September 20, 2024

ಸಿದ್ದರಾಮಯ್ಯರನ್ನು ಅಧಿಕಾರದಿಂದ ಇಳಿಸುವ ಷಡ್ಯಂತ್ರದ ವಿರುದ್ಧ ಇಂದು ಪ್ರತಿಭಟನೆ

0
ಅಹಿಂದ ಹಾಗೂ ವಿವಿಧ ಸಂಘಟನೆಗಳ ಮುಖಂಡರ ಪತ್ರಿಕಾಗೋಷ್ಠಿ

ಅಹಿಂದ ಹಾಗೂ ವಿವಿಧ ಸಂಘಟನೆಗಳ ಮುಖಂಡರ ಪತ್ರಿಕಾಗೋಷ್ಠಿ

ಚಿಕ್ಕಮಗಳೂರು:  ಇಡೀ ದಕ್ಷಿಣ ಭಾರತದಲ್ಲಿ ಶೋಷಿತ ಹಾಗೂ ಎಲ್ಲಾ ಜನಸಮುದಾಯದ ನಾಯಕರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಕೆಳಗಿಳಿಸಲು ನಡೆಸುತ್ತಿರುವ ಪಿತೂರಿಯ ವಿರುದ್ಧ ನಾಳೆ(ಆ.೭) ರಂದು ಎಲ್ಲಾ ದಲಿತ, ಹಿಂದುಳಿದ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಲಿದ್ದಾರೆ.

ವಿವಿಧ ಸಂಘಟನೆಗಳ ಮುಖಂಡರುಗಳ ಸಮ್ಮುಖದಲ್ಲಿ ಇಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮಾಜಿ ಸಚಿವ ಬಿ.ಬಿ ನಿಂಗಯ್ಯ ಅವರು ಮೂಲಭೂತವಾದಿಗಳು ಕೇಂದ್ರ ಸರ್ಕಾರವನ್ನು ಬಳಸಿಕೊಂಡು ರಾಜ್ಯಪಾಲರ ಮೂಲಕ ನೋಟೀಸ್ ಕೊಡಿಸಿ ಸಿದ್ದರಾಮಯ್ಯ ಅವರ ಸರ್ಕಾರವನ್ನು ಅಸ್ತಿರಗೊಳಿಸಲು ನಡೆಸುತ್ತಿರುವ ಷಡ್ಯಂತ್ರದ ಬಗ್ಗೆ ಎಲ್ಲಾ ಸಂಘಟನೆಗಳು ಖಂಡಿಸಿ ಈ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಹೇಳಿದರು.

ಸಿದ್ದರಾಮಯ್ಯ ಅವರ ೪೦ ವರ್ಷಗಳ ರಾಜಕೀಯ ಇತಿಹಾಸದಲ್ಲಿ ಭ್ರಷ್ಟಾಚಾರದ ಯಾವುದೇ ಕಪ್ಪುಚುಕ್ಕಿಯನ್ನು ತಮಗೆ ತಾಕಿಸಿಕೊಂಡಿಲ್ಲ. ಆದರೆ ಹಗರಣವೇ ಅಲ್ಲದ ಮುಡಾ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ಮತ್ತು ಜೆಡಿಎಸ್ ನವರು ಬೀದಿನಾಟಕ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ನಡೆದಿರುವ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಬಗ್ಗೆ ಈಗಾಗಲೇ ತನಿಖಾ ತಂಡ ರಚಿಸಿ ಸಂವಿಧಾನ ಬದ್ಧವಾಗಿ ತನಿಖೆ ನಡೆಯುತ್ತಿದೆ. ಅದೇ ರೀತಿ ಮುಡಾ ನಿವೇಶನ ಹಂಚಿಕೆ ಬಗ್ಗೆ ಸಂಪೂರ್ಣ ದಾಖಲೆಗಳ ಸಹಿತ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸದನದಲ್ಲಿ ಹಾಗೂ ಮಾಧ್ಯಮಗಳ ಮೂಲಕ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಹೀಗಿದ್ದರೂ ಬಿಜೆಪಿ-ಜೆಡಿಎಸ್‌ನವರು ಪಾದಯಾತ್ರೆ ಮೂಲಕ ಬೀದಿ ರಂಪ ಮಾಡುತ್ತಿರುವುದು ಸಿದ್ದರಾಮಯ್ಯನವರ ರಾಜಕೀಯ ಭವಿಷ್ಯವನ್ನು ತೇಜೋವಧೆಗೆ ಕುತಂತ್ರ ಎಂದು ಹೇಳಿದರು.

ಎರಡು ಬಾರಿ ಮುಖ್ಯಮಂತ್ರಿಗಳಾಗಿ ಜನಪ್ರಿಯ ೧೫ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯನವರು ತನ್ನ ರಾಜಕೀಯ ಜೀವನದಲ್ಲಿ ನಡೆದುಕೊಂಡು ಬಂದಿರುವ ರೀತಿ ತೆರೆದ ಪುಸ್ತಕವಾಗಿದೆ ಎಂದು ಅವರೇ ಹೇಳಿದ್ದಾರೆ. ಸಿದ್ದರಾಮಯ್ಯನವರ ಅಧಿಕಾರವಧಿಯಲ್ಲಿ ರಾಜ್ಯದ ಎಲ್ಲಾ ಜನರಿಗೆ ಅನುಕೂಲವಾಗುವಂತೆ ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದು ಸಮಸ್ತ ಶೋಷಿತ ಜನರ ಪರವಾಗಿ ಇಡೀ ದಕ್ಷಿಣ ಭಾರತದಲ್ಲಿ ಏಕೈಕ ನಾಯಕರಾಗಿದ್ದಾರೆ. ಇವರನ್ನು ಕೆಳಗಿಳಿಸಲು ಮೂಲಭೂತವಾದಿಗಳು ಪಿತೂರಿ ನಡೆಸುತ್ತಿದ್ದಾರೆಂದು ಟೀಕಿಸಿದರು.

ಮುಖ್ಯಮಂತ್ರಿಯವರಿಗೆ ರಾಜ್ಯಪಾಲರು ನೋಟೀಸ್ ನೀಡಿರುವುದು ಅಸಂವಿಧಾನಿಕ ಹಾಗೂ ಕಾನೂನು ಬಾಹಿರವಾಗಿದೆ ಎಂದು ಆರೋಪಿಸಿದ ನಿಂಗಯ್ಯ ಅವರು ಈ ಕುರಿತು ದೂರು ನೀಡಿರುವ ದೂರುದಾರರ ಹಿನ್ನೆಲೆಯನ್ನು ಪರಿಶೀಲಿಸಬೇಕು. ಅದನ್ನು ಬಿಟ್ಟು ಏಕಾಏಕಿಯಾಗಿ ರಾಜ್ಯಪಾಲರು ನೋಟೀಸ್ ನೀಡಿರುವ ಕ್ರಮವನ್ನು ಖಂಡಿಸಿದರು.

ಎಲ್ಲಾ ಜನವರ್ಗದ ನಾಯಕರಾಗಿರುವ ಸಿದ್ದರಾಮಯ್ಯನವರ ಪರವಾಗಿ ಇಡೀ ರಾಜ್ಯದ ಜನತೆ ಬೆಂಬಲಕ್ಕೆ ನಿಂತಿದ್ದಾರೆ. ಇಂತಹವರನ್ನು ಅಧಿಕಾರದಿಂದ ಇಳಿಸಲು ನಡೆಸುತ್ತಿರುವ ಪಿತೂರಿಯ ವಿರುದ್ಧ ನಾಳೆ ಸಹಸ್ರಾರು ಸಂಖ್ಯೆಯಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು, ಸಾರ್ವಜನಿಕರು, ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿ ತಾಲ್ಲೂಕು ಕಚೇರಿಯಿಂದ ಮೆರವಣಿಗೆ ಹೊರಟು ಎಂ.ಜಿ ರಸ್ತೆ ಮೂಲಕ ಸಾಗಿ, ಆಜಾದ್ ಪಾರ್ಕ್‌ನಲ್ಲಿ ಸಮಾವೇಶಗೊಂಡು ಪ್ರತಿಭಟನೆ ನಡೆಸಿದ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರೇಖಾ ಹುಲಿಯಪ್ಪಗೌಡ ಮಾತನಾಡಿ, ರಾಜ್ಯದ ಏಕೈಕ ಹಿಂದುಳಿದ ವರ್ಗಗಳ ನಾಯಕರಾಗಿರುವ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸುವ ಪ್ರಯತ್ನವನ್ನು ಬಿಜೆಪಿ-ಜೆಡಿಎಸ್ ನಡೆಸುತ್ತಿರುವುದು ಖಂಡನೀಯ, ಇವರ ವಿರುದ್ಧ ಹಮ್ಮಿಕೊಂಡಿರುವ ಪ್ರತಿಭಟನೆಗೆ ಕಾರ್ಯಕರ್ತರು, ಸಾರ್ವಜನಿಕರು, ಮಹಿಳೆಯರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಮರ್ಲೆ ಅಣ್ಣಯ್ಯ ಮಾತನಾಡಿ, ಹಿಂದುಳಿದ ನಾಯಕರಾದ ದೇವರಾಜ್ ಅರಸ್, ಧರ್ಮಸಿಂಗ್, ಬಂಗಾರಪ್ಪ, ವೀರಪ್ಪ ಮೊಯ್ಲಿ ಇವರ ಪೈಕಿ ಯಾರಿಗೂ ೫ ವರ್ಷ ಅಧಿಕಾರ ಪೂರೈಸಲು ಬಿಡದೆ ಷಡ್ಯಂತ್ರ ನಡೆಸಲಾಗಿತ್ತು, ಆದರೆ ಕಳೆದ ೫ ವರ್ಷಗಳ ಕಾಲ ಪೂರ್ಣಾವಧಿ ಅಧಿಕಾರ ನಡೆಸಿರುವ ಸಿದ್ದರಾಮಯ್ಯ ಅವರನ್ನು ಸಹಿಸಿಕೊಳ್ಳಲಾಗದೆ ಹೊಟ್ಟೆಉರಿಯಿಂದ ಬಿಜೆಪಿ-ಜೆಡಿಎಸ್‌ನವರು ಪಾಪದ ಪಾದಯಾತ್ರೆ ನಡೆಸುತ್ತಿದ್ದಾರೆಂದು ಟೀಕಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ ಮಂಜೇಗೌಡ, ಅಹಿಂದ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಿ.ಸಿ ಪುಟ್ಟೇಗೌಡ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆ.ಎಂ ಮಂಜುನಾಥ್, ನೇಕಾರ ಸಂಘದ ಅಧ್ಯಕ್ಷ ನಾರಾಯಣ, ಮಾದಿಗ ದಂಡೋರ ಸಮಿತಿ ಅಧ್ಯಕ್ಷ ರಮೇಶ್, ಮುಸ್ಲಿಂ ಧರ್ಮಗುರು ಔರಂಗ ಪಾಷ, ನಗರಸಭಾ ಸದಸ್ಯ ಮುನೀರ್, ಪರಮೇಶ್, ಮಲ್ಲೇಶ್‌ಸ್ವಾಮಿ, ಜೇಮ್ಸ್ ಡಿಸೋಜ ಸೇರಿದಂತೆ ಶೋಷಿತ ವರ್ಗಗಳ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು

Protest today against the conspiracy to remove Siddaramaiah from power

About Author

Leave a Reply

Your email address will not be published. Required fields are marked *