September 19, 2024

ನೈರುತ್ಯ ಪದವೀಧರ-ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳು ಸಜ್ಜನರು

0
ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಸುದ್ದಿಗೋಷ್ಠಿ

ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಸುದ್ದಿಗೋಷ್ಠಿ

ಚಿಕ್ಕಮಗಳೂರು: ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿಗಳು ಸಜ್ಜನರಾಗಿದ್ದು, ಶಿಕ್ಷಕರು ಮತ್ತು ಪದವೀಧರರ ಸಮಸ್ಯೆಗಳ ಬಗ್ಗೆ ಸದನದಲ್ಲಿ ಧ್ವನಿ ಎತ್ತಲಿದ್ದಾರೆ. ಹೀಗಾಗಿ ಅವರನ್ನು ಬೆಂಬಲಿಸಬೇಕು ಎಂದು ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಮನವಿ ಮಾಡಿದರು.

ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಜಿಲ್ಲೆಯವರೇ ಆಯ್ಕೆಯಾಗಿದ್ದರೂ. ಅವರ ಕೊಡುಗೆ ಶೂನ್ಯ. ಸ್ವತಃ ಶಿಕ್ಷಕರಾಗಿದ್ದ ಕೆ.ಕೆ.ಮಂಜುನಾಥ್ ಕುಮಾರ್ ಅವರು ಶಿಕ್ಷಕ ಕುಟುಂಬದಿಂದ ಬಂದವರು. ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ್ ಅವರು ವಿಧಾನಸಭೆ, ವಿಧಾನಪರಿಷತ್ತು, ಲೋಕಸಭೆಯನ್ನು ಪ್ರತಿನಿಧಿಸಿದ್ದವರು. ಉತ್ತಮ ವಾಗ್ಮಿ, ವೈಚಾರಿಕ ಹಿನ್ನೆಲೆಯಲ್ಲಿ ಮಾತನಾಡುವವರು. ಈ ಇಬ್ಬರೂ ಸೂಕ್ತ ಅಭ್ಯರ್ಥಿಗಳಾಗಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ಇವರಿಗೆ ಸರಿಸಾಟಿಯಿಲ್ಲ ಎಂದರು.

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿ ನಮ್ಮ ಕಾಂಗ್ರೆಸ್ ಅಭ್ಯರ್ಥಿಯನ್ನು ಡಮ್ಮಿ ಅಭ್ಯರ್ಥಿ ಎಂದು ಹೇಳಿದ್ದಾರೆ. ಇನ್ನು ಮುಂದೆ ಆ ರೀತಿ ಹೇಳಿಕೆ ನೀಡಿದರೆ ಪ್ರತ್ಯುತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮಾಜಿ ಶಾಸಕ ಸಿ.ಟಿ.ರವಿ ಚುನಾವಣೆಯಲ್ಲಿ ಸೋತಾಗ ಇದೇ ಅಭ್ಯರ್ಥಿ ಹಾಲಿನ ಅಭಿಷೇಕ ಮಾಡಿಕೊಂಡಿದ್ದರು. ಈಗ ಯಾವ ಮುಖ ಇಟ್ಟುಕೊಂಡು ಬಿಜೆಪಿಯವರು ಅವರನ್ನು ಬೆಂಬಲಿಸುತ್ತಾರೆ. ಮೈತ್ರಿ ಅಭ್ಯರ್ಥಿ ಪರ ಮತ ಕೇಳಲು ಬಿಜೆಪಿಯವರಿಗೆ ಯಾವುದೇ ನೈತಿಕತೆ ಉಳಿದಿಲ್ಲ. ಸಿ.ಟಿ.ರವಿಗೆ ಸ್ವಾಭಿಮಾನವಿದ್ದರೆ ಅವರು ಯಾವಾಗ ಹಾಲಿನ ಅಭಿಷೇಕ ಮಾಡಿ ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳಲಿದ್ದಾರೆ ಎಂದು ಪ್ರಶ್ನಿಸಿದರು.

ಕೆಪಿಸಿಸಿ ವಕ್ತಾರ ರವೀಶ್ ಬಸಪ್ಪ ಮಾತನಾಡಿ, ಈ ಚುನಾವಣೆಯಲ್ಲಿ ದಲ್ಲಾಳಿಗಳ ಆಯ್ಕೆಗೆ ಅವಕಾಶ ನೀಡಬಾರದು. ಶಿಕ್ಷಕರು ಮತ್ತು ಪದವೀಧರರ ಗೌರವ ಘನತೆ ಹೆಚ್ಚಿಸುವವರನ್ನು ಆರಿಸುವ ಜವಾಬ್ದಾರಿ ಎಲ್ಲಾ ಶಿಕ್ಷಕ, ಪದವೀಧರರ ಮೇಲಿದೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರೇಖಾ ಹುಲಿಯಪ್ಪಗೌಡ ಮಾತನಾಡಿ, ನೈರುತ್ಯ ಪದವಿ ಮತ್ತು ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವುದು ನಿಶ್ಚಿತ. ಒಪಿಎಸ್ ಜಾರಿ ಮಾಡುವ ಭರವಸೆಯನ್ನು ಕಾಂಗ್ರೆಸ್ ನೀಡಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಶಾಂತಕುಮಾರ್, ತನೋಜ್‌ನಾಯ್ಡು, ಸಿ.ಎನ್ ಅಕ್ಮಲ್ ಇದ್ದರು.

The Congress candidates from South West Graduate-Teacher Constituency are gentlemen

About Author

Leave a Reply

Your email address will not be published. Required fields are marked *

You may have missed