September 19, 2024

ವಿದ್ಯಾರ್ಥಿ-ಯುವಜನರು ಸಾಮಾಜಿಕ ಜವಾಬ್ದಾರಿ ನಿಭಾಯಿಸುವ ಕಳಕಳಿ ಹೊಂದಬೇಕು

0
ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕೋತ್ಸವ ಸಮಾರಂಭ

ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕೋತ್ಸವ ಸಮಾರಂಭ

ಚಿಕ್ಕಮಗಳೂರು: ವಿದ್ಯಾರ್ಥಿ, ಯುವಜನರು ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸುವ ಕಳಕಳಿಯನ್ನು ಹೊಂದಬೇಕು ಎಂದು ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಸಚಿವ ಡಾ. ಸಿ.ಕೆ.ಸುಬ್ಬರಾಯ ಹೇಳಿದರು.

ಆದಿಚುಂಚನಗಿರಿ ಇನ್ಸ್ಟಿಟ್ಯೂಟ್ ಆಫ್ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ವತಿಯಿಂದ ತಾಲ್ಲೂಕಿನ ಅರಿಸಿನಗುಪ್ಪೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾಜಿಕ ಜವಾಬ್ದಾರಿ ಮತ್ತು ರಾಷ್ಟ್ರೀಯತೆ ವಿಚಾರದಲ್ಲಿ ಯುವಕರು ಚಿಂತನೆ ನಡೆಸಬೇಕು. ನಮ್ಮ ದೇಶಕ್ಕಾಗಿ ನಾವು ಹೆಮ್ಮೆ ಪಡಬೇಕೆಂಬ ಭಾವನೆ ಬರಬೇಕು ಎಂದರು.

ಇದರ ಜೊತೆಯಲ್ಲಿ ತಮ್ಮ ವ್ಯಕ್ತಿತ್ವವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳುವ ಕಡೆಗೂ ಒತ್ತು ನೀಡಬೇಕು. ಅದಕ್ಕಾಗಿ ಇಂತಹ ಪರಿಸರದಲ್ಲಿ ಬೆರೆಯಬೇಕು. ಸಂಘಟಿತರಾಗಿ, ಸಾಮೂಹಿಕವಾಗಿ ಒಂದೆಡೆ ಕಲೆತು ಹಳ್ಳಿಗಳಲ್ಲಿರುವ ಕಷ್ಟ ಸುಖಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಅರಿಸಿನಗುಪ್ಪೆ ಸರ್ಕಾರಿ ಶಾಲೆ ೧೯೫೩ ರಲ್ಲೇ ಆರಂಭವಾಗಿದೆ. ನಮ್ಮ ಹಿರಿಯರು ನಮಗೆ ಸ್ವಾತಂತ್ರ್ಯ ಬಂದ ತಕ್ಷಣವೇ ಯೋಚನೆ ಮಾಡಿ ಇಲ್ಲಿಗೆ ಒಂದು ಶಾಲೆ ನೀಡಿದ್ದಾರೆ. ಅಲ್ಲಿಂದ ಅವಿರತವಾಗಿ ಎಷ್ಟೋ ಮಂದಿ ಇಲ್ಲಿ ಕಲಿತಿದ್ದಾರೆ. ಅವರಿಗೆಲ್ಲ ಕನಿಷ್ಟ ಪ್ರಾಥಮಿಕ ಹಂತದ ಸಾಕ್ಷರತೆ ಬಂದಿರುವುದಕ್ಕೆ ನಮಗೆಲ್ಲ ಹೆಮ್ಮೆ ಎಂದರು.

ಎಐಟಿ ಕಾಲೇಜು ಪ್ರಾಂಶುಪಾಲ ಡಾ. ಸಿ.ಟಿ.ಜಯದೇವ ಮಾತನಾಡಿ, ಎಐಬಿಎಂ ಹಲವು ವರ್ಷಗಳಿಂದ ಎನ್‌ಎಸ್‌ಎಸ್ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ. ಸಮುದಾಯಕ್ಕಾಗಿ ಸೇವೆ ಎನ್ನುವುದು ಶಿಬಿರದ ಮೂಲ ಉದ್ದೇಶ. ಯಾವುದೇ ಕ್ಷಣದಲ್ಲಿ ಕರೆದರೂ ನಾವು ಸೇವೆಗೆ ಸದಾ ಸಿದ್ಧ ಎನ್ನುವುದನ್ನು ಶಿಬಿರದಲ್ಲಿ ಕಲಿಸಲಾಗುತ್ತದೆ ಎಂದರು.

ಕಾಲೇಜಿನಲ್ಲಿ ಕಲಿಯುವುದನ್ನು ಹೊರತುಪಡಿಸಿ ಪರಿಸರ ಸಂರಕ್ಷಣೆ, ಸ್ವಚ್ಛತೆ ಸೇರಿದಂತೆ ವಿವಿಧ ಸಾಮಾಜಮುಖಿ ಕಾರ್ಯಗಳನ್ನು ಇಲ್ಲಿ ಕೈಗೊಳ್ಳಬಹುದು. ಎನ್‌ಎಸ್‌ಎಸ್ ಶಿಬಿರಾರ್ಥಿಗಳಿಗೆ ಯಾವುದೇ ಜಾತಿ, ಮತ, ಪಂಥಗಳಿರುವುದಿಲ್ಲ. ಇಲ್ಲಿ ಎಲ್ಲರೂ ಒಂದೇ. ಸಮುದಾಯವನ್ನು ಹೇಗೆ ಬೆಳೆಸಬೇಕು. ಗ್ರಾಮದ ಪರಿಸ್ಥಿತಿ ಹೇಗಿದೆ. ಇನ್ನಷ್ಟು ಅಭಿವೃದ್ಧಿಗೆ ಏನು ಮಾಡಬಹುದು. ಜೊತೆಗೆ ಜ್ಞಾನವನ್ನು ಹೆಚ್ಚಿಸಿಕೊಳ್ಳು ಏನು ಮಾಡಬಹುದು ಎನ್ನುವುದನ್ನು ಸಮಾಲೋಚಿಸಲು ಶಿಬಿರವು ಉತ್ತಮ ವೇದಿಕೆ ಎಂದರು.

ಎಐಬಿಎಂನ ಪ್ರಾಂಶುಪಾಲ ಡಾ.ಕೆ.ಎಸ್.ಪ್ರಕಾಶ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಶಿಬಿರದ ಕಾರ್ಯಕ್ರಮಾಧಿಕಾರಿ ರಾಕೇಶ್ ಹೊಸಮನಿ, ಸಹ ಶಿಬಿರಾಧಿಕಾರಿ ತನುಜ, ಅರಿಸಿನಗುಪ್ಪೆ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಚಂದ್ರಶೇಖರ್, ಕಾಫಿಬೆಳೆಗಾರ ಜಯಕೀರ್ತಿ, ಗ್ರಾ.ಪಂ.ಅಧ್ಯಕ್ಷ ದೀಪಕ್, ಸದಸ್ಯರುಗಳಾದ ಶಿವಣ್ಣ, ಎಸ್‌ಡಿಎಂಸಿ ಸದಸ್ಯ ಚಂದ್ರಶೇಖರ್ ಉಪಸ್ಥಿತರಿದ್ದರು.

Special Anniversary Ceremony of Rashtriya Seva Yojana

About Author

Leave a Reply

Your email address will not be published. Required fields are marked *

You may have missed