September 20, 2024

ಅತೀವೃಷ್ಟಿ ಹಾನಿ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿಗೆ ಆಗ್ರಹ

0
ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಸುದ್ದಿಗೋಷ್ಠಿ

ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಸುದ್ದಿಗೋಷ್ಠಿ

ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ವಿಪರೀತ ಮಳೆಯಾಗುತ್ತಿರುವುದರಿಂದ ಜಿಲ್ಲಾ ಉಸ್ತುವಾರಿ ಸಚಿವರು ಅತಿವೃಷ್ಟಿಯಿಂದ ಹಾನಿಯಾಗಿರುವ ಎಲ್ಲಾ ಪ್ರದೇಶಗಳಿಗೆ ಭೇಟಿನೀಡಿ ಪರಿಸ್ಥಿತಿ ಅವಲೋಕಿಸಿ ವರದಿಯನ್ನು ಸಿದ್ದಪಡಿಸಿ ಸರ್ಕಾರದಿಂದ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡುವಂತೆ ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಒತ್ತಾಯಿಸಿದರು.

ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ಶಾಸಕರೊಂದಿಗೆ ಅತಿಥಿಗಳಂತೆ ಬಂದು ಹೋಗುತ್ತಿದ್ದಾರೆ. ಅತಿವೃಷ್ಟಿ ಹಾನಿ ಪ್ರದೇಶಗಳಲ್ಲಿ ಸಂತ್ರಸ್ತರಿಗಾಗಿ ಕಾಳಜಿ ಕೇಂದ್ರ ತೆರೆದು ನೆರವು ನೀಡಬೇಕು. ಮೂಡಿಗೆರೆ ಶಾಸಕರು ಇದಾವುದನ್ನು ಮಾಡುತ್ತಿಲ್ಲ. ಅತಿವೃಷ್ಟಿ ಪರಿಶೀಲನೆಯಲ್ಲಿ ವಿಫಲರಾಗಿದ್ದಾರೆಂದು ಆರೋಪಿಸಿದರು.

ದಲಿತರ ಅಭಿವೃದ್ಧಿಗೆ ಮೀಸಲಿದ್ದ ಹಣವನ್ನು ಈ ಸರಕಾರ ಗ್ಯಾರಂಟಿಗೆ ಬಳಸಿದೆ, ಮುಡಾ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಸಹಸ್ರಾರು ಕೋಟಿ ರೂ.ಮೊತ್ತದ ಭ್ರಷ್ಟಾಚಾರ ನಡೆದಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರಕಾರ ಎಸ್‌ಇಪಿ ಮತ್ತು ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುವ ಮೂಲಕ ದಲಿತರಿಗೆ ಅನ್ಯಾಯ ಮಾಡಿದೆ. ಅಹಿಂದ ನಾಯಕ ಎಂದು ಹೇಳಿಕೊಳ್ಳುವ ಸಿಎಂ ಸಿದ್ದರಾಮಯ್ಯ ಅವರಿಂದಲೇ ದಲಿತರಿಗೆ ಮೋಸವಾಗಿದೆ. ದಲಿತ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸ ಮಾಡಲು ವಿದೇಶಕ್ಕೆ ಹೋಗಬೇಕದರೆ ಹಣಕಾಸಿನ ನೆರವಿಗೆ ನಮ್ಮ ಸರಕಾರ ಪ್ರಬುದ್ಧ ಎಂಬ ಯೋಜನೆ ಜಾರಿ ಮಾಡಿತ್ತು. ಆದರೆ, ಈ ಸರಕಾರ ಆ ಯೋಜನೆಯನ್ನೇ ರದ್ದು ಮಾಡಿದೆ ಎಂದು ಆರೋಪಿಸಿದರು.

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಯಲ್ಲಿ ಶೇ.೬೦ ಅಂಕ ಪಡೆದ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಬಹುಮಾನ ಹಣವನ್ನು ನೀಡಲಾಗುತ್ತಿತ್ತು. ಇವರ ಅವಧಿಯಲ್ಲಿ ಅದನ್ನೂ ನಿಲ್ಲಿಸಿದ್ದಾರೆ. ಶೇ.೪೦ ಸರಕಾರ ಎಂದು ಹಿಂದಿನ ಬಿಜೆಪಿ ಸರಕಾರವನ್ನು ಟೀಕಿಸುತ್ತಿದ್ದ ಸಿದ್ದರಾಮಯ್ಯ ನೇತೃತ್ವದ ಸರಕಾರ ವಾಲ್ಮೀಕಿ ಅಭಿವೃದ್ಧಿ ನಿಗಮದ ೧೮೭ ಕೋಟಿ ರೂ.ಗಳ ಹಣ ವರ್ಗಾವಣೆ ಮಾಡಿದೆ. ಇಷ್ಟೊಂದು ದೊಡ್ಡ ಮೊತ್ತದ ಹಣ ವರ್ಗಾವಣೆ ಆಗಬೇಕಾದರೆ ಅದು ಸಿಎಂ ಗಮನಕ್ಕೆ ಬಾರದಿರಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಈ ಎಲ್ಲ ಹಗರಣಗಳ ನೈತಿಕ ಹೊಣೆ ಹೊತ್ತು ಸಿಎಂ ಕೂಡಲೇ ರಾಜೀನಾಮೆ ನೀಡಬೇಕು. ನೀಡದಿದ್ದರೆ, ಬಿಜೆಪಿ ಹಮ್ಮಿಕೊಂಡಿರುವ ಬೆಂಗಳೂರು ಮೈಸೂರು ಪಾದಯಾತ್ರೆ ಅಂತ್ಯವಾಗುವುದರೊಳಗೆ ಸರಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ವಕ್ತಾರ ಸೋಮಶೇಖರ್, ಆಲ್ದೂರು ಮಂಡಲದ ಅಲ್ವಿನ್ ಉಪಸ್ಥಿತರಿದ್ದರು

Demand for visit of district in-charge minister to heavy rain damaged areas

About Author

Leave a Reply

Your email address will not be published. Required fields are marked *