September 19, 2024

ಮೇ 12 ರಂದು ತತ್ವಜ್ಞಾನಿಗಳ ದಿನಾಚರಣೆ-ಸಂಗೀತ ಕಾರ್ಯಕ್ರಮ

0
ಬ್ರಾಹ್ಮಣ ಮಹಾಸಭಾ ಸುದ್ದಿಗೋಷ್ಠಿ

ಬ್ರಾಹ್ಮಣ ಮಹಾಸಭಾ ಸುದ್ದಿಗೋಷ್ಠಿ

ಚಿಕ್ಕಮಗಳೂರು: ಜಗದ್ಗುರು ಶ್ರೀ ಶಂಕರಾಚಾರ್ಯರ ಜಯಂತಿ ಹಾಗೂ ರಾಮಾನುಜಾಚಾರ್ಯರ ಜಯಂತಿ ಅಂಗವಾಗಿ ತತ್ವಜ್ಞಾನಿಗಳ ದಿನಾಚರಣೆ ಮತ್ತು ಭಕ್ತಿ ಸಂಗೀತ ಕಾರ್ಯಕ್ರಮವನ್ನು ಮೇ ೧೨ ರಂದು ಭಾನುವಾರ ಸಂಜೆ ಬ್ರಹ್ಮಸಮುದ್ರ ರಂಗಣ್ಣನವರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ ಎಂದು ತಾಲೂಕು ಬ್ರಾಹ್ಮಣ ಮಹಾಸಭಾ ನಿರ್ದೇಶಕಿ ಸುಮಾ ಪ್ರಸಾದ್ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಬ್ರಾಹ್ಮಣ ಮಹಾಸಭಾ, ಶೃಂಗೇರಿ ಶ್ರೀ ಶಂಕರ ಮಠದ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಅಂದು ಸಂಜೆ ೬ ಗಂಟೆಗೆ ಹವ್ಯಕ ಮಾಸ ಪತ್ರಿಕೆ ಸಂಪಾದಕ ಸಂದೇಶ್ ತಲಕಾಲಕೊಪ್ಪ ಇವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಪಿ.ಮಂಜುನಾಥ ಜೋಷಿ ಅಧ್ಯಕ್ಷತೆ ವಹಿಸಲಿದ್ದಾರೆಂದು ಹೇಳಿದರು.

ರಾಮಾನುಜಾಚಾರ್ಯರ ಕುರಿತ ವಾಗ್ಮಿಗಳು, ಹಿರೇಮಗಳೂರು ಶ್ರೀ ಕೋದಂಡ ರಾಮಚಂದ್ರಸ್ವಾಮಿ ದೇವಾಲಯದ ಅರ್ಚಕರಾದ ವೈಷ್ಣವಸಿಂಹ ಅವರು ಉಪನ್ಯಾಸ ನೀಡಲಿದ್ದಾರೆ. ಶೃಂಗೇರಿ ಶಂಕರ ಮಠದ ಗೌರವ ಪ್ರತಿನಿಧಿ ಸಿ.ಎಸ್. ಚನ್ನಕೇಶವರಾವ್, ಝೀ ಟಿವಿ ಕನ್ನಡದ ಸರಿಗಮಪ ಖ್ಯಾತಿಯ ಗಾಯಕ ಎಂ.ಆರ್. ಶ್ರೀಹರ್ಷ, ದಾನಿಗಳಾದ ರಾಮಚಂದ್ರ ಹಾಸ್ಯಗಾರ, ಯೋಗ ಶಿಕ್ಷಕ ದಿವಾಕರ ಭಟ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆಂದರು.

ಈ ಕಾರ್ಯಕ್ರಮಕ್ಕೂ ಮುನ್ನ ಮಧ್ಯಾಹ್ನ ೩ ಗಂಟೆಯಿಂದ ೪ ರವರೆಗೆ ನಗರದ ಬಸವನಹಳ್ಳಿ ಮುಖ್ಯರಸ್ತೆಯಲ್ಲಿರುವ ಶೃಂಗೇರಿ ಶಂಕರ ಮಠದ ವಿದ್ಯಾಭಾರತಿ ಸಭಾಂಗಣದಲ್ಲಿ ರಸ ಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ನಂತರ ಶಂಕರ ಮಠದ ಮುಂಭಾಗದಿಂದ ಶಂಕರಾಚಾರ್ಯರು, ರಾಮಾನುಜಾಚಾರ್ಯರು ಮತ್ತು ಮಧ್ವಾಚಾರ್ಯರ ಭಾವಚಿತ್ರ ಸಹಿತ ಮೆರವಣಿಗೆ ಪ್ರಾರಂಭವಾಗಿ, ಭಜನಾ ಮಂಡಳಿಯ ತಂಡಗಳು ಭಜನೆಗಳನ್ನು ಹೇಳುವ ಮೂಲಕ ಕಾರ್ಯಕ್ರಮಕ್ಕೆ ಕಳೆಗಟ್ಟಲಿವೆ. ಬಸವನಹಳ್ಳಿ ರಸ್ತೆಯಲ್ಲಿ ಮೆರವಣಿಗೆ ಸಾಗಿ ರಂಗಣ್ಣನವರ ಕಲ್ಯಾಣ ಮಂಟಪ ತಲುಪಲಿದೆ ಎಂದರು.

ಸಭಾ ಕಾರ್ಯಕ್ರಮದ ಬಳಿಕ ಎಂ.ಆರ್. ಶ್ರೀಹರ್ಷ ಅವರು ಭಕ್ತಿಗೀತೆಗಳ ಗಾಯನವನ್ನು ನಡೆಸಿಕೊಡಲಿದ್ದಾರೆ. ಪಕ್ಕ ವಾದ್ಯದಲ್ಲಿ ಕೀಬೋರ್ಡ್ ಷಣ್ಮುಖ ಸಜ್ಜ, ತಬಲ ಆತ್ಮರಾಮ ನಾಯಕ್, ರಿದಂ ಪ್ಯಾಡ್‌ನಲ್ಲಿ ವಿನಯ್ ರಂಗಧೋಳ್ ಇವರುಗಳಿಗೆ ಸಾಥ್ ನೀಡಲಿದ್ದಾರೆಂದು ಹೇಳಿದರು.

ಜಗದ್ಗುರು ಶೃಂಗೇರಿ ಶ್ರೀ ಶ್ರೀ ಶ್ರೀ ಭಾರತೀ ತೀರ್ಥ ಮಹಾ ಸನ್ನಿಧಾನಂಗಳವರ ಪೀಠಾರೋಹಣ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಈ ಬಾರಿಯ ಶ್ರೀ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮ ಅತ್ಯಂತ ಮಹತ್ವದ್ದೆನ್ನಿಸಲಿದೆ. ಜಗದ್ಗುರುಗಳ ಪೀಠಾರೋಹಣ ಸುವರ್ಣ ಮಹೋತ್ಸವದ ಪ್ರಯುಕ್ತ ಈಗಾಗಲೇ ಶ್ರೀಮಠವು ಹತ್ತು ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಪತ್ರಿಕಾ ಗೋಷ್ಠಿಯಲ್ಲಿ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಪಿ.ಮಂಜುನಾಥ್ ಜೋಷಿ, ಕಾರ್ಯದರ್ಶಿ ಎನ್.ಕೆ. ಅಶ್ವಿನ್, ನಿರ್ದೇಶಕ ಕೇಬಲ್ ಕಿಟ್ಟಿ ಉಪಸ್ಥಿತರಿದ್ದರು.

Philosophers Day on 12th May

About Author

Leave a Reply

Your email address will not be published. Required fields are marked *

You may have missed