September 20, 2024

ಜಾತ್ಯಾತೀತ ತತ್ತ್ವ ಅಡಿಯಲ್ಲಿ ಕೆಂಪೇಗೌಡರನ್ನು ನೋಡಬೇಕು

0
ಕುವೆಂಪು ಕಲಾಮಂದಿರದಲ್ಲಿ ನಡೆದ ಕೆಂಪೇಗೌಡರ ಜಯಂತಿ

ಕುವೆಂಪು ಕಲಾಮಂದಿರದಲ್ಲಿ ನಡೆದ ಕೆಂಪೇಗೌಡರ ಜಯಂತಿ

ಚಿಕ್ಕಮಗಳೂರು: ಜಾತ್ಯಾತೀತ ತತ್ತ್ವ ಅಡಿಯಲ್ಲಿ ಕೆಂಪೇಗೌಡರನ್ನು ನೋಡಬೇಕು ಎಂದು ಬಾಣಾವರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ದೊರೇಶ್ ಬಿಳಿಕೆರೆ ಹೇಳಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾಡಳಿತ ಗುರುವಾರ ಏರ್ಪಡಿಸಿದ್ದ ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ನಮ್ಮಂತೆ ಎಲ್ಲರೂ ಬದುಕಬೇಕೆಂಬುದನ್ನು ತೋರಿಸಿಕೊಟ್ಟವರು ಕೆಂಪೇಗೌಡರು ಎಂದರು.

ಮಹಾಗುರು ಡಾ. ಬಾಲಗಂಗಾಧರ ಮಹಾಸ್ವಾಮೀಜಿ, ಮಹಾರಾಜ ಕೆಂಪೇಗೌಡ, ಮಹಾ ಕವಿ ಕುವೆಂಪುವನ್ನು ಈ ನಾಡಿಗೆ ಕೊಡಗೆಯಾಗಿ ನೀಡಿರುವ ಒಕ್ಕಲಿಗ ಸಮುದಾಯ ಶ್ರೇಷ್ಟ ಪರಂಪರೆಯನ್ನು ಹೊಂದಿದೆ. ಜಯಂತಿಗಳ ಮೂಲ ಉದ್ದೇಶ ನಮ್ಮನ್ನು ನಾವು ಅರಿಯಲು, ಚರಿತ್ರೆಯನ್ನು ತಿಳಿದುಕೊಳ್ಳಲು ಎಂದು ಹೇಳಿದರು.

ವಿಶ್ವಮಾನವ ಪ್ರಜ್ಞೆ ಕೆಂಪೇಗೌಡರಲ್ಲಿ ಇತ್ತು. ಒಂದು ರಾಜಧಾನಿ ಭದ್ರವಾಗಿ ಇರಬೇಕಾದರೆ ಅಲ್ಲಿ ಏನೆಲ್ಲಾ ಇರಬೇಕು ಎಂಬ ಪರಿಕಲ್ಪನೆಯನ್ನು ಹೊಂದಿದ್ದರು. ಹಾಗಾಗಿ ಆಗಿನ ಕಾಲದಲ್ಲಿ ಕಾರ್ಖಾನೆಯನ್ನು ಸ್ಥಾಪನೆ ಮಾಡಿದರು. ವ್ಯಾಪಾರ ವಹಿವಾಟಿಗೂ ಅವಕಾಶ ನೀಡಿದ್ದರು. ಹೀಗೆ ಎಲ್ಲ ಸಮುದಾಯದವರಿಗೆ ಸಮಾನ ಅವಕಾಶವನ್ನು ನೀಡಿದ್ದರು. ರೈತರು, ಬಡವರು, ಶ್ರೀಮಂತರೆಂಬ ಬೇಧವನ್ನು ಮಾಡುತ್ತಿರಲಿಲ್ಲ ಎಂದು ಹೇಳಿದರು.

ಇಂದು, ಬೆಂಗಳೂರು ಇಡೀ ಪ್ರಪಂಚ ಗುರುತಿಸುವ ಮಟ್ಟದಲ್ಲಿ ಬೆಳೆದು ನಿಂತಿದೆ. ಇದಕ್ಕೆ ಮೂಲ ಕಾರಣ ಕೆಂಪೇಗೌಡ ಎಂಬುದನ್ನು ಯಾರೂ ಕೂಡ ಮರೆಯಲು ಸಾಧ್ಯವಿಲ್ಲ. ಈಗಿನ ಮಾಲ್ ಸಂಸ್ಕೃತಿ ಹುಟ್ಟಿದ್ದು ಕೆಂಪೇಗೌಡರ ಕಾಲದಲ್ಲಿ, ಜಾತಿ, ಧರ್ಮ, ವರ್ಣದ ಹೆಸರಿನಲ್ಲಿ ಅವರ ಕಾಲದಲ್ಲಿ ತಾರತಮ್ಯ ಮಾಡುತ್ತಿರಲಿಲ್ಲ ಎಂದ ಅವರು, ಬೆಂಗಳೂರು ಸರ್ವ ಜನಾಂಗದ ಶಾಂತಿಯ ತೋಟವಾಗಿದೆ ಎಂದರು.

ಕೋಟೆ, ಪೇಟೆ, ಕೆರೆ, ಗುಡಿ, ಗುರಿ ಅವರ ಪರಿಕಲ್ಪನೆಯಾಗಿತ್ತು. ಒಂದು ನಗರ ಇದೇ ಮಾದರಿಯಲ್ಲಿ ಇರಬೇಕೆಂಬುದು ಅವರ ಆಶಯವಾಗಿತ್ತು ಎಂದ ಅವರು, ಇಂತಹ ಕಾರ್ಯಕ್ರಮಗಳು ತೋರ್ಪಡೆಗೆ ಇರಬಾರದು, ಆದರ್ಶ ವೇದಿಕೆಯಾಗಬೇಕು. ಕೆಂಪೇಗೌಡರ ಆದರ್ಶ ಗುಣಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳಬೇಕು, ವಿದ್ಯಾರ್ಥಿಗಳು ಚರಿತ್ರೆ, ದಂತ ಕಥೆಗಳನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.

ತ್ಯಾಗ, ಧರ್ಮ, ನಂಬಿಕೆ, ಪ್ರಾಮಾಣಿಕತೆ, ದೂರದೃಷ್ಟಿ ವ್ಯಕ್ತಿತ್ವ ಹೊಂದಿದ ಸಮುದಾಯ ಒಕ್ಕಲಿಗ, ಸಮ ಸಮಾಜದ ತತ್ತ್ವಗಳನ್ನು ಮಕ್ಕಳಿಗೆ ತಿಳಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಮೀನಾ ನಾಗರಾಜ್, ನಾಡಪ್ರಭು ಕೆಂಪೇಗೌಡ ಅವರು ದೂರ ದೃಷ್ಟಿಯ ನಾಯಕರು. ಬೆಂಗಳೂರು ಪ್ರಪಂಚದಲ್ಲಿ ಗುರುತಿಸಿಕೊಳ್ಳಲು ಕಾರಣ ಕೆಂಪೇಗೌಡರ ದೃಷ್ಟಿಕೋನ. ಅದೇ ಮಾದರಿಯಲ್ಲಿ ರಾಜ್ಯದ ಇತರೆ ಜಿಲ್ಲೆಗಳು ಬೆಳೆಯಬೇಕು ಎಂದು ತಿಳಿಸಿದರು.

ಮಹಾತ್ಮರ ಜಯಂತಿಯನ್ನು ಆಚರಿಸುವ ಉದ್ದೇಶ, ಅವರನ್ನು ಮತ್ತೆ ಮತ್ತೆ ನೆನಪು ಮಾಡಿಕೊಳ್ಳಬೇಕು, ಅವರ ಆದರ್ಶಗಳನ್ನು ಮಕ್ಕಳಿಗೆ ಸಾರ್ವಜನಿಕರಿಗೆ ತಿಳಿಸಿಕೊಡಬೇಕು ಎಂಬುದಾಗಿದೆ ಎಂದ ಅವರು, ಮಕ್ಕಳು ಇತಿಹಾಸವನ್ನು ಓದುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ. ರಾಜಶೇಖರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ, ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಎಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಿ.ಟಿ. ಜಯದೇವ್, ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಪ್ರಕಾಶ್ ಉಪಸ್ಥಿತರಿದ್ದರು.

Kempegowda should be seen under the secular principle

 

 

About Author

Leave a Reply

Your email address will not be published. Required fields are marked *