September 19, 2024

ಪದವೀಧರನಾಗಿ ಮತಹಾಕಿ ಕರ್ತವ್ಯ ನಿರ್ವಹಿಸಿದ್ದೇನೆ

0
ಶಿಕ್ಷಕರ ಹಾಗೂ ಪದವೀಧರ ಚುನಾವಣೆಯಲ್ಲಿ ಶಾಸಕ ಸಿ.ಟಿ ರವಿ ಮತ ಚಲಾವಣೆ

ಶಿಕ್ಷಕರ ಹಾಗೂ ಪದವೀಧರ ಚುನಾವಣೆಯಲ್ಲಿ ಶಾಸಕ ಸಿ.ಟಿ ರವಿ ಮತ ಚಲಾವಣೆ

ಚಿಕ್ಕಮಗಳೂರು: ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಪದವೀಧರನಾಗಿ ಮತ ಹಾಕುವ ಮೂಲಕ ಕರ್ತವ್ಯ ನಿರ್ವಹಿಸಿದ್ದೇನೆ ಎಂದು ಮಾಜಿ ಶಾಸಕ ಸಿ.ಟಿ ರವಿ ಹೇಳಿದರು.

ಅವರು ಇಂದು ನಗರದ ಜೂನಿಯರ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ಹಾಗೂ ಪದವೀಧರ ಚುನಾವಣೆಯಲ್ಲಿ ಮತ ಚಲಾವಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದರು.

ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತಿದೇನೆ ಎಂದ ಅವರು ಈ ಅವಕಾಶ ಮಾಡಿಕೊಟ್ಟ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸೇರಿದಂತೆ ಎಲ್ಲಾ ಕೋರ್ ಕಮಿಟಿ ಸದಸ್ಯರಿಗೆ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಪಕ್ಷನಿಷ್ಠೆ-ಪರಿಶ್ರಮ ಪಕ್ಷದ ಕಾರ್ಯಕರ್ತರನ್ನು ಕೈಬಿಡುವುದಿಲ್ಲ ಎನ್ನುವುದಕ್ಕೆ ಇದೊಂದು ನಿದರ್ಶನ ಹಾಗಾಗಿ ಪಕ್ಷಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಎಲ್ಲಾ ಸಮೀಕ್ಷೆಗಳು ಮತ್ತೊಮ್ಮೆ ನರೇಂದ್ರ ಮೋದಿ ಎಂದು ಸಾರಿ ಹೇಳುತ್ತಿವೆ. ಮೋದಿಯವರ ನಿಯತ್ತು, ನೇತೃತ್ವ, ಬಿಜೆಪಿ ಪಕ್ಷದ ನೀತಿ, ವಿಶ್ವಾಸಾರ್ಹತೆಯಿಂದ ನಮೋ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆಂದು ಹೇಳಿದರು.

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಭಾರೀ ಭ್ರಷ್ಟಾಚಾರದ ಬಗ್ಗೆ ಗಮನ ಸೆಳೆದಾಗ ಸಚಿವ ನಾಗೇಂದ್ರ ವಿಚಾರದಲ್ಲಿ ಮುಖ್ಯಮಂತ್ರಿಗಳು ದ್ವಂದ್ವ ನಿಲುವು ತಾಳುತ್ತಿದ್ದಾರೆಂದು ಹೇಳಿದರು.

ಹಣವೇ ಮಂಜೂರಾಗದೆ ಟೆಂಡರ್ ಕರೆಯದೆ ಕೆಲಸ ಮಾಡಿದ್ದೇನೆ ಎಂದು ಸಂತೋಷ್ ಪಾಟೀಲ್ ಎಂಟು ತಿಂಗಳ ಪ್ರಯತ್ಮ ಮಾಡಿದರೂ ನಿಯಮಗಳಲ್ಲಿ ಅವಕಾಶವಿಲ್ಲದಿದ್ದರೂ ಕೆ.ಎಸ್ ಈಶ್ವರಪ್ಪನವರು ಸಚಿವರಾಗಿದ್ದಾಗ ಗುತ್ತಿಗೆಯೇ ಮಂಜೂರಾಗಿರಲ್ಲಿಲ್ಲ. ಸಾರ್ವಜನಿಕರ ಸಂಶಯ ದೂರ ಮಾಡಲು ಈಶ್ವರಪ್ಪನವರು ರಾಜೀನಾಮೆ ನೀಡಿದರು ಎಂದು ತಿಳಿಸಿದರು.

ಆದರೆ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನೆಡದಿರುವುದು ನಕಲಿ ಬ್ಯಾಂಕ್ ಖಾತೆ ತೆರೆದು ಇನ್ನೊಂದು ಶಾಖೆಗೆ ೧೮೭ ಕೋಟಿ ರೂಗಳನ್ನು ವರ್ಗಾವಣೆ ಮಾಡಿಕೊಂಡು ಹೈದರಾಬಾದ್‌ನ ಆರ್‌ಬಿಎಲ್ ಗೆ ವರ್ಗಾವಣೆ ಮಾಡಿಲಾಗಿದೆ. ನಂತರ ಫಸ್ಟ್ ಕ್ರಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಬೇನಾಮಿ ಖಾತೆ ತೆರೆದು ಹಣ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿದರು.

ಅಂಗೈ ಹುಣ್ಣಿನಷ್ಟು ಪ್ರಕರಣ ಇದ್ದರೂ ಕೂಡ ಮುಖ್ಯಮಂತ್ರಿಗಳು ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆಯುತ್ತಿಲ್ಲ. ಇದರಲ್ಲಿ ಸರ್ಕಾರದ ಪಾತ್ರವಿದೆಯೇ ಎಂಬ ಅನುಮಾನ ಕಾಡುತ್ತಿದೆ ಎಂದರು.

ಸಚಿವರ ವಿರುದ್ಧ ಪ್ರಕರಣ ದಾಖಲಿಸಿಲ್ಲ. ಈ ಸಂಬಂಧ ಬಿಜೆಪಿ ಅಧ್ಯಕ್ಷರು ಜೂ.೬ ರವರೆಗೆ ಗಡುವು ನೀಡಿದ್ದು ಅಷ್ಟರೊಳಗೆ ರಾಜೀನಾಮೆ ಪಡೆಯದಿದ್ದರೆ ಸರ್ಕಾರವೇ ಇದರಲ್ಲಿ ಶಾಮೀಲಾಗಿದೆ ಎಂದು ಭಾವಿಸಬೇಕಾಗುತ್ತದೆ. ಜೊತೆಗೆ ಸರ್ಕಾರದ ವಿರುದ್ಧ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವರ ರಾಜೀನಾಮೆ ಪಡೆಯುವುದು ಮಾತ್ರವಲ್ಲ. ತಪ್ಪಿತಸ್ಥರಿಗೆ ಕಾನೂನಿನಲ್ಲಿರುವ ಶಿಕ್ಷೆ ವಿಧಿಸಬೇಕೆಂದು ಒತ್ತಡ ಹಾಕುತ್ತೇವೆ. ಕಾಂಗ್ರೆಸ್ ಸರ್ಕಾರ ಭ್ರಷ್ಟರ ರಕ್ಷಣೆಗೆ ಮುಂದಾಗಿದೆ ಎಂದು ದೂರಿದರು.

I have done voting duty as a graduate

About Author

Leave a Reply

Your email address will not be published. Required fields are marked *

You may have missed