ್ತು ಕಾರ್ಪೊರೇಟ್ ಕಂಪನಿಗೆ ಲಾಭವಾಗುವಂತೆ ಮಾಡಿದರು. ೨೦೧೯ ರಿಂದ ಯಾವುದೇ ರೈತರಿಗೆ ಸರಿಯಾದ ಪರಿಹಾರ ಕೊಡಲಿಲ್ಲ. ಚುನಾವಣಾ ಬಾಂಡ್ ಭ್ರಷ್ಟಾಚಾರಕ್ಕೆ ಹೊಸ ಆಯಾಮವಾಗಿದ್ದು ಆರ್‌ಎಸ್‌ಎಸ್‌ನ ಕಪಿಮುಷ್ಠಿಯಲ್ಲಿರುವ ನರೇಂದ್ರ ಮೋದಿಯವರು ರೈತರ ಪರವಾಗಿ ಇಲ್ಲ ಎಂದು ದೂರಿದರು.

ನೀರಾವರಿ ಯೋಜನೆಗಳಿಗೆ ಹಣ ಕೊಡಲಿಲ್ಲ. ಭೀಕರ ಬರ ಪರಿಸ್ಥಿತಿ ಬಂದಾಗ ಪರಿಹಾರ ಕೊಡಲಿಲ್ಲ. ಈ ರೀತಿ ಕಳೆದ ಹತ್ತು ವರ್ಷಗಳಿಂದ ಸುಳ್ಳು ಹೇಳುತ್ತಾ ಬಂದಿರುವ ನಮೋರವರಿಗೆ ಏಕೆ ಮತ ಕೊಡಬೇಕೆಂಬ ಉದ್ದೇಶದಿಂದ ದೇಶದಾದ್ಯಂತ ಆಂದೋಲನ ನಡೆಸಲಾಗುತ್ತಿದೆ. ದೇಶದ ಎಲ್ಲೂ ಕೂಡ ಮೋದಿ ಗಾಳಿ ಇಲ್ಲ. ಅವರ ಪರವಾಗಿ ಹವಾ ಸೃಷ್ಟಿಸುವ ಸಲುವಾಗಿ ೪೦೦ ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಎನ್‌ಡಿಎ ಮೈತ್ರಿಕೂಟಕ್ಕೆ ೨೦೦ ಸ್ಥಾನಗಳೂ ಬರುವುದಿಲ್ಲವೆಂದು ಹೇಳಿದರು.

ಸಂವಿಧಾನ ಉಳಿಯಬೇಕು ಶ್ರಮಜೀವಿ ಬಡವರು ಉಳಿಯಬೇಕು. ಎನ್‌ಡಿಎ ಮೈತ್ರಿಕೂಟ ಸೋಲಿಸಬೇಕೆಂಬ ಘೋಷವಾಕ್ಯದೊಂದಿಗೆ ಇಡೀ ರಾಜ್ಯಾದ್ಯಂತ ಮನೆಗೊಂದು ಕರಪತ್ರ ನೀಡಿ ಅಭಿಯಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಈ ಚುನಾವಣೆಗೆ ಸಂಬಂಧಿಸಿದಂತೆ ರೈತ ಸಂಘ ಅತ್ಯಂತ ಜವಾಬ್ದಾರಿಯಿಂದ ತೀರ್ಮಾನ ಕೈಗೊಂಡು ಕಳೆದ ೧೭ ರಿಂದ ಅಭಿಯಾನ ಕೈಗೊಂಡಿದೆ. ಕಳೆದ ಹತ್ತು ವರ್ಷಗಳ ಅವಧಿಯ ನರೇಂದ್ರ ಮೋದಿ ಆಡಳಿತ ಅತ್ಯಂತ ಕೆಟ್ಟದಾಗಿ ನಡೆಯುತ್ತಿದ್ದು, ಕೃಷಿ ಕ್ಷೇತ್ರ ಕಾರ್ಪೊರೇಟ್ ಕಂಪನಿಗಳಿಗೆ ಹೋಗದಂತೆ ತಡೆದು ಸರಿದಾರಿಗೆ ತರುವುದು ಈ ಅಭಿಯಾನದ ಉದ್ದೇಶವಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪೂಣಚ್ಚ, ಜಿಲ್ಲಾಧ್ಯಕ್ಷ ಗುರುಶಾಂತಪ್ಪ, ರಾಜ್ಯ ಸಮಿತಿ ಸದಸ್ಯ ಎಂ.ಸಿ ಬಸವರಾಜ್ ಇತರ ಮುಖಂಡರಾದ ಕೆ.ಕೆ ಕೃಷ್ಣೇಗೌಡ, ಕಡೂರು ತಾಲ್ಲೂಕು ಅಧ್ಯಕ್ಷ ಆನಂದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಉಪಸ್ಥಿತರಿದ್ದರು.

Nationwide movement to defeat Prime Minister Narendra Modi

About Author

Leave a Reply

Your email address will not be published. Required fields are marked *

You may have missed