September 19, 2024

Smart Class in Government High Schools: ಜಿಲ್ಲೆಯ ಎಲ್ಲಾ ಸರ್ಕಾರಿ ಪ್ರೌಢಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಆರಂಭಿಸುವ ಕಾರ್ಯ ನಡೆಯುತ್ತಿದ್ದು, ರಾಜ್ಯದಲ್ಲೇ ಇದು ಮಾದರಿಯಾಗಿದೆ-ಶಿಖಾ

0

ಚಿಕ್ಕಮಗಳೂರುಎಕ್ಸ್‌ಪ್ರೆಸ್: ಜಿಲ್ಲೆಯ ಎಲ್ಲಾ ಸರ್ಕಾರಿ ಪ್ರೌಢಶಾಲೆಗಳಲ್ಲಿ ಜಿಲ್ಲಾಡಳಿತ, ಜಿ.ಪಂ. ವತಿಯಿಂದ ಸ್ಮಾರ್ಟ್ ಕ್ಲಾಸ್ ಆರಂಭಿಸುವ ಕಾರ್ಯ ನಡೆಯುತ್ತಿದ್ದು, ರಾಜ್ಯದಲ್ಲೇ ಇದು ಮಾದರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯಕದರ್ಶಿ ಶಿಖಾ ತಿಳಿಸಿದರು.

ಅವರು ಗುರುವಾರ ತಾಲ್ಲೂಕಿನ ಮೂಗ್ತಿಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ಮಾರ್ಟ್‌ಕ್ಲಾಸ್ ಉದ್ಘಾಟಿಸಿ ಮಾತನಾಡಿದರು.ಸ್ಮಾರ್ಟ್ ಕ್ಲಾಸ್‌ಗಳಿಂದ ಮಕ್ಕಳಿಗೆ ಸರಳವಾದ ಕಲಿಕೆಗೆ ಅನುಕೂಲವಾಗಲಿದೆ. ಗಣಿತ ಮತ್ತು ವಿಜ್ಞಾನದಂತಹ ಕ್ಲಿಷ್ಠಕರ ವಿಷಯಗಳ ಸರಳ ಬೋದನೆಗೆ ಸ್ಮಾರ್ಟ್ ಕ್ಲಾಸ್ ಅತ್ಯುತ್ತಮ ಮಾಧ್ಯಮವಾಗಿದೆ. ಸಿಎಸ್‌ಆರ್ ಅಡಿಯಲ್ಲಿ ಈ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ. ನಿಜಕ್ಕೂ ಇದು ಶ್ಲಾಘನೀಯವಾಗಿದ್ದು, ಎಲ್ಲಾ ಜಿಲ್ಲೆಗಳಲ್ಲೂ ಈ ರೀತಿಯ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು ಎಂದು ಕೇಳಿಕೊಳ್ಳುತ್ತೇನೆ ಎಂದರು.

ಜಿ.ಪಂ. ಸಿಇಓ ಜಿ.ಪ್ರಭು ಮಾತನಾಡಿ, ಸರ್ಕಾರಿ ಶಾಲೆಯ ಆವರಣವನ್ನು ಎಲ್ಲಾ ರೀತಿ ಅಭಿವೃದ್ಧಿ ಪಡಿಸಬೇಕು ಎನ್ನುವ ಕಾರ್ಯಕ್ರಮವನ್ನು ಜಿ.ಪಂ. ಹಾಗೂ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಅದನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿಖಾ ಅವರು ಸಾಂಕೇತಿಕವಾಗಿ ವೀಕ್ಷಿಸಿದ್ದಾರೆ ಎಂದರು.
ಶಾಲೆ ಆವರಣದಲ್ಲೇ ಅಂಗನವಾಡಿ, ಉತ್ತಮ ಶಾಲೆ ಕೊಠಡಿಗಳು, ಒಳ್ಳೆಯ ಹೂದೋಟ, ಸುಸಜ್ಜಿತವಾದ ಆಟದ ಮೈದಾನ, ಸ್ಮಾರ್ಟ್ ತರಗತಿ, ದಾಸೋಹ ಭವನ, ಶೌಚಾಲಯ ಹೀಗೆ ಎಲ್ಲವನ್ನೂ ಸಮಗ್ರವಾಗಿ ಅಭಿವೃದ್ಧಿ ಪಡಿಬೇಕೆನ್ನುವ ಯೋಜನೆಯನ್ನು ಹಾಕಿಕೊಂಡು ಜಿ.ಪಂ., ಜಿಲ್ಲಾಡಳಿತ ಸೇರಿ ಹಂತ ಹಂತವಾಗಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ತಿಳಿಸಿದರು.

ಈ ವರ್ಷ ಎಲ್ಲಾ ಶಾಲೆಗಳಿಗೆ ಸುಸಜ್ಜಿತ ಕಾಂಪೌಂಡ್ ಹಾಗೂ ಶೌಚಾಲಯವನ್ನು ಕಡ್ಡಾಯಗೊಳಿಸಲಾಗಿದೆ. ಜಿಲ್ಲೆಯಲ್ಲಿ ಸುಮಾರು ೮೦೦ ರಿಂದ ೯೦೦ ಶಾಲೆಗಳು ಕಾಮಗಾರಿ ಪ್ರಾರಂಭವಾಗಿವೆ. ಕೆಲವು ಶಾಲೆಗಳಲ್ಲಿ ಕಾಮಗಾರಿ ಮುಕ್ತಾಯವಾಗಿದ್ದು, ಪ್ರಗತಿಯತ್ತ ಸಾಗುತ್ತಿವೆ ಎಂದು ತಿಳಿಸಿದರು.

ಸುಮಾರು ೩೦೦ ಶಾಲೆಗಳಲ್ಲಿ ದಾಸೋಹ ಭವನಗಳನ್ನು ನಿರ್ಮಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ೧೫೦ ಶಾಲೆಗಳಲ್ಲಿ ಕಾಮಗಾರಿ ಪ್ರಾರಂಭವಾಗಿದೆ. ಉಳಿದವು ಸಧ್ಯದಲ್ಲೇ ಪ್ರಾರಂಭವಾಗಲಿದೆ. ಇದೇ ವೇಳೆ ಸ್ಮಾರ್ಟ್ ತರಗತಿ ಮೂಲಕ ಗುಣಾತ್ಮಕ ಶಿಕ್ಷಣ ಕೊಡುವುದು ನಮ್ಮ ಆಧ್ಯತೆಯಾಗಿದೆ. ಈ ಹಿನ್ನೆಲೆಯಲ್ಲಿ ಹೊರಗಡೆ ಮಕ್ಕಳನ್ನು ಕರೆದೊಯ್ದು ಅವರಿಗೆ ಬಾಹ್ಯ ಪ್ರಪಂಚದ ಮೂಲಕ ಜ್ಞಾನವನ್ನು ತುಂಬುವ ಅನುಭವಾತ್ಮಕ ಕಲಿಕೆ ನೀಡಲು ಎಲ್ಲಾ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಯಾವ ಪಾಠಗಳು ಪುಸ್ತಕದಲ್ಲಿ ಬೋಧನೆ ಮೂಲಕ ಅರ್ಥವಾಗುವುದು ಕಷ್ಟವಾಗುತ್ತದೋ ಅಂತಹ ಪಾಠವನ್ನು ಸಾಕ್ಷ್ಯ ಚಿತ್ರದ ಮೂಲಕ ತೋರಿಸುವ ಸ್ಮಾರ್ಟ್ ಕ್ಲಾಸ್ ಆರಂಭಿಸಲಾಗುತ್ತಿದೆ. ಇವನ್ನು ದಾನಿಗಳು ಮತ್ತು ದೊಡ್ಡ ದೊಡ್ಡ ಕಂಪನಿಗಳ ಸಹಭಾಗಿತ್ವ ಜೊತೆಗೆ ಸೆಲ್ಕೋ ಕಂಪನಿ ಸದಾ ಕೈಜೋಡಿಸುತ್ತಿದೆ. ಪ್ರತಿ ಸ್ಮಾರ್ಟ್ ಕ್ಲಾಸ್‌ಗೆ ತಲಾ ಸುಮಾರು ೨ ಲಕ್ಷ ರೂ. ವೆಚ್ಚ ತಗುಲುತ್ತದೆ. ಅದಕ್ಕೆ ಸೆಲ್ಕೋ ಕಂಪನಿ ೧ ಲಕ್ಷ ರೂ. ಸಹಾಯಧನ ನೀಡುತ್ತಿದೆ. ಇದಲ್ಲದೆ ಪ್ರತಿ ಗ್ರಾ.ಪಂ.ನಿಂದ ೧ ಲಕ್ಷವನ್ನು ಜಿ.ಪಂ.ವತಿಯಿಂದ ಜೋಡಿಸಿ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದರು.

ಈ ವೆರೆಗೆ ಸುಮಾರು ೧೭೦೦ ಅಂಗನವಾಡಿಗಳಿಗೆ ಸೌಲಭ್ಯ ಕೊಡಲಾಗಿದೆ ಉಳಿದ ೬೫ ಅಂಗನವಾಡಿಗಳಿಗೆ ಸಧ್ಯದಲ್ಲೇ ಸೌಲಭ್ಯ ನೀಡಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಆರ್.ರೂಪಾ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ತಾರನಾಥ್, ತಹಸಿಲ್ದಾರ್ ವಿನಯ್ ಸಾಗರ್, ಪಿಡಿಓ ಕಿರಣ್, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

Smart Class in Government High Schools

About Author

Leave a Reply

Your email address will not be published. Required fields are marked *

You may have missed