September 19, 2024

ಜಿಲ್ಲೆಯ ಮಳೆಯ ಸ್ಥಿತಿಗತಿಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ವಿಡಿಯೋ ಕಾನ್ಫೆರೆನ್ಸ್

0
ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ವಿಡಿಯೋ ಕಾನ್ಫೆರೆನ್ಸ್

ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ವಿಡಿಯೋ ಕಾನ್ಫೆರೆನ್ಸ್

ಚಿಕ್ಕಮಗಳೂರು: : ೨೦೨೪-೨೫ನೇ ಸಾಲಿನ ಮುಂಗಾರು ಅವಧಿಯಲ್ಲಿ ಸಂಭವಿಸಬಹುದಾದ ವಿಪತ್ತುಗಳ ಬಗ್ಗೆ ಮುಂಜಾಗ್ರತಾ ಪೂರ್ವ ಸಿದ್ಧತೆ ಹಾಗೂ ಪರಿಹಾರ ಕ್ರಮಗಳ ಕುರಿತು ಇಂದು ಇಂಧನ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಜೆ. ಜಾರ್ಜ್ ರವರು ವಿಡಿಯೋ ಕಾನ್ಫೆರೆನ್ಸ್ ಮೂಲಕ ಜಿಲ್ಲಾಧಿಕಾರಿಗಳ ಕಛೇರಿ ಕೆಸ್ವಾನ್ ವಿಡಿಯೋ ಕೇಂದ್ರದ ಮೂಲಕ ಜಿಲ್ಲೆಯಲ್ಲಿ ಇಲ್ಲಿಯವರೆಗೂ ಆಗಿರುವ ಮಳೆ ಮತ್ತು ಇತರೆ ಸ್ಥಿತಿಗತಿಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.

ನಂತರ ಇದಕ್ಕೆ ಸಂಬಂಧಿಸಿದಂತೆ ಸಚಿವರು ಮಾತನಾಡಿ ಮಳೆ ಬೀಳುವ ಪ್ರದೇಶಗಳಲ್ಲಿ ಹಾಗೂ ಇತರೆ ಭಾಗಗಳಲ್ಲಿಯೂ ಕೂಡ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದ ಅವರು ರಸ್ತೆ ಬದಿಯ ಮರಗಳನ್ನು ತೆರವುಗೊಳಿಸುವುದು ಸೇರಿದಂತೆ ರಸ್ತೆಗಳ ಮೇಲೆ ಮಳೆ ನೀರು ಹರಿಯದಂತೆ ವೈಜ್ಞಾನಿಕವಾಗಿ ಚರಂಡಿಯನ್ನು ತೆಗೆದು ಸಮರ್ಪಕವಾಗಿ ನೀರು ಹೊರ ಹೋಗಲು ಕ್ರಮಕೈಗೊಳ್ಳಬೇಕು ಎಂದು ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಡಳಿತ ಹಾಗೂ ಎಲ್ಲಾ ತಾಲ್ಲೂಕ್ ಮತ್ತು ಗ್ರಾಮ ಪಂಚಾಯತಿಗಳಲ್ಲಿಯೂ ಕೂಡ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸಿದ್ಧತೆ ಮಾಡಿಕೊಳ್ಳಬೇಕು. ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ಔಷಧಿ, ರಸಗೊಬ್ಬರಗಳನ್ನು ಹಾಗೂ ಯಂತ್ರೋಪಕರಣಗಳನ್ನು ಕೊರತೆಯಾಗದಂತೆ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಹಿಡಿದು ಗ್ರಾಮ ಮಟ್ಟದ ಅಧಿಕಾರಿಗಳ ತನಕ ೨೪/೭ ಗಂಟೆಗಳಲ್ಲಿ ಕೆಲಸ ಮಾಡಲು ನೋಡಿಕೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.

ಗ್ರಾಮ ಮಟ್ಟದಲ್ಲಿ ಹೆಚ್ಚಿನ ಅನಾಹುತ ಕಂಡು ಬಂದಲ್ಲಿ ತಕ್ಷಣ ಮೇಲಾಧಿಕಾರಿಗಳಿಗೆ ಅಥವಾ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅತೀವೃಷ್ಟಿ ಸಂದರ್ಭದಲ್ಲಿ ಸಂಭವಿಸಬಹುದಾದ ವಿಪತ್ತುಗಳನ್ನು ನಿಭಾಯಿಸಲು ಎಲ್ಲಾ ಅಧಿಕಾರಿಗಳು ಸನ್ನದ್ಧರಾಗಿರಬೇಕು. ಮತ್ತು ಮೆಸ್ಕಾಂ, ಅರಣ್ಯ, ಪಿಡಬ್ಲ್ಯೂಡಿ, ಪಿಆರ್‌ಇಡಿ, ಪಶುಸಂಗೋಪನೆ ಇಲಾಖೆ, ಕೃಷಿ, ತೋಟಗಾರಿಕೆ, ಮತ್ತಿತರ ಇಲಾಖೆಗಳು ಸಂಪೂರ್ಣ ಸಿದ್ಧತೆಗಳನ್ನು ತಯಾರಿಸಿಕೊಂಡಿರಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ಮಳೆಗಾಲದ ಮುಂಜಾಗ್ರತಾ ಕ್ರಮಗಳ ಬಗ್ಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಸಚಿವರ ಗಮನಕ್ಕೆ ಈ ಕೆಳಕಂಡ ಅಂಶಗಳನ್ನು ಗಮನಕ್ಕೆ ತಂದಿರುತ್ತಾರೆ.

೨೦೨೪ನೇ ಸಾಲಿನ ಮುಂಗಾರು ಸಂದರ್ಭದಲ್ಲಿ ಸಂಭವಿಸಬಹುದಾದ ವಿಪತ್ತುಗಳನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾ ವಿಪತ್ತು ನಿರ್ವಾಹಣಾ ಪ್ರಾಧಿಕಾರದ ಸಭೆಗಳನ್ನು ನಡೆಸಲಾಗಿದೆ ಎಂದ ಅವರು. ಇದರ ಸಮರ್ಪಕ ನಿರ್ವಹಣೆಗಾಗಿ ಜಿಲ್ಲೆಯಲ್ಲಿ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲು ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕಳೆದ ನಾಲ್ಕು ವರ್ಷಗಳ ಸಾಲಿನ ಅತೀವೃಷ್ಟಿಯಿಂದ ಉಂಟಾದ ಭೂಕುಸಿತ ಹಾಗೂ ಹಾನಿಗಳ ಆಧಾರದ ಮೇರೆಗೆ ಈಗಾಗಲೇ ಜಿಲ್ಲೆಯಲ್ಲಿ ಅಂತಹ ಪ್ರದೇಶಗಳನ್ನು ಗುರುತಿಸಿ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆಯಲಾಗಿದೆ ಎಂದರು.

ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿಯೂ ವಿಪತ್ತಿನ ಸಮಯದಲ್ಲಿ ಸಂತ್ರಸ್ತರನ್ನು ಸ್ಥಳಾಂತರಿಸಲು ಸುಸ್ಥಿತಿ ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದ್ದು, ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಲಾಗಿದೆ. ಎನ್ ಡಿ ಆರ್ ಎಫ್ ನಿಂದ ತರಬೇತಿ ಪಡೆದ ಜಿಲ್ಲೆಯಲ್ಲಿರುವ ಸ್ವಯಂ ಸೇವಕರನ್ನು ಗುರುತಿಸಲಾಗಿದೆ. ಗ್ರಾಮ ಪಂಚಾಯತ್ ಮಟ್ಟದಲ್ಲಿ ಟಾಸ್ಕ್‌ಪೋರ್ಸ್ ಸಮಿತಿಗಳಿಗೆ ವಿಪತ್ತು ಸಮಯದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ಕುರಿತು ತರಬೇತಿಯನ್ನು ಸಹ ನೀಡಲಾಗಿದೆ. ವಿವಿಧ ಇಲಾಖೆಗಳಲ್ಲಿರುವ ವಿಪತ್ತು ನಿರ್ವಹಣಾ ಸಾಮಾಗ್ರಿಗಳ ಮಾಹಿತಿ ಪಡೆಯಲಾಗಿದೆ ಎಂದರು.

ಈಗಾಗಲೇ ರಸ್ತೆ ಬದಿಯಲ್ಲಿರುವ ಬೀಳುವ ಸ್ಥಿತಿಯಲ್ಲಿರುವ ಮರಗಳನ್ನು ತೆರವುಗೊಳಿಸು ಅರಣ್ಯ ಇಲಾಖೆಗೆ ತಿಳಿಸಲಾಗಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ೨೪*೭ ಕಂಟ್ರೋಲ್ ರೂಂಗಳನ್ನು ತೆರಯಲಾಗಿದ್ದು, ವಿಪತ್ತು ನಿರ್ವಹಣೆಗೆ ಅವಶ್ಯವಿರುವ ಎಲ್ಲಾ ರೀತಿಯ ಉಪಕರಣಗಳನ್ನು ವ್ಯವಸ್ಥೆ ಮಾಡಿ ಅವಶ್ಯವಿರುವ ವೈದ್ಯಕೀಯ ಉಪಕರಣಗಳು / ಔಷಧಿಗಳು ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಇಲ್ಲಿಯವರೆಗೂ ಮಳೆ ಹಾನಿಯಿಂದಾದ ಎರಡು ಜಾನುವಾರುಗಳು, ಎರಡು ಜನ ಮರ ಬಿದ್ದು ಸಾವನ್ನಪ್ಪಿದ್ದು, ಒಂದು ಸಿಡಿಲು ಬಡಿದು ಮೃತಪಟ್ಟಿದ್ದು, ೦೧ ವಿದ್ಯುತ್ ಸ್ಪರ್ಶದಿಂದ ಸಾವು, ಒಟ್ಟು ನಾಲ್ವರು ಮೃತಪಟ್ಟಿದ್ದಾರೆ. ರೈತರು ಬೆಳೆದ ಬೆಳೆಗಳು ಸ್ವಲ್ಪ ಮಟ್ಟಿನ ಹಾನಿಯಾಗಿದ್ದು, ಇವುಗಳ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗಿದೆ. ಕೃಷಿ ತೋಟಗಾರಿಕೆ ಬೆಳೆಗಳಿಗೆ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಎಂಆರ್‌ಪಿ ದರದಲ್ಲಿ ಮಾರಾಟ ಮಾಡಲು ಹಾಗೂ ಯಾವುದೇ ಕೊರತೆಯಾಗದಂತೆ ಕ್ರಮಕೈಗೊಳ್ಳಲಾಗಿದೆ. ಎಲ್ಲಾ ತಾಲ್ಲೂಕುಗಳ ತಹಸೀಲ್ದಾರ್ ರವರ ಪಿಡಿ ಖಾತೆಯಲ್ಲಿ ೩೫೦.೭೭ ಲಕ್ಷ ರೂಗಳು ಸೇರಿದಂತೆ ಮತ್ತು ಜಿಲ್ಲಾಧಿಕಾರಿಗಳ ಖಾತೆಯಲ್ಲಿ ೬.೯ ಕೋಟಿ ರೂಗಳ ಹಣ ಇದೆ ಎಂದರು.

ಮಳೆ ಹೆಚ್ಚಾದ ಪ್ರದೇಶಗಳಲ್ಲಿ ಒಟ್ಟು ೧೬ ಸೇತುವೆಗಳು ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡು ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ಗುರುತಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮಲೆನಾಡು ಭಾಗದಲ್ಲಿ ಪಿಆರ್‌ಇಡಿ ಇಲಾಖೆಯಿಂದ ೪೮ ಕಾಲು ಸುಂಕಗಳನ್ನು ಹಾಗೂ ಪಿಡಬ್ಲ್ಯೂಡಿ ಇಲಾಖೆಯಿಂದ ೧೮೦ ಕಾಲು ಸುಂಕಗಳ ಸಾರ್ವಜನಿಕರ ಬೇಡಿಕೆಗಳಿದ್ದು, ಇವುಗಳನ್ನು ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆರೋಗ್ಯ ಇಲಾಖೆಯಿಂದ ಡೆಂಗ್ಯೂ ಮತ್ತಿತರ ಖಾಯಿಲೆಗಳಿಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವರ ಗಮನಕ್ಕೆ ತಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಂ ಅಮಟೆ, ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಮತ್ತಿತರ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Video conference by district in-charge minister about rain conditions in the district

About Author

Leave a Reply

Your email address will not be published. Required fields are marked *

You may have missed