September 20, 2024

ಕಳೆದ ೬ ತಿಂಗಳಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗದ ೫೦೨೧ ಪ್ರಕರಣ ಇತ್ಯರ್ಥ

0
ಆಯೋಗದ ರಾಜ್ಯಾಧ್ಯಕ್ಷ (ಪ್ರಭಾರಿ) ಡಾ. ಶ್ಯಾಮ್ ಭಟ್

ಆಯೋಗದ ರಾಜ್ಯಾಧ್ಯಕ್ಷ (ಪ್ರಭಾರಿ) ಡಾ. ಶ್ಯಾಮ್ ಭಟ್

ಚಿಕ್ಕಮಗಳೂರು: ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಕಳೆದ ೬ ತಿಂಗಳಲ್ಲಿ ೫೦೨೧ ಪ್ರಕರಣಗಳನ್ನು ಇತ್ಯರ್ಥಪಡಿಸಿದೆ ಎಂದು ಆಯೋಗದ ರಾಜ್ಯಾಧ್ಯಕ್ಷ (ಪ್ರಭಾರಿ) ಡಾ. ಶ್ಯಾಮ್ ಭಟ್ ಅವರು ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ೨೦೨೩ರ ನವೆಂಬರ್ ಮಾಹೆಯಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗದ ಹೊಸ ಸಮಿತಿ ರಚನೆಯಾಗಿದ್ದು, ಆಗ ಆಯೋಗದ ಮುಂದೆ ೮೦೫೪ ಪ್ರಕರಣಗಳು ಇದ್ದವು. ಕಳೆದ ೬ ತಿಂಗಳಲ್ಲಿ ೫೦೨೧ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದ್ದು, ಇನ್ನು ೩೦೩೩ ಕೇಸ್‌ಗಳು ಬಾಕಿ ಇವೆ. ತ್ವರಿತಗತಿಯಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸುವ ಉದ್ದೇಶದಿಂದ ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡಲಾಗುತ್ತಿದೆ ಎಂದರು.

ಜಿಲ್ಲಾ ಕೇಂದ್ರದಲ್ಲಿ ದೂರುದಾರರು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ವಿಚಾರಣೆ ನಡೆಸಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಆಯೋಗ ಕಾರ್ಯಕ್ರಮ ರೂಪಿಸಿದೆ. ಈವರೆಗೆ ೮ ಜಿಲ್ಲೆಗಳಿಗೆ ಭೇಟಿ ನೀಡಲಾಗಿದ್ದು, ಇದೀಗ ಚಿಕ್ಕಮಗಳೂರು ಜಿಲ್ಲೆಗೆ ಭೇಟಿ ನೀಡಿದ್ದೇವೆ ಎಂದು ಹೇಳಿದರು.

ಆಯೋಗಕ್ಕೆ ದೂರು ಸಲ್ಲಿಸಿದವರು ಹಾಗೂ ಇಲಾಖೆಯವರು ಬೆಂಗಳೂರಿಗೆ ಬಂದು ಹೋಗಲು ತೊಂದರೆಯಾಗಲಿದೆ. ಜತೆಗೆ ಆರ್ಥಿಕವಾಗಿ ಹೊರೆಯಾಗಲಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ೫೫ ಪ್ರಕರಣಗಳು ಇತ್ಯರ್ಥವಾಗಬೇಕಾಗಿದ್ದು, ಈ ಪೈಕಿ ೨೮ ಕೇಸ್‌ಗಳಲ್ಲಿ ವರದಿ ಬಂದಿದೆ. ೨೭ ಪ್ರಕರಣಗಳು ಇತ್ಯರ್ಥವಾಗಬೇಕಾಗಿದೆ. ವಿಚಾರಣೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸಲಾಗುವುದು. ಅಗತ್ಯಬಿದ್ದರೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ತಿಳಿಸಿದರು.

ಜನರ ಹಕ್ಕಿಗೆ ಯಾವುದೇ ರೀತಿಯಲ್ಲಾದರೂ ತೊಂದರೆಯಾದಲ್ಲಿ ಆಯೋಗ ದೂರನ್ನು ಸ್ವೀಕರಿಸಲಿದೆ. ಕೆಲವು ಪ್ರಕರಣಗಳಲ್ಲಿ ಸೋಮೋಟೋ ಕೇಸ್‌ಗಳನ್ನು ದಾಖಲಿಸಿಕೊಂಡು ಇಲಾಖೆಗಳ ಗಮನ ಸೆಳೆಯಲಾಗಿದೆ ಎಂದ ಅವರು, ಆಯೋಗಕ್ಕೆ ಪ್ರತಿದಿನ ೩೦-೪೦ ದೂರುಗಳು ಬರುತ್ತಿವೆ. ಹಾಗಾಗಿ ಸಂಖ್ಯೆ ಹೆಚ್ಚಾಗುತ್ತಿದೆ. ಅದೇ ವೇಗದಲ್ಲಿ ಇತ್ಯರ್ಥಪಡಿಸುವ ಕೆಲಸವು ಸಹ ನಡೆಯುತ್ತಿದೆ ಎಂದರು.

ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಲಾಗಿದ್ದು, ಕೆಲವೆಡೆ ನ್ಯೂನ್ಯತೆಗಳು ಕಂಡು ಬಂದಿತು. ಸರ್ವರ್ ತೊಂದರೆಯಿಂದಾಗಿ ಓಪಿಡಿಯಲ್ಲಿ ಜನರು ಚೀಟಿ ಪಡೆದುಕೊಳ್ಳಲು ಸರದಿ ಸಾಲಿನಲ್ಲಿ ನಿಂತಿದ್ದರು. ಆ ಭಾಗದಲ್ಲಿ ಸ್ಥಳದ ಅಭಾವ ಕಂಡು ಬರುತ್ತಿತ್ತು. ಜತೆಗೆ ಹೆಚ್ಚುವರಿಯಾಗಿ ಕಂಪ್ಯೂಟರ್ ಆಪರೇಟರ್ ಹಾಕಲು ಜಿಲ್ಲಾ ಸರ್ಜನ್ ಅವರು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.

ಶೌಚಾಲಯದ ನಿರ್ವಹಣೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಶುಚಿತ್ವ ಕಂಡು ಬರಲಿಲ್ಲ, ಆಸ್ಪತ್ರೆಯಲ್ಲಿ ರೆಡಿಯೋಲಿಜಿಸ್ಟ್ ಕಳೆದ ಒಂದು ವರ್ಷದಿಂದ ಇಲ್ಲ. ನರ್ಸ್ ಮತ್ತು ಪ್ಯಾರ ಮೆಡಿಕಲ್ ಸಿಬ್ಬಂದಿಗಳ ಸಂಖ್ಯೆಯೂ ಕೂಡ ಕೊರತೆ ಕಂಡು ಬಂದಿತು ಎಂದರು.

ಜಿಲ್ಲಾ ಕಾರಾಗೃಹದ ನಿರ್ವಹಣೆ ಉತ್ತಮವಾಗಿದೆ. ಕ್ಲಿನಿಂಗ್ ಮತ್ತು ಗಾರ್ಡನ್ ಚೆನ್ನಾಗಿದೆ. ಅನಕ್ಷರಸ್ಥ ಕೈದಿಗಳಿಗೆ ಅಕ್ಷರಾಭ್ಯಾಸ ಮಾಡಿಸಲು ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ. ಇದೆಲ್ಲಾ ಪ್ರಶಂಸನೀಯವಾದುದು ಎಂದು ಹೇಳಿದರು.

ಇಲ್ಲಿನ ಬಂಧಿಖಾನೆಯಲ್ಲಿ ೧೫೫ ಮಂದಿ ಖೈದಿಗಳು ಇರಲು ಮಾತ್ರ ಅವಕಾಶ. ಆದರೆ, ಇದೀಗ ೧೭೮ ಮಂದಿ ಖೈದಿಗಳು ಇದ್ದಾರೆ. ಇವರುಗಳ ಪೈಕಿ ಸುಮಾರು ಶೇ. ೩೦ ಮಂದಿಗೆ ನ್ಯಾಯಾಲಯದಲ್ಲಿ ಅವರ ಪರವಾಗಿ ವಾದ ಮಾಡಲು ವಕೀಲರೇ ಇಲ್ಲ. ಅಂತಹವರಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ವಕೀಲರನ್ನು ಒದಗಿಸಲಾಗಿದೆ ಎಂದ ಅವರು, ಜೈಲಿನಲ್ಲಿರುವ ಖೈದಿಗಳ ಪೈಕಿ ಶೇ. ೨೫ ರಷ್ಟು ಮಂದಿ ಪೋಕ್ಸೋ ಕೇಸ್‌ನಲ್ಲಿರುವ ಬಂಧಿತರಾಗಿದ್ದವರು ಇದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಆಯೋಗದ ಕಾರ್ಯದರ್ಶಿ ಸುರೇಶ್ ಒಂಟಿಗೋಡು, ದಿನೇಶ್ ಸಂಪತ್‌ರಾಜ್ ಇದ್ದರು.

5021 cases of State Human Rights Commission disposed in last 6 months

About Author

Leave a Reply

Your email address will not be published. Required fields are marked *