September 19, 2024

ದರಏರಿಕೆ ವಿರುದ್ಧ ಬಿಜೆಪಿ ಯುವ ಮೊರ್ಚಾವಿನೂತನ ಪ್ರತಿಭಟನೆ

0
ದರಏರಿಕೆ ವಿರುದ್ಧ ಬಿಜೆಪಿ ಯುವ ಮೊರ್ಚಾವಿನೂತನ ಪ್ರತಿಭಟನೆ

ಚಿಕ್ಕಮಗಳೂರು: ದರಏರಿಕೆ ವಿರುದ್ಧ ನಗರದ ಹನುಮಂತಪ್ಪ ವೃತ್ತದಲ್ಲಿ ಕಿವಿಗೆ ದಾಸವಾಳ ಹೂವು ಮುಡಿದು, ಕೈಯಲ್ಲಿ ಚಿಪ್ಪು ಹಿಡಿದು ಬಿಜೆಪಿ ಯುವ ಮೊರ್ಚಾ ವತಿಯಿಂದ ರಾಜ್ಯ ಸರ್ಕಾರದ ವಿರುದ್ಧ ಭಾನುವಾರ ವಿನೂತನ ಪ್ರತಿಭಟನೆ ನಡೆಸಿದರು

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಸುವ ಮೂಲಕ ರಾಜ್ಯದ ಕಾಂಗ್ರೆಸ್ ಸರ್ಕಾರ ಜನರ ಕಿವಿಗೆ ಹೂವು ಮುಡಿಸಿ, ಕೈಗೆ ಚಿಪ್ಪುನೀಡಿದೆ ಎಂದು ಆರೋಪಿಸಿದರು.

ಭಷ್ಟ್ರಾಚಾರ ಮಾಡುವುದು, ಬೆಲೆ ಏರಿಕೆ ಮಾಡುವುದೇ ಈ ಸರ್ಕಾರದ ನೀತಿಯಾಗಿದೆ. ನಂತರ ಅದನ್ನು ವಿಷಯಾಂತರ ಮಾಡಲು ಇನ್ನಾವುದೋ ವಿಚಾರವನ್ನು ಮುನ್ನೆಲೆಗೆ ತರುತ್ತಾರೆ ಎಂದು ದೂರಿದರು.

ಬೆಲೆ ಇಳಿಸಬೇಕು ಇಲ್ಲವಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿಯಬೇಕು. ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ೨ ಬಾರಿ ವಿದ್ಯುತ್ ದರ ಏರಿಸಿ ಜನರಿಗೆ ಬರೆ ಹಾಕಿದರು. ಈಗ ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಹೆಚ್ಚಿಸಿದ್ದಾರೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದ ಸೆಸ್ ಅತೀ ಹೆಚ್ಚಾಗಿದೆ. ಇದು ಜನರ ಕಿವಿಗೆ ಚೆಂಡು ಹೂವು ಮುಡಿಸುವ ಕೆಲಸ. ಜನರ ಮೇಲೆ ಸೇಡು ತೀರಿಸಿಕೊಳ್ಳುವ ಕೆಲಸ ಎಂದು ದೂರಿದರು.

ಜನ ವಿರೋಧಿಯಾಗಿರುವ ಈ ಸರ್ಕಾರದ ನೀತಿಯನ್ನು ಜನ ಮನಕ್ಕೆ ಮುಟ್ಟಿಸುವ ಸಲುವಾಗಿ ಯುವ ಮೋರ್ಚಾ ವತಿಯಿಂದ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಬೆಲೆ ಏರಿಕೆ ಇಳಿಸದೇ ಇದ್ದಲ್ಲಿ ಅವರನ್ನು ಇಳಿಸಲು ಏನು ಮಾಡಬೇಕು ಅದನ್ನು ನಾವು ಮಾಡುತ್ತೇವೆ ಎಂದರು.

ಬೆಲೆ ಏರಿಕೆ ಖಂಡಿಸಿ ಇದೇ ಕಾಂಗ್ರೆಸಿಗರು ಸ್ಕೂಟಿಯ ಶವ ಯಾತ್ರೆ ಮಾಡಿದ್ದರು. ಈಗ ಅವರದ್ದೇ ಸರ್ಕಾರ ಬಂದ ಮೇಲೆ ಪೆಟ್ರೋಲ್, ಡೀಸೆಲ್ ಅಷ್ಟೇ ಅಲ್ಲದೆ, ಅಬಕಾರಿ ಸುಂಕ ಎರಡು ಬಾರಿ ಹೆಚ್ಚಿಸಿದ್ದಾರೆ. ಸ್ಟಾಂಪ್ ಡ್ಯೂಟಿ ಹೆಚ್ಚಿಸಿದರು. ಪಹಣಿ, ಆದಾಯ ದೃಢೀಕರಣ ಪತ್ರ, ಜನನ, ಮರಣ ದೃಢೀಕರಣ ಪತ್ರದ ಬೆಲೆಯನ್ನೂ ಹೆಚ್ಚಿಸಿದ್ದಾರೆ. ಈ ಮೂಲಕ ಜನರ ಕಿವಿಗೆ ಹೂವು ಮುಡಿಸುವ ಜೊತೆಗೆ ಕೈಗೆ ಚಿಪ್ಪನ್ನೂ ಕೊಟ್ಟಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸಿಗರ ನೀತಿಯನ್ನೇ ಅವರಿಗೆ ತಿರುಗುಬಾಣವಾಗಿ ತೋರಿಸುವ ಕೆಲಸವನ್ನು ನಾವು ಪ್ರತಿಭಟನೆ ಮೂಲಕ ಮಾಡುತ್ತಿದ್ದೇವೆ. ಜನರ ಪಾಲಿಗೆ ಕಾಂಗ್ರೆಸ್ ಸರ್ಕಾರ ಶಾಪವಾಗಿದೆ. ಮುಂದೆ ನಾವು ಕಾಂಗ್ರೆಸ್‌ನ ಶವ ಯಾತ್ರೆ ಮಾಡಬೇಕಾಗುತ್ತದೆ. ಅಧಿಕಾರದ ಗದ್ದುಗೆಯಿಂದ ಇಳಿಸಿ ಕಾಂಗ್ರೆಸನ್ನು ಸ್ಮಶಾನಕ್ಕೆ ಕಳಿಸುವವರೆಗೆ ಪ್ರತಿಭಟನೆಯನ್ನು ಮಾಡಬೇಕಾಗುತ್ತದೆ ಎಂದರು.

ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ಮಾತನಾಡಿ, ಬೆಲೆ ಏರಿಕೆಯನ್ನು ಹೇರುವ ಮೂಲಕ ಕಾಂಗ್ರೆಸ್ ದುರಾಡಳಿತ ನಡೆಸುತ್ತಿದೆ. ವಾಲ್ಮೀಕಿ ನಿಗಮದಲ್ಲಿ ನಡೆದ ಭಾರೀ ಭ್ರಷ್ಟಾಚಾರವನ್ನು ಮರೆ ಮಾಚುವ ಸಲುವಾಗಿ ಬೆಲೆ ಏರಿಕೆಯನ್ನು ಜನರ ಮುಂದೆ ತಂದು ಗಮನ ಬೇರೆಡೆಗೆ ಹರಿಸುವಂತೆ ಷಡ್ಯಂತ್ರ ನಡೆಸಿದೆ ಎಂದು ದೂರಿದರು.

ಗ್ಯಾರಂಟಿ ಹೆಸರಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ೬ ನೇ ಗ್ಯಾರಂಟಿಯಾಗಿ ಪೆಟ್ರೋಲ್, ಡೀಸೆಲ್ ದರ ಏರಿಸಿ ಜನರ ಕೈಗೆ ಚಿಪ್ಪು ನೀಡಿದೆ ಎಂದು ದೂರಿದರು. ಏಳನೇ ಗ್ಯಾರಂಟಿಯಾಗಿ ಚೊಂಬು ನೀಡಲಿದೆ. ಇದು ಚಿಪ್ಪು, ಚೊಂಬಿನ ಸರ್ಕಾರವಾಗಿದೆ. ತಕ್ಷಣ ಬೆಲೆ ಏರಿಕೆಯನ್ನು ಹಿಂದಕ್ಕೆ ಪಡೆಯದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಯುವ ಮೋರ್ಚಾ ನಗರ ಯುವ ಮೋರ್ಚಾ ಅಧ್ಯಕ್ಷ ಜೀವನ್ ಕೋಟೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಚಿನ್ ಗೌಡ, ಜಿಲ್ಲಾ ಉಪಾಧ್ಯಕ್ಷೆ ಅಂಕಿತಾ ಗೌಡ, ಪುನೀತ್, ಪಾರ್ತಿಬನ್, ಮುಖಂಡರುಗಳಾದ ಟಿ.ರಾಜಶೇಖರ್, ಮಧುಕುಮಾರ ರಾಜ್ ಅರಸ್, ಓಂಕಾರೇಗೌಡ ಇತರರು ಭಾಗವಹಿಸಿದ್ದರು.

BJP Yuva Morcha protest against price hike

About Author

Leave a Reply

Your email address will not be published. Required fields are marked *

You may have missed