September 19, 2024

The investigation of the case should be entrusted to the NIA: ಅನಾಹುತ ಸೃಷ್ಠಿಸಲು ಸಂಚು ರೂಪಿಸಿದ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಬೇಕು

0

ಚಿಕ್ಕಮಗಳೂರುಎಕ್ಸ್‌ಪ್ರೆಸ್: ದತ್ತ ಜಯಂತಿ ಅಂಗವಾಗಿ ನಡೆದ ಅನಸೂಯ ಜಯಂತಿ ಉತ್ಸವದ ದಿನದಂದು ದತ್ತಪೀಠದ ರಸ್ತೆಗೆ ಮೊಳೆಗಳನ್ನು ಚೆಲ್ಲಿ ಅನಾಹುತ ಸೃಷ್ಠಿಸಲು ಸಂಚು ರೂಪಿಸಿದ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಬೇಕು ಎಂದು ವಿಶ್ವಹಿಂದೂ ಪರಿಷತ್-ಬಜರಂಗದಳ ಒತ್ತಾಯಿಸಿದೆ.

ಶುಕ್ರವಾರ ಬಜರಂಗದಳದ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ ರಘು ಸಕಲೇಶಪುರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಇಬ್ಬರು ಆರೋಪಿಗಳಿಗೆ ನಿಷೇಧಿತ ಉಗ್ರ ಸಂಘಟನೆ ಪಿಎಫ್‌ಐ ನಂಟಿದೆ. ಮಂಗಳೂರಿನ ಪಡೀಲ್‌ನಲ್ಲಿ ನಡೆದ ಕುಕ್ಕರ್ ಸ್ಪೋಟದಲ್ಲಿ ಭಾಗಿಯಾದವರ ಮಾನಸಿಕತೆಯೇ ಇಲ್ಲೂ ಕುಕೃತ್ಯ ಎಸಗಿದೆ. ಈ ಹಿನ್ನೆಲೆಯಲ್ಲಿ ಇದರ ತನಿಖೆಗೆ ಪೊಲೀಸರು ವಿಶೇಷ ತಂಡ ನೇಮಿಸಬೇಕು. ಇಲ್ಲವಾದಲ್ಲಿ ಎನ್‌ಐಎಗೆ ವಹಿಸಬೇಕು ಎಂದು ಒತ್ತಾಯಿಸಿದರು.

ಪ್ರಕರಣವು ಬಂಧಿತ ಇಬ್ಬರಿಗೆ ಮಾತ್ರ ಸೀಮಿತವಾಗಿಲ್ಲ. ಇನ್ನೂ ಅನೇಕರು ಇದರಲ್ಲಿ ಸಂಚು ರೂಪಿಸಿದ್ದಾರೆ ಎಂದು ಪೊಲೀಸ್ ಇಲಾಖೆ ಹೇಳಿದೆ. ಅವರನ್ನೆಲ್ಲಾ ತಕ್ಷಣ ಬಂಧಿಸಬೇಕು. ಆರೋಪಿಗಳಿಗೆ ಯಾವ ನಿಷೇಧಿತ ಸಂಘಟನೆಗಳ ಜೊತೆ ಸಂಬಂಧವಿದೆ ಎನ್ನುವುದನ್ನು ಪತ್ತೆ ಹಚ್ಚಬೇಕು. ದೇಶದ್ರೋಹದ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

ದುಷ್ಕರ್ಮಿಗಳು ಅನಸೂಯ ಜಯಂತಿಯಂದು ಮಹಿಳೆಯರನ್ನು ಗುರಿಯಾಗಿಸಿಕೊಂಡು ಅವರ ವಾಹನಗಳನ್ನು ಪಂಕ್ಚರ್ ಮಾಡಿ ಪ್ರಪಾತಕ್ಕೆ ಉರುಳಿಸುವ ಸಂಚು ಮಾಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಗೃಹ ಮಂತ್ರಿಗಳು ಹಾಗೂ ಎಡಿಜಿಪಿಯವರಿಗೂ ಮನವಿಯನ್ನು ಸಲ್ಲಿಸಿ ತನಿಖೆಗೆ ಆಗ್ರಹಿಸುತ್ತೇವೆ ಎಂದು ತಿಳಿಸಿದರು.

ದತ್ತಪೀಠದಲ್ಲಿ ಹಿಂದೂ ಅರ್ಚಕರನ್ನು ನೇಮಕ ಮಾಡಿ, ಹಿಂದೂ ಪದ್ಧತಿಯಂತೆ ಪೂಜೆ, ಪುನಸ್ಕಾರಕ್ಕೆ ಅವಕಾಶ ಮಾಡಿಕೊಟ್ಟ ಉಚ್ಛನ್ಯಾಯಾಲಯದ ಆದೇಶ ಮತ್ತು ಅದರನ್ವಯ ರಾಜ್ಯ ಸರ್ಕಾರ ಮಾಡಿದ ಕಾರ್ಯ ಯೋಜನೆಯಿಂದ ಹತಾಶರಾಗಿದ್ದ ಕೆಲ ದುಷ್ಕರ್ಮಿಗಳು ದತ್ತ ಜಯಂತಿ ಮತ್ತು ಅನಸೂಯಾ ಜಯಂತಿಯನ್ನು ಹಾಳುಗೆಡವಬೇಕು ಎಂಬ ದುರುದ್ದೇಶದಿಂದ ವ್ಯವಸ್ಥಿತವಾಗಿ ಷಡ್ಯಂತ್ರ ಮಾಡಿ ದೊಡ್ಡ ಅನಾಹುತ ನಡೆಸುವ ಪಿತೂರಿ ಮುರಿದುಬಿದ್ದಿದೆ ಎಂದರು.

ಸಂವಿಧಾನದಡಿಯಲ್ಲಿ ವಿರೋಧ ಮಾಡುವ ಹಕ್ಕು ಎಲ್ಲರಿಗೂ ಇದೆ. ಪ್ರತಿಭಟನೆ, ವಿರೋಧ ವ್ಯಕ್ತಪಡಿಸುವ ಬದಲು ದೊಡ್ಡ ಸಾವು, ನೋವಿಗೆ ಕಾರಣವಾಗಿ ಹಿಂದೂ ಸಮಾಜವನ್ನು ಭಯಭೀತಗೊಳಿಸುವ ದುರುದ್ದೇಶ ಆರೋಪಿಗಳದ್ದಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನ್ಯಾಯಾಲಯದ ಆದೇಶದ ಮೇರೆಗೆ ರಾಜ್ಯ ಸರ್ಕಾರವು ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ದತ್ತಪೀಠದಲ್ಲಿ ವ್ಯವಸ್ಥಾಪನಾ ಸಮಿತಿ ರಚಿಸಿ ಅರ್ಚಕರ ನೇಮಕ, ಪೂಜೆ ಪುನಸ್ಕಾರ ಎಲ್ಲವನ್ನೂ ಸಮಿತಿ ಮೂಲಕ ನಡೆಸುತ್ತಿದ್ದರೂ ಕೆಲವರು ವಿನಾ ಕಾರಣ ಗೊಂದಲ ಸೃಷ್ಠಿಸಲು ಪ್ರಯತ್ನಿಸುತ್ತಿದಾರೆ. ರಾಜ್ಯ ಮತ್ತು ದೇಶದೆಲ್ಲೆಡೆಯಿಂದ ಭಕ್ತರು ನಿರಂತರವಾಗಿ ಪೀಠಕ್ಕೆ ಆಗಮಿಸಬೇಕು ಪೂಜೆ, ಪುನಸ್ಕಾರ, ಅಭಿಷೇಕಗಳಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡುತ್ತೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ವಿಶ್ವಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಯೋಗೀಶ್ ರಾಜ್ ಅರಸ್, ಬಜರಂಗದಳ ಜಿಲ್ಲಾ ಸಂಚಾಲಕ ಆರ್.ಡಿ.ಮಹೇಂದ್ರ, ಶ್ಯಾಂ ವಿ.ಗೌಡ, ಅಮಿತ್ ಇದ್ದರು.

The investigation of the case should be entrusted to the NIA

About Author

Leave a Reply

Your email address will not be published. Required fields are marked *

You may have missed