September 19, 2024

ಜಿಲ್ಲೆಯಲ್ಲಿ ಬಿತ್ತನೆ ಬೀಜ- ರಸಗೊಬ್ಬರಕ್ಕೆ ಯಾವುದೇ ಕೊರತೆಯಿಲ್ಲ

0
ಭಿತ್ತನೆ ಬೀಜ ಹಾಗೂ ರಸಗೊಬ್ಬರ ಮತ್ತು ಇತರೆ ಸಿದ್ಧತೆಗಳ ಕುರಿತು ಪೂರ್ವ ಸಿದ್ಧತಾ ಸಭೆ

ಭಿತ್ತನೆ ಬೀಜ ಹಾಗೂ ರಸಗೊಬ್ಬರ ಮತ್ತು ಇತರೆ ಸಿದ್ಧತೆಗಳ ಕುರಿತು ಪೂರ್ವ ಸಿದ್ಧತಾ ಸಭೆ

ಚಿಕ್ಕಮಗಳೂರು:  ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕೆ ಯಾವುದೇ ಕೊರತೆ ಇಲ್ಲ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ತಿಳಿಸಿದರು.

ಜಂಟಿ ಕೃಷಿ ನಿರ್ದೇಶಕರ ಕಛೇರಿ ಸಭಾಂಗಣದಲ್ಲಿ ಇಂದು ೨೦೨೪-೨೫ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಮತ್ತು ಇತರೆ ಸಿದ್ಧತೆಗಳ ಕುರಿತು ಕೃಷಿ ಇಲಾಖೆ ಅಧಿಕಾರಿಗಳು, ರೈತ ಪ್ರತಿನಿಧಿಗಳು ಹಾಗೂ ರಸಗೊಬ್ಬರಗಳ ಡೀಲರ್‍ಸ್‌ಗಳೊಂದಿಗೆ ನಡೆದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಮುಂಗಾರು ಬೆಳೆಗಳಾದ ಹೆಸರು, ಸೂರ್ಯಕಾಂತಿ, ನೆಲಗಡಲೆ, ಉದ್ದು, ಆಲಸಂದೆ, ಸೇರಿದಂತೆ ಒಟ್ಟು ೯೮,೦೦೦ ಹೆಕ್ಟೇರ್ ಭೂಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಏಪ್ರಿಲ್ ಹಾಗೂ ಮೇ ತಿಂಗಳ ಮಾಹೆಯಲ್ಲಿ ರಸಗೊಬ್ಬರ ಬೇಡಿಕೆಯು ೩೫,೦೭೩ ಮೆಟ್ರಿಕ್ ಟನ್‌ಗಳಿದ್ದು, ಜಿಲ್ಲೆಯಲ್ಲಿ ಈಗಾಗಲೇ ೪೧,೧೫೧ ಮೆಟ್ರಿಕ್ ಟನ್‌ಗಳಷ್ಟು ರಸಗೊಬ್ಬರ ದಾಸ್ತಾನು ಇದೆ. ಬಿತ್ತನೆಗೆ ಬೇಕಾದ ಬೀಜಗಳು ಸಾಕಾಷ್ಟು ಪ್ರಮಾಣದಲ್ಲಿ ದಾಸ್ತಾನಿದ್ದು, ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕೆ ಯಾವುದೇ ಕೊರತೆ ಇರುವುದಿಲ್ಲ ಎಂದು ಹೇಳಿದರು.

ರಸಗೊಬ್ಬರ ಮಾರಾಟಗಾರರು ರಸಗೊಬ್ಬರ ಚೀಲಗಳ ಮೇಲೆ ನಮೂದಿಸಿರುವ ಗರಿಷ್ಠ ಮಾರಾಟ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಬಾರದು. ರಸಗೊಬ್ಬರಗಳ ದಾಸ್ತಾನು ಹಾಗೂ ಮಾರಾಟ ದರಗಳನ್ನು ಸಾರ್ವಜನಿಕರಿಗೆ ಎದ್ದು ಕಾಣುವಂತೆ ಸೂಚನಾ ಫಲಕದಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು. ಪಾಯಿಂಟ್ ಆಫ್ ಸೇಲ್ (ಪಿಒಎಸ್) ಮುಖಾಂತರ ರಸಗೊಬ್ಬರಗಳನ್ನು ಮಾರಾಟ ಮಾಡುವುದು. ಇಲ್ಲವಾದಲ್ಲಿ ಸಂಬಂಧಪಟ್ಟ ರಸಗೊಬ್ಬರ ಮಾರಾಟಗಾರರ ಪರವಾನಗಿಯನ್ನು ರದ್ದುಗೊಳಿಸಲಾಗುವುದು ಎಂದು ತಿಳಿಸಿದರು.

ರಾಜ್ಯ ಮಟ್ಟದ ಸಗಟು ರಸಗೊಬ್ಬರ ಮಾರಾಟ ಪರವಾನಗಿ ಹೊಂದಿರುವವರು ಜಿಲ್ಲೆಗೆ ಹಂಚಿಕೆಯಾದ ರಸಗೊಬ್ಬರವನ್ನು ಅಂತರ ಜಿಲ್ಲೆಗೆ ಮಾರಾಟ ಮಾಡಲು ಜಂಟಿ ಕೃಷಿ ನಿರ್ದೇಶಕರಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ರಸಗೊಬ್ಬರ ರೇಕ್ ಪಾಯಿಂಟ್‌ಗೆ ತಲುಪುವ ಕನಿಷ್ಟ ಒಂದು ದಿನ ಮುಂಚಿತವಾಗಿ ಡೀಲರ್ ವಾರು ರಸಗೊಬ್ಬರಗಳ ಸರಬರಾಜು ಮಾಹಿತಿಯನ್ನು ಕೃಷಿ ಇಲಾಖೆಯ ಗಮನಕ್ಕೆ ತಪ್ಪದೇ ತರಬೇಕಲ್ಲದೆ ಡೀಲರ್ ವಾರು ರಸಗೊಬ್ಬರಗಳನ್ನು ಸರಬರಾಜು ಮಾಡಿದ ತಕ್ಷಣವೇ ರಸಗೊಬ್ಬರ ಮಾರಾಟ ಕಂಪನಿ, ಸಗಟು ರಸಗೊಬ್ಬರ ಮಾರಾಟಗಾರರು ಎಂಎಫ್‌ಎಂಎಸ್ ತಂತ್ರಾಂಶ / ಪಿಒಎಸ್ ಮುಖಾಂತರ ದಾಸ್ತಾನು ಅಪ್‌ಡೇಟ್ ಮಾಡುವುದು ಕಡ್ಡಾಯವಾಗಿರುತ್ತದೆ ಎಂದರು.

ರಸಗೊಬ್ಬರಗಳ ಜೊತೆಗೆ ಇತರೆ ಕೃಷಿ ಪರಿಕರಗಳನ್ನು ಲಿಂಕ್ ಮಾಡಿ ಮಾರಾಟ ಮಾಡುವುದು ಕಂಡು ಬಂದಲ್ಲಿ ಎಫ್‌ಸಿಒ ೧೯೮೫ರನ್ವಯ ಕ್ರಮ ಜರುಗಿಸಲಾಗುವುದು ಎಂದರಲ್ಲದೇ ರಸಗೊಬ್ಬರ ಕಂಪನಿಗಳಿಂದ ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿಎಪಿಗಳನ್ನು ಡ್ರೋಲ್ ಮೂಲಕ ಸಿಂಪಡಣೆ ಮಾಡಿ ರೈತರ ತಾಕುಗಳಲ್ಲಿ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸುವ ಮೂಲಕ ಪ್ರಚಾರ ಮಾಡುವಂತೆ ರಸಗೊಬ್ಬರ ಸರಬರಾಜುದಾರರಿಗೆ ಸೂಚಿಸಿದ ಅವರು ರಸಗೊಬ್ಬರ ಕಂಪನಿಗಳು ಗೋದಾಮು ಸ್ಥಾಪನೆಗೆ ತುರ್ತು ಕ್ರಮವಹಿಸುವಂತೆ ತಿಳಿಸಿದರು.

ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಗೋಪಾಲಕೃಷ್ಣ ಮಾತನಾಡಿ ಜಿಲ್ಲೆಗೆ ಸರಬರಾಜು ಆಗುವ ರಸಗೊಬ್ಬರಗಳ ಮಾಹಿತಿಯನ್ನು ಕೃಷಿ ಇಲಾಖೆಗೆ ತಪ್ಪದೇ ನೀಡುವಂತೆ ರಸಗೊಬ್ಬರ ಸರಬರಾಜು ಕಂಪನಿಗಳ ಪ್ರತಿನಿಧಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸುಜಾತ, ಜಿಲ್ಲಾ ಕೃಷಿಕ ಸಮಾಜದ ಪ್ರತಿನಿಧಿಗಳು, ರೈತ ಸಂಘಟನೆಗಳ ಪ್ರತಿನಿಧಿಗಳು, ಕೃಷಿ ಪರಿಕರ ಮಾರಾಟಗಾರರ ಸಂಘದ ಪ್ರತಿನಿಧಿಗಳು, ವಿವಿಧ ರಸಗೊಬ್ಬರಗಳ ಸರಬರಾಜು ಕಂಪನಿಯ ಪ್ರತಿನಿಧಿಗಳು ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Pre-preparation meeting on wall seed and fertilizer and other preparations

About Author

Leave a Reply

Your email address will not be published. Required fields are marked *

You may have missed