September 19, 2024

ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ

0
ಬಿ.ಜೆ.ಪಿ. ಎಸ್.ಟಿ ಮೋರ್ಚಾ ಜಿಲ್ಲಾಧ್ಯಕ್ಷ ನಂದೀಶ್ ಮದಕರಿ ಸುದ್ದಿಗೋಷ್ಠಿ

ಬಿ.ಜೆ.ಪಿ. ಎಸ್.ಟಿ ಮೋರ್ಚಾ ಜಿಲ್ಲಾಧ್ಯಕ್ಷ ನಂದೀಶ್ ಮದಕರಿ ಸುದ್ದಿಗೋಷ್ಠಿ

ಚಿಕ್ಕಮಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಸುಮಾರು ೧೮೭ ಕೋಟಿ ರೂ ಹಗರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ಕೂಡಲೇ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು, ನಿಗಮಕ್ಕೆ ಹಣವನ್ನು ವಾಪಾಸ್ ಹಾಕುವಂತೆ ಒತ್ತಾಯಿಸಿ ಜೂ.೨೮ ರಂದು ಬೆಳಗ್ಗೆ ೧೧ ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲು ಜಿಲ್ಲಾ ಬಿಜೆಪಿ ಎಸ್.ಟಿ ಮೋರ್ಚಾ ನಿರ್ಧರಿಸಿದೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಎಸ್.ಟಿ ಮೋರ್ಚಾ ಜಿಲ್ಲಾಧ್ಯಕ್ಷ ನಂದೀಶ್ ಮದಕರಿ ಅವರು ಶತ ಶತಮಾನಗಳಿಂದ ಶೋಷಣೆಗೆ ಒಳಗಾಗಿ ಬಂದ ತಳಮಟ್ಟದ ಎಸ್.ಟಿ ಸಮುದಾಯದ ಬಡಜನರ ಜೀವನಮಟ್ಟ ಸುಧಾರಣೆಗೆ ಬಳಸಿಕೊಳ್ಳಬೇಕಾಗಿದ್ದ ನಿಗಮದ ಹಣ ರಾಜಕೀಯ ಅಭಿವೃದ್ಧಿ ಉದ್ದೇಶಕ್ಕೆ ಬಳಕೆಯಾಗಿದೆ ಎಂದು ಆರೋಪಿಸಿದರು.

ಅಂದು ರಾಜ್ಯಾದ್ಯಂತ ನಡೆಯಲಿರುವ ಈ ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರು, ಎಸ್.ಟಿ ಮೋರ್ಚಾ ಪದಾಧಿಕಾರಿಗಳು, ಬಿಜೆಪಿ ಒಂಬತ್ತು ಮಂಡಲ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಪ್ರತಿಭಟನೆಯನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಇದರಿಂದಾಗಿ ವಾಲ್ಮೀಕಿ ಸಮುದಾಯ ಅನ್ಯಾಯಕ್ಕೊಳಗಾಗಿದ್ದು ಸರ್ಕಾರದ ಹಸ್ತಕ್ಷೇಪವಿಲ್ಲದೆ ಇಷ್ಟೊಂದು ದೊಡ್ಡ ಆರ್ಥಿಕ ಅವ್ಯವಹಾರ ನಡೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದಾಗ ನಿಗಮದ ಹಣ ಖಾಸಗಿ ಬ್ಯಾಂಕ್‌ಗಳಿಗೆ ವರ್ಗಾವಣೆ ಆಗಿರುವುದನ್ನು ಖಂಡಿಸಿದರು.

ಸಚಿವ ನಾಗೇಂದ್ರ ರಾಜೀನಾಮೆ ನೀಡಿದ್ದಾರೆ, ನಿಗಮದ ವ್ಯವಸ್ಥಾಪಕ ನಿರ್ದೇಶಕ ಚಂದ್ರಶೇಖರನ್ ಅವರು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದು ಅಕ್ರಮವಾಗಿ ವರ್ಗಾವಣೆಯಾಗಿರುವ ಎಲ್ಲವೂ ಹಣಕಾಸು ಇಲಾಖೆ ಅಡಿಯಲ್ಲೇ ನಡೆದಿರುವುದರಿಂದ ಇದರ ನೈತಿಕ ಹೊಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೊರಬೇಕೆಂದು ಆಗ್ರಹಿಸಿದರು.

ಕೂಡಲೇ ಅಕ್ರಮವಾಗಿ ವರ್ಗಾವಣೆಯಾಗಿರುವ ಹಣವನ್ನು ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ವಾಪಸ್ ಪಡೆದು ಎಸ್.ಟಿ ಸಮುದಾಯಗಳ ಅಭಿವೃದ್ಧಿಗೆ ವಿನಿಯೋಗಿಸಬೇಕು. ಈ ನಿಟ್ಟಿನಲ್ಲಿ ಅಂದು ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಯನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ದಲಿತ ಸಮುದಾಯಗಳ ಅಭಿವೃದ್ಧಿಗೆ ಎಸ್.ಸಿ.ಎಸ್.ಪಿ , ಟಿಎಸ್‌ಪಿ ಯೋಜನೆಗಳಡಿ ವಿಶೇಷ ಅನುದಾನ ಮೀಸಲಿಡಲಾಗಿದ್ದು ಎಸ್.ಸಿ, ಎಸ್.ಟಿ ಸಮುದಾಯಗಳ ಅಭಿವೃದ್ಧಿಗೆ ಬಳಸಬೇಕಾದ ಅನುದಾನವನ್ನು ಅನ್ಯ ಉದ್ದೇಶಗಳಿಗೆ ಬಳಿಸಿಕೊಂಡಿರುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಎಂದು ಟೀಕಿಸಿದರು.

ಹಿಂದುಳಿದ ವರ್ಗಗಳ ಸಮುದಾಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮೀಸಲಿಟ್ಟಿದ್ದ ಸುಮಾರು ೨೪ ಸಾವಿರ ಕೋಟಿ ರೂಗಳನ್ನು ಕಾಂಗ್ರೆಸ್ ಸರ್ಕಾರ ಇತರ ಯೋಜನೆಗಳಿಗೆ ಬಳಸಿಕೊಳ್ಳುವ ಮೂಲಕ ಹಿಂದುಳಿದ ಸಮುದಾಯಕ್ಕೆ ಮಾಡಿದ ಅನ್ಯಾಯ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಎಸ್.ಟಿ ಮೋರ್ಚಾದ ಮುಖಂಡರುಗಳಾದ ಮಧುಕುಮಾರ್ ಹೆಚ್.ಎಂ, ಶಂಕರ್ ಮಡೇನೇರಲು, ಮಹೇಶ್, ನಗರಾಧ್ಯಕ್ಷ ಪ್ರದೀಪ್, ಉಪಾಧ್ಯಕ್ಷ ಭರತ್ ಉಪಸ್ಥಿತರಿದ್ದರು.

Massive protest in front of the District Collector’s office

About Author

Leave a Reply

Your email address will not be published. Required fields are marked *

You may have missed