September 19, 2024
ಸರಳ ಲೇಖನಗಳ ಕೃತಿ 'ಮನದಂಗಳ' ಲೋಕಾರ್ಪಣೆ

ಸರಳ ಲೇಖನಗಳ ಕೃತಿ 'ಮನದಂಗಳ' ಲೋಕಾರ್ಪಣೆ

ಚಿಕ್ಕಮಗಳೂರು:  ವೈವಿಧ್ಯಮಯ ವಿಚಾರಗಳನ್ನು ಆಳಕ್ಕಿಳಿದು ಅರ್ಥಮಾಡಿಕೊಂಡ ಸರಳ ಲೇಖನಗಳ ಕೃತಿ ‘ಮನದಂಗಳ’ ಎಂದು ಅಮೇರಿಕಾದ ರಿಚ್ಮಂಡ್ ಕನ್ನಡಸಂಘದ ಕಾರ್‍ಯದರ್ಶಿ ಸೌಮ್ಯಕೃಷ್ಣ ನುಡಿದರು.

ಕಲ್ಕಟ್ಟೆಪುಸ್ತಕದಮನೆ ನೇತೃತ್ವದಲ್ಲಿ ನಗರದ ಶಂಕರಮಠ ಪ್ರವಚನಮಂದಿರದಲ್ಲಿ ಆಯೋಜಿಸಿದ್ದ ‘ಅಂಕಣ ದೀಪ’ ಉಪನ್ಯಾಸಕಿ-ಲೇಖಕಿ ರೇಖಾನಾಗರಾಜ ಅವರ ಅಂಕಣ ಬರಹಗಳ ಸಂಕಲನ ‘ಮನದಂಗಳ’ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಅಮೇರಿಕಾದಲ್ಲಿದ್ದರೂ ಕನ್ನಡ ನಾಡಿನ ನಂಟು ಕಲ್ಕಟ್ಟೆ ಕುಟುಂಬದ ಜೊತೆಗೆ ಬೆಸೆದಿದೆ. ಇಲ್ಲೆ ಹುಟ್ಟಿ ಬೆಳೆದು ಅಮೇರಿಕಾ ಸೇರಿದ ಮೇಲೆ ಬಹಳವರ್ಷ ಚಿಕ್ಕಮಗಳೂರಿನ ಸಂಪರ್ಕ ಸ್ಥಗಿತವಾಗಿತ್ತು. ಕೋವಿಡ್ ಸಂದರ್ಭದಲ್ಲಿ ‘ದೀವಿಗೆ ಬಳಗ’ ಎಂಬ ಆನ್‌ಲೈನ್ ಗುಂಪಿನಲ್ಲಿ ಪರಿಚಿತರಾದ ನಾಗರಾಜರಾವ್ ಅಲ್ಲಿ ಕಾರ್‍ಯಕ್ರಮ ಆಯೋಜನೆಯ ಮಾರ್ಗದರ್ಶನ ನೀಡುತ್ತಿದ್ದರು. ನಂತರ ಅವರ ಕುಟುಂಬದೊಂದಿಗೂ ಬಾಂಧವ್ಯ ಬೆಳೆಯಿತು. ನಿತ್ಯ ದೂರವಾಣಿಯ ಮೂಲಕ ಇಲ್ಲಿಯ ವಿಚಾರಗಳ ವಿನಿಮಯ ನಡೆಯುತ್ತಿದೆ ಎಂದರು.

ಇಲ್ಲಿ ಹಾಡುತ್ತಿದ್ದ ಸಂತೋಷ ಸದಾ ನೆನಪಿನಲ್ಲಿದೆ. ಅಮೇರಿಕಾದಲ್ಲಿ ಕನ್ನಡಿಗರ ಬಳಗದ ಮೂಲಕ ಇಲ್ಲಿಯ ಹಬ್ಬಗಳನ್ನು ಆಚರಿಸುತ್ತೇವೆ. ಕನ್ನಡದ ಸಂಸ್ಕೃತಿಯನ್ನು ಮಕ್ಕಳಿಗೆ ಪರಿಚಯಿಸುವ ಕಲೆಗಾರ ತರಗತಿಗಳನ್ನು ನಡೆಸಲಾಗುತ್ತಿದೆ. ತನ್ನ ಮಕ್ಕಳು ಕನ್ನಡ ಓದಿ ಬರೆಯುತ್ತಾರೆ ಎಂದ ಸೌಮ್ಯ, ಪೋಷಕರೆಲ್ಲ ಬೆಂಗಳೂರು ಸೇರಿದ್ದರಿಂದ ಚಿಕ್ಕಮಗಳೂರಿಗೆ ಬರುತ್ತಿರಲಿಲ್ಲ. ಈ ಬಾರಿ ಬೆಂಗಳೂರಿಗೆ ಬಂದ ಸಂದರ್ಭದಲ್ಲೆ ಪುಸ್ತಕಬಿಡುಗಡೆ ಸಮಾರಂಭ ಆಯೋಜಿಸುವ ಮೂಲಕ ಉತ್ತಮ ಕಾರ್‍ಯದಲ್ಲಿ ಭಾಗವಹಿಸುವಂತಾದದ್ದು ಸಂತೋಷದ ಸಂಗತಿ ಎಂದರು.

ಕನ್ನಡ ಓದು ಕಡಿಮೆಯಾದ ಸಂದರ್ಭದಲ್ಲಿ ಈ ಅಂಕಣ ಬರಹ ಓದಲು ಸಿಗುತ್ತಿತ್ತು. ವಿವಿಧ ವ್ಯಕ್ತಿಗಳ ಪರಿಚಯ, ಹಬ್ಬ ಹರಿದಿನಗಳ ಸಂಭ್ರಮ, ಸಾಂಸ್ಕೃತಿಕ ಚಟುವಟಿಕೆಗಳನ್ನು ಸರಳವಾಗಿ ಅರ್ಥಮಾಡಿಸುವ ಶೈಲಿ ಸಿದ್ಧಿಸಿದೆ. ಅವರ ಬರಹಗಳು ನಿರಂತರವಾಗಿ ಪ್ರವಹಿಸಬೇಕೆಂದ ಅಮೇರಿಕಾದ ಕನ್ನಡತಿ ಸೌಮ್ಯ ಆಶಿಸಿದರು.
ಕರ್ನಾಟಕ ಕಗ್ಗ ಬಳಗದ ಸಂಸ್ಥಾಪಕಿ ಮಂಡ್ಯದ ಭವಾನಿಲೋಕೇಶ್ ಪುಸ್ತಕ ಪರಿಚಯಿಸಿ ಮಾತನಾಡಿ ವ್ಯಕ್ತಿತ್ವವಿಕಸನಕ್ಕೆ ದಾರಿ ಮಾಡಿಕೊಡುವ ಕೃತಿ ಇದ. ಪ್ರತಿ ಲೇಖನದ ಕೊನೆಯಲ್ಲಿ ಸೂಕ್ತಿ ರೀತಿಯಲ್ಲಿ ಸಂದೇಶವನ್ನು ನೀಡಲಾಗಿದೆ. ಸಮಾಜಕ್ಕೆ ಬೇಕಾದ ಒಳ್ಳೆಯ ಸಂದೇಶ ನವನೀತದ ಮೂಲಕ ನಮ್ಮೊಳಗಿನ ಪ್ರಜ್ಞೆಯನ್ನು ಎಚ್ಚರಿಸುವ ಮಹತ್ವದ ಕಾರ್‍ಯ ಲೇಖಕಿ ಮಾಡಿದ್ದಾರೆಂದರು.

ವ್ಯಕ್ತಿತ್ವ ಚಿತ್ರಣ, ವಿಚಾರ ಲಹರಿ, ಮನುಷ್ಯ ಸಂಬಂಧದ ಎಳೆಗಳು, ಸಂಸ್ಕೃತಿ, ಚಿಂತನೆ, ಅನುಭವದ ಕಥನದ ಅಂತರಂಗ ತರಂಗಗಳು ‘ಮನದಂಗಳ’ ಕೃತಿಯಲ್ಲಿದೆ. ಮನಸ್ಸಿನಲ್ಲಿ ಅರಳಿದ ಭಾವನೆ-ಹೂವುಗಳ ಸುಂದರಮಾಲೆ ಇದು. ಆಧ್ಯಾತ್ಮದ ನೆಲೆಯಲ್ಲಿ ಆಲೋಚಿಸುವ ಸಂಸ್ಕಾರದ ಕೆಲಸ ಇಲ್ಲಿ ನಡೆದಿದೆ. ಕಂಡುಕೊಂಡ ಜ್ಞಾನವನ್ನು ಎಲ್ಲರಿಗೂ ಹಂಚುವ ಕೆಲಸ ಮಾಡಿದ್ದಾರೆ. ಒಳಿತನ್ನು ಗುರುತಿಸುವ ಆರೋಗ್ಯಪೂರ್ಣ ಅಂಶಗಳು ಯಥೇಚ್ಛವಾಗಿವೆ. ೪೧೨ಪುಟಗಳನ್ನು ಒಳಗೊಂಡರೂ ಸಹಜವಾಗಿ ಓದಿಸಿಕೊಂಡು ಹೋಗುತ್ತದೆ ಎಂದು ಭವಾನಿ ನುಡಿದರು.

ಲೇಖಕಿ ರೇಖಾನಾಗರಾಜರಾವ್ ಮಾತನಾಡಿ ಬಾಲ್ಯದಿಂದಲೂ ಓದುವ, ಮಾತನಾಡುವ ಹವ್ಯಾಸವಿತ್ತು. ಪತ್ರಿಕೆಗಳ ವಾಚಕರ ವಾಣಿಗೆ ಸಣ್ಣಪುಟ್ಟ ಪತ್ರಗಳನ್ನು ಖಾರವಾಗಿ ಆಗಾಗ ಬರೆಯುವ ಅಭ್ಯಾಸವಿತ್ತು. ಆದರೆ ಬರವಣಿಗೆಯಲ್ಲಿ ಸೋಮಾರಿತನ ಕಾಡುತ್ತಿತ್ತು. ಕ್ರೈಂ, ತ್ರಿಲ್ಲರ್, ಸಸ್ಪೆನ್ಸ್ ಆಸಕ್ತಿದಾಯಕ. ಸಿನಿಮಾ ಮತ್ತು ಟಿ.ವಿ.ವೀಕ್ಷಣೆಗೆ ಹೆಚ್ಚು ಸಮಯ ವಿನಿಯೋಗಿಸುತ್ತಿದ್ದ ಸಂದರ್ಭದಲ್ಲಿ ಪತಿ ನಾಗರಾಜರಾವ್ ಪ್ರೇರಣೆ, ಒತ್ತಾಯ, ಪ್ರೋತ್ಸಾಹದ ಪರಿಣಾಮ ಆರಂಭಗೊಂಡ ಬರವಣಿಗೆ ದೊಡ್ಡ ಕೃತಿಯಾಗಿ ಇಂದು ಹೊರಬಂದಿದೆ. ನೋಡುವುದು, ಗಮನಿಸುವುದು ಎರಡೂ ಸಾಧ್ಯವಾದರೆ ಬರವಣಿಗೆ ಸುಲಭ. ಓದುವುದು ನಿರಂತರವಾಗಬೇಕು ಎಂದರು.

ಶೃಂಗೇರಿ ಕಲಾಪೋಷಕಿ ಶೈಲಾರತ್ನಾಕರಹೆಗ್ಡೆ ಸಮಾರಂಭದ ಅಧ್ಯಕ್ಷತೆವಹಿಸಿದ್ದರು. ಲಯನ್ಸ್ ಅಧ್ಯಕ್ಷ ಜಿ.ರಮೇಶ್ ಶುಭ ಹಾರೈಸಿದರು. ವೈಷ್ಣವಿಎನ್.ರಾವ್ ಮತ್ತು ಪ್ರತಿಭಾ ಅವರ ಆಡುಮಾತಿನ ವಿಶೇಷ ಶೈಲಿಯ ನಿರೂಪಣೆ ಗಮನಸೆಳೆಯಿತು. ಎಚ್.ಎಂ.ನಾಗರಾಜರಾವ್ ವಂದಿಸಿದರು.

A work of simple articles ‘Manadamgala’ Lokarpana

About Author

Leave a Reply

Your email address will not be published. Required fields are marked *

You may have missed