September 19, 2024

ನೈರುತ್ಯ ಪದವೀಧರರ ವಿಧಾನ ಪರಿಷತ್ ಚುನಾವಣೆಯಲ್ಲಿ ತಮ್ಮ ಗೆಲುವು ನಿಶ್ಚಿತ

0
ಬಿಜೆಪಿ ಬಂಡಾಯ ಅಭ್ಯರ್ಥಿ ಉಡುಪಿ ಮಾಜಿ ಶಾಸಕ ಕೆ.ರಘುಪತಿ ಭಟ್ ಸುದ್ದಿಗೋಷ್ಠಿ

ಬಿಜೆಪಿ ಬಂಡಾಯ ಅಭ್ಯರ್ಥಿ ಉಡುಪಿ ಮಾಜಿ ಶಾಸಕ ಕೆ.ರಘುಪತಿ ಭಟ್ ಸುದ್ದಿಗೋಷ್ಠಿ

ಚಿಕ್ಕಮಗಳೂರು: ಪದವೀಧರರ ವಿಶ್ವಾಸ ಗಳಿಸಿದ್ದು, ಈ ಬಾರಿ ನೈರುತ್ಯ ಪದವೀಧರರ ವಿಧಾನ ಪರಿಷತ್ ಚುನಾವಣೆಯಲ್ಲಿ ತಮ್ಮ ಗೆಲುವು ನಿಶ್ಚಿತ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಉಡುಪಿ ಮಾಜಿ ಶಾಸಕ ಕೆ.ರಘುಪತಿ ಭಟ್ ಹೇಳಿದರು.

ಇಂದು ನಗರಕ್ಕಾಗಮಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ಕಣದಿಂದ ನಿವೃತ್ತಿ ಹೊಂದಲಿದ್ದೇವೆ ಎನ್ನುವ ವದಂತಿಯನ್ನು ಕೆಲವರು ಹಬ್ಬಿಸುತ್ತಿದ್ದಾರೆ ಅದು ಸುಳ್ಳು ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಕಾರ್ಯಕರ್ತರ ಬೆಂಬಲಿತ ಅಭ್ಯರ್ಥಿಯಾಗಿಯೇ ತಾವು ಕಣಕ್ಕಿಳಿದಿದ್ದೇವೆ. ನಾಡಿನ ಪ್ರಜ್ಞಾವಂತ ಪದವೀಧರರ ಮೂಲಭೂತ ಅಗತ್ಯತೆಗಳನ್ನು ಪ್ರಮಾಣಿಕವಾಗಿ ಪೂರೈಸುತ್ತೇನೆ ಎಂದು ಭರವಸೆ ನೀಡಿದರು.

ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ಮತಗಳಿಂದ ಪುನರಾಯ್ಕೆ ಆಗುವ ಅವಕಾಶ ನಮಗಿದ್ದರೂ ಬದಲಾದ ರಾಜಕೀಯ ಸನ್ನಿವೇಶದಿಂದಾಗಿ ಪಕ್ಷ ಸೂಚಿಸಿದ ಅಭ್ಯರ್ಥಿಯ ಪರವಾಗಿ ಕೆಲಸ ಮಾಡಿ ಅವರ ಗೆಲುವಿಗಾಗಿ ಶ್ರಮಿಸಿದ್ದೇನೆ ಎಂದು ತಿಳಿಸಿದರು.

ಲೋಕಸಭಾ ಚುನಾವಣೆಯಲ್ಲೂ ಶಿವಮೊಗ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದೇನೆ. ಪದವೀಧರ ಕ್ಷೇತ್ರದ ಪರಿಷತ್ ಚುನಾವಣೆಗೆ ಪಕ್ಷದಿಂದ ಟಿಕೆಟ್ ಬಯಸಿದ್ದೆ. ಆದರೆ ಪಕ್ಷ ಅವಕಾಶ ಕೊಡದ ಕಾರಣ ಪಕ್ಷದ ಕಾರ್ಯಕರ್ತರ ಒತ್ತಡದಿಂದಾಗಿ ಪಕ್ಷೇತರವಾಗಿ ಸ್ಪರ್ಧಿಸಿದ್ದೇನೆ ಎಂದು ಹೇಳಿದರು.

ಚುನಾವಣೆಯಲ್ಲಿ ತಮ್ಮನ್ನು ಆಯ್ಕೆ ಮಾಡಿದಲ್ಲಿ ಪದವೀಧರರಿಗೆ ಪದವಿ ನಂತರ ಕಾಡುವ ಉದ್ಯೋಗಕ್ಕೆ ನೆಟ್‌ವರ್ಕ್ ಡಾಟಾಬೇಸ್ ಸ್ಥಾಪಿಸುತ್ತೇನೆ. ಸರ್ಕಾರಿ ಹುದ್ದೆಗಳ ಪರೀಕ್ಷೆ ನಡೆದ ಕಾಲಮಿತಿಯಲ್ಲಿ ಫಲಿತಾಂಶಗಳ ಪ್ರಕಟ ಹಾಗೂ ಕ್ಷಿಪ್ರ ನೇಮಕಾತಿಗಾಗಿ ಒತ್ತಾಯಿಸುತ್ತೇನೆ ಎಂದು ಭರವಸೆ ನೀಡಿದರು.

ಪದವೀಧರರಿಗೆ ಸ್ವಉದ್ಯೋಗಕ್ಕಾಗಿ ಸಾಲ ಮುಂತಾದವುಗಳಿಗಾಗಿ ಸರ್ಕಾರಿ ಸಹಾಯಗಳಿಗಾಗಿ ಸಿಂಗಲ್ ವಿಂಡೋ ಸ್ಥಾಪನೆ, ಪದವೀಧರರಿಗೆ ಕನಿಷ್ಟ ಒಂದು ಕೌಶಲ್ಯ ತರಬೇತಿ, ಸ್ಥಳೀಯ ಜಿಲ್ಲೆಗಳಲ್ಲಿ ಉದ್ಯಮ ಬಯಸುವ ಪದವೀಧರರಿಗೆ ಪೂರಕ ಉದ್ಯಮ ವಲಯದ ಸೃಷ್ಠಿಗೆ ಕ್ರಮಕ್ಕಾಗಿ ಸರ್ಕಾರದ ಮಟ್ಟದಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ರಾಜಕೀಯ ಕ್ಷೇತ್ರದಲ್ಲಿ ಜನರ ಸಂಕಷ್ಟಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದೇನೆ. ಮೂರು ಬಾರಿ ಉಡುಪಿ ಶಾಸಕನಾಗಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಕಣ್ಣಮುಂದಿವೆ ಇದೆಲ್ಲವನ್ನು ಪರಿಗಣಿಸಿ ಈ ಚುನಾವಣೆಯಲ್ಲಿ ಪದವೀಧರರು ನಮ್ಮನ್ನು ಬೆಂಬಲಿಸಬೇಕು ಎಂದು ಮನವಿ ಮಾಡುತ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ, ಲಕ್ಷ್ಮೀಶ, ಸುಬ್ಬರಾವ್, ಅನಂತ್, ತುಡುಕೂರು ಮಂಜು ಉಪಸ್ಥಿತರಿದ್ದರು.

BJP rebel candidate Udupi former MLA K. Raghupathi Bhat press conference

About Author

Leave a Reply

Your email address will not be published. Required fields are marked *

You may have missed