September 19, 2024

ಕಟ್ಟು ನಿಟ್ಟಾದ ಕಾನೂನುಗಳಿಂದ ಮಹಿಳಾ ದೌರ್ಜನ್ಯ ತಡೆಗಟ್ಟಬಹುದು

0
ಬಾಲ್ಯವಿವಾಹ ನಿಷೇಧ ಕಾಯ್ದೆಯ ಕುರಿತು ಅರಿವು ಕಾರ್ಯಕ್ರಮ

ಬಾಲ್ಯವಿವಾಹ ನಿಷೇಧ ಕಾಯ್ದೆಯ ಕುರಿತು ಅರಿವು ಕಾರ್ಯಕ್ರಮ

ಚಿಕ್ಕಮಗಳೂರು: ದೇಶದಲ್ಲಿ ಕಟ್ಟು ನಿಟ್ಟಾದ ಕಾಯ್ದೆ ಕಾನೂನುಗಳನ್ನು ಜಾರಿ ಮಾಡಿದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆದು ರಕ್ಷಣೆ ನೀಡಲು ಸಹಕಾರಿಯಾಗಲಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಸದಸ್ಯ ಕಾರ್ಯದರ್ಶಿ ವಿ. ಹನುಮಂತಪ್ಪ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ಸಹಾಯವಾಣಿ-೧೦೯೮, ಡಿ.ಎ.ಸಿ.ಜಿ. ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಇಂದು ನಗರದ ಡಿ.ಎ.ಸಿ.ಜಿ ಸರ್ಕಾರಿ ಪಾಲಿಟ್ನೆಕಿಕ್ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ  ಮತ್ತು ಬಾಲ್ಯವಿವಾಹ ನಿಷೇಧ ಕಾಯ್ದೆಯ ಕುರಿತು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಎಲ್ಲಾ ಕಾಯ್ದೆ ಕಾನೂನುಗಳ ಮಾತೃಸ್ಥಾನ ಸಂವಿಧಾನವಾಗಿದೆ ಭಾರತದ ಸಂವಿಧಾನದಲ್ಲಿ ಪ್ರತಿಯೊಬ್ಬ ನಾಗರೀಕರಿಗೆ ಮೂಲಭೂತ ಹಕ್ಕು ಹಾಗೂ ಕರ್ತವ್ಯಗಳ ಬಗ್ಗೆ ಉಲ್ಲೇಖವಿದೆ. ಸಮಾಜದಲ್ಲಿ ಮಹಿಳೆಯರನ್ನು ಭಿನ್ನವಾಗಿ ಕಾಣುವ ವಿಪರ್ಯಾಸ ಇಂದಿಗೂ ಕಾಣಬಹುದು. ಹೆಣ್ಣು-ಗಂಡು ಎಂಬ ಭೇದ-ಭಾವವಿಲ್ಲದೆ ಎಲ್ಲರನ್ನು ಸಮಾನವಾಗಿ ಕಾಣಬೇಕು ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಗುರುತಿಸಿ ಕೊಳ್ಳುತ್ತಿದ್ದಾರೆ.

ಪುರುಷರಿಗಿಂತ ಯಾವುದರಲ್ಲೂ ಕಡಿಮೆ ಇಲ್ಲದಂತೆ ಧೈರ್ಯದಿಂದ ಸ್ಪರ್ಧಿಸುತ್ತಿದ್ದಾರೆ. ಆದಾಗ್ಯೂ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಲೆ ಇವೆ. ಇವುಗಳನ್ನು ತಡೆಗಟ್ಟಲು ಕಟ್ಟು ನಿಟ್ಟಾದ ಕಾನೂನುಗಳ ಜಾರಿ ಬಹಳ ಅವಶ್ಯಕ. ಮಹಿಳೆಯ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ, ವರದಕ್ಷಿಣೆ, ಭ್ರೂಣ ಹತ್ಯೆ, ಬಾಲ್ಯ ವಿವಾಹದಂತಹ ಸಾಮಾಜಿಕ ಪಿಡುಗುಗಳನ್ನು ಸಮಾಜದಿಂದ ಕಿತ್ತೊಗೆದು ಹೆಣ್ಣಿನ ರಕ್ಷಣೆಗೆ ಮುಂದಾಗಿ ಎಂದು ತಿಳಿಸಿದರು.

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಹಾಗೂ ಮಕ್ಕಳ ರಕ್ಷಣಾಧಿಕಾರಿ ಲೋಕೇಶ್ವರಪ್ಪ ಸಿ. ಮಾತನಾಡಿ ಪ್ರತಿಯೊಂದು ಮಗುವಿನ ಹಕ್ಕು ಮತ್ತು ರಕ್ಷಣೆಯು ತಾಯಿಯ ಗರ್ಭದಲ್ಲಿರುವಾಗಲೇ ಪ್ರಾರಂಭವಾಗುತ್ತದೆ. ಮಕ್ಕಳ ರಕ್ಷಣೆಗಾಗಿ ಸರ್ಕಾರವು ಅನೇಕ ಕಾಯ್ದೆ ಕಾನೂನುಗಳೊಂದಿಗೆ ಅವರ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳಾದ ಬೇಟಿ ಬಚಾವೋ, ಬೇಟಿ ಪಡವೋ, ಸುಕನ್ಯ ಸಮೃದ್ಧಿ ಯೋಜನೆ, ನಾರಿ ಶಕ್ತಿ ಪುರಸ್ಕಾರ, ಸ್ವಿಪ್ ಹಾಗೂ ಮಹಿಳಾ ಶಕ್ತಿ ಕೇಂದ್ರಗಳಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ.

ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ಸಮಗ್ರ ಸೌಲಭ್ಯ ನೀಡಲು ಸಖಿ-ಒನ್ ಸ್ಟಾಪ್ ಸೆಂಟರ್ ಯೋಜನೆಯನ್ನು ಜಾರಿ ಮಾಡಿದೆ ಎಂದ ಅವರು. ಪ್ರತಿಯೊಬ್ಬರು ಇವುಗಳ ಬಗ್ಗೆ ಅರಿತು ವಿಚಾರವಂತರಾಗಿ ಸಮಾಜದಲ್ಲಿ ಮಹಿಳೆಯರ ಸ್ಥಾನಮಾನವನ್ನು ಮತ್ತಷ್ಟು ಉತ್ತುಂಗಕ್ಕೇರಿಸಬೇಕೆಂದು  ತಿಳಿಸಿದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಭಿವೃದ್ಧಿ ಯೋಜನಾಧಿಕಾರಿ ರಂಗನಾಥ ಸಿ. PಔಅSಔ  ಹಾಗೂ ಇನ್ನಿತರ ಕಾಯ್ದೆಗಳ ಬಗ್ಗೆ ಉಪನ್ಯಾಸ ನೀಡಿದರು. ಡಿ.ಎ.ಸಿ.ಜಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಎಲೆಕ್ಟ್ರಾನಿಕ್ ಆಂಡ್ ಎಲೆಕ್ಟ್ರಿಕ್ ವಿಭಾಗದ ವಿಭಾಗಾಧಿಕಾರಿ  ಶ್ರೀಧರ್ ಹೆಚ್.ಆರ್  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಡಿ.ಎ.ಸಿ.ಜಿ. ಕಾಲೇಜಿನ ಉಪನ್ಯಾಸಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Awareness Program on Prohibition of Child Marriage Act

About Author

Leave a Reply

Your email address will not be published. Required fields are marked *

You may have missed