September 20, 2024
ಮಹಿಳಾ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಣೆ

ಮಹಿಳಾ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಣೆ

ಚಿಕ್ಕಮಗಳೂರು:ಮಹಿಳೆಯರು ಆರ್ಥಿಕವಾಗಿ ಸಬಲರಾಗಿ ಸಮಾಜದಲ್ಲಿ ಮುಂದೆ ಬರಬೇಕು ಎಂಬ ಕಾರಣಕ್ಕೆ ನಮ್ಮ ಸರಕಾರ ಮಹಿಳೆಯರಿಗಾಗಿ ಅನೇಕ ಯೋಜನೆ ಜಾರಿಗೆ ತಂದಿದೆ. ಅವುಗಳನ್ನು ಸದುಪಯೋಗಪಡಿಸಿಕೊಂಡು ಮುಂದೆ ಬರಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ಜಿಲ್ಲಾ ಪಂಚಾಯಿತಿ ಅಬ್ದುಲ್ ನಜೀರ್‌ಸಾಬ್ ಸಭಾಂಗಣದಲ್ಲಿ ದೇವರಾಜು ಅರಸು ಹಿದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಇಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಹಿಳಾ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಿಸಿ ಅವರು ಮಾತನಾಡಿದರು.

ದೇವರಾಜು ಅರಸು ಅಭಿವೃದ್ಧಿ ನಿಗಮದಿಂದ ಇಂದು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ೩೬ ಮಂದಿ ಬಡ, ಮಧ್ಯಮ ಕುಟುಂಬದ ಮಹಿಳೆಯರಿಗೆ ಹೊಲಿಗೆ ಯಂತ್ರ ನೀಡಲಾಗುತ್ತಿದೆ. ಬಡ, ಮಧ್ಯಮ ವರ್ಗದ ಮಹಿಳೆಯರು ಆರ್ಥಿಕವಾಗಿ ಮುಂದೆಬಂದು ತಮ್ಮ ಕಾಲ ಮೇಲೆ ತಾವು ನಿಲ್ಲಬೇಕು ಎಂಬುದು ಈ ಯೋಜನೆಯ ಉದ್ದೇಶವಾಗಿದೆ. ಅಧಿಕಾರಿಗಳು ಕೂಡ ಕಳಪೆ ಗುಣಮಟ್ಟದ ಹೊಲಿಗೆ ಯಂತ್ರ ನೀಡದೆ ಗುಣಮಟ್ಟ ಖಾತ್ರಿಪಡಿಸಿಕೊಂಡು ಕೊಡಬೇಕು ಎಂದು ತಾಕೀತು ಮಾಡಿದರು.

ನಮ್ಮ ಸರಕಾರ ಈಗಾಗಲೇ ಗೃಹಲಕ್ಷ್ಮಿ ಯೋಜನೆಯಡಿ ಹಣ ನೀಡುತ್ತಿದೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಈ ಹಿಂದೆ ಕೃಷಿ ಜತೆಗೆ ಇತರೆ ಉಪಕಸುಬುಗಳನ್ನು ನಮ್ಮ ಹಿರಿಯರು ರೂಢಿಸಿಕೊಳ್ಳುತ್ತಿದ್ದರು. ಅಂತಯೇ ಈಗಿನವರು ಕೂಡ ಕೃಷಿ ಜತೆಗೆ ಉಪ ಕಸುಬುಗಳಾದ ಹೊಲಿಯುವುದನ್ನು ಕಲಿತು ಮುಂದೆ ಬನ್ನಿ ಎಂದರು.

ದೇವರಾಜು ಅರಸು ಅಭಿವೃದ್ಧಿ ನಿಗಮದ ಅಧಿಕಾರಿ ರಾಕೇಶ್ ಮಾತನಾಡಿ, ತಲಾ ೧೫-೨೦ ಸಾವಿರ ರೂ. ವೆಚ್ಚದ ಹೊಲಿಗೆ ಯಂತ್ರಗಳನ್ನು ಮಹಿಳೆಯರಿಗೆ ನೀಡಲಾಗುತ್ತಿದೆ. ಶಾಸಕರ ಆಯ್ಕೆ ಸಮಿತಿಯಲ್ಲಿ ಫಲಾನುಭವಿಗಳ ಪಟ್ಟಿ ತಯಾರಿಸಿ ಅರ್ಹರಿಗೆ ನೀಡಲಾಗುತ್ತಿದೆ ಎಂದರು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸೋಮಶೇಖರ್, ತಾಲೂಕು ಪಂಚಾಯಿತಿ ಇಒ ತಾರಾನಾಥ್ ಮತ್ತಿತರರು ಉಪಸ್ಥಿತರಿದ್ದರು.

Distribution of sewing machines to women beneficiaries

About Author

Leave a Reply

Your email address will not be published. Required fields are marked *