September 20, 2024

ನಗರದ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣಕ್ಕೆ ಹೈಟೆಕ್ ಸ್ಪರ್ಷ

0
ನಗರದ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣ

ನಗರದ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣ

ಚಿಕ್ಕಮಗಳೂರು: ರಾಜ್ಯದ ಪ್ರಮುಖ ಪ್ರವಾಸಿ ಕೇಂದ್ರವಾಗಿರುವ ಚಿಕ್ಕಮಗಳೂರು ಜಿಲ್ಲೆಯ ಕೇಂದ್ರ ಸ್ಥಾನದಲ್ಲಿರುವ ಕೆಎಸ್ ಆರ್‌ಟಿಸಿ ಬಸ್ ನಿಲ್ದಾಣವನ್ನು ನೂತನವಾಗಿ ಹೈಟೆಕ್ ಬಸ್ ನಿಲ್ದಾಣವನ್ನಾಗಿಸಲು ಯೋಜನೆ ಸಿದ್ಧಗೊಳಿಸಲಾಗುತ್ತಿದೆ.

ನಗರದ ಹೃದಯ ಭಾಗವಾದ ಐ.ಜಿ. ರಸ್ತೆಯಲ್ಲಿರುವ ಬಸ್ ನಿಲ್ದಾಣದಲ್ಲಿ ಅಂತರ ಜಿಲ್ಲಾ ಸಾರಿಗೆ ಹಾಗೂ ಗ್ರಾಮಾಂತರ ಸಾರಿಗೆ ಒಟ್ಟಿಗೆ ಇದ್ದ ಪರಿಣಾಮ ಜಾಗಕಿರಿದಾಗಿತ್ತು. ಪಕ್ಕದಲ್ಲಿದ್ದ ಜಿಲ್ಲಾ ಕಾರಾಗೃಹ ಜಾಗವನ್ನು ಬಸ್ ನಿಲ್ದಾಣಕ್ಕೆ ನೀಡಲಾಗಿದ್ದು ಈಗ ಗ್ರಾಮಾಂತರ ಸಾರಿಗೆ ವ್ಯವಸ್ಥೆಯನ್ನು ಅಲ್ಲಿಗೆ ವರ್ಗಾಯಿಸಲಾಗಿದೆ.

ಈ ಎರಡು ಬಸ್ ನಿಲ್ದಾಣಗಳ ನಡುವೆ ೧೨ ಮೀಟರ್ ರಸ್ತೆ ನಗರಸಭೆಗೆ ಸೇರಿದ್ದು ಈ ರಸ್ತೆಯಿಂದ ಕುವೆಂಪು ಕಲಾಮಂದಿರ ಹಾಗೂ ಕುವೆಂಪು ಕಲಾಮಂದಿರದ ಹಿಂಭಾಗ ಇರುವ ನಗರಸಭೆ ಮಳಿಗೆಗಳು, ಆದ್ರಿಕ ಹೋಟೆಲ್, ವಿಲನ್ ಚಿತ್ರಮಂದಿರ ಹಾಗೂ ಕಾಂಗ್ರೆಸ್ ಕಚೇರಿಗೆ ತೆರಳಲು ಈ ರಸ್ತೆಯನ್ನು ಬಳಸಿಕೊಳ್ಳಲಾಗುತ್ತಿದೆ.

ಬಸ್ ನಿಲ್ದಾಣದ ದಕ್ಷಿಣ ಭಾಗದಲ್ಲಿಯೂ ನಗರಸಭೆಯ ೧೨ ಮೀಟರ್ ರಸ್ತೆ ಇದ್ದು ಇದು ಕೂಡ ಬಳಸಿಕೊಳ್ಳಲಾಗುತ್ತಿದೆ. ಈ ರಸ್ತೆಗೆ ನಿಲ್ದಾಣದ ೧೨ ಮೀಟರ್ ಜಾಗವನ್ನು ಹೆಚ್ಚುರಿಯಾಗಿ ನೀಡಿ ಡಬ್ಬಲ್ ರೋಡ್ ಮಾಡುವುದಲ್ಲದೆ ಕುವೆಂಪು ಕಲಾಮಂದಿರದ ಮುಂಭಾಗದಲ್ಲಿರುವ ನಿಲ್ದಾಣದ ಕಾಂಪೌಂಡ್ ತೆರುವುಗೊಳಿಸಿ ನಿಲ್ದಾಣದ ೧೨ ಮೀಟರ್ ಜಾಗವನ್ನು ರಸ್ತೆಯನ್ನಾಗಿ ಮಾಡುವುದರಿಂದ ಬಸ್ ನಿಲ್ದಾಣದ ದಕ್ಷಿಣ ಭಾಗದ ರಸ್ತೆಯು ಡಬ್ಬಲ್ ರಸ್ತೆಯಾಗಿ ಹಾಗೂ ಹಿಂಭಾಗದಲ್ಲಿ ಎರಡು ರಸ್ತೆಗಳು ಕೂಡಿ ವಾಹನಗಳು ಹಾಗೂ ಪಾದ ಚಾರಿಗಳಿಗೂ ಓಡಾಡಲು ಅನುಕೂಲವಾಗುವಂತೆ ಯೋಜನೆ ತಯಾರಿಸಲಾಗುತ್ತಿದೆ ಎನ್ನಲಾಗಿದೆ.

ಅದಕ್ಕೆ ಪರಿಹಾರವಾಗಿ ಈಗ ಹಾಲಿ ನಿಲ್ದಾಣದ ಉತ್ತರದಲ್ಲಿರುವ ನಗರ ಸಭೆಯ ರಸ್ತೆಯ ಜಾಗವನ್ನು ಬಸ್ ನಿಲ್ದಾಣಕ್ಕೆ ಸೇರಿಸಿಕೊಂಡರೆ ಇಂದಿರಾ ಕ್ಯಾಂಟೀನ್ ನಿಂದ ಹಿಡಿದು ಹಾಲಿ ಬಸ್ ನಿಲ್ದಾಣದವರೆಗೆ ಒಂದೇ ಜಾಗವಾಗಿ ಮಾರ್ಪಾಡಾಗುತ್ತದೆ.ಈ ರೀತಿ ಮಾರ್ಪಾಡು ಮಾಡಿದಾಗ ೧೯೦ ಮೀಟರ್ ಅಗಲ ರಸ್ತೆಗೆ ಮುಖ ಮಾಡಿ ಬಸ್ ನಿಲ್ದಾಣಕ್ಕೆ ಜಾಗ ಸಿಗುತ್ತದೆ ಹಾಗೆಯೇ ೫೪ ಮೀಟರ್ ಉದ್ದ ಒಂದೇ ನಿವೇಶನವಾಗಿ ಪರಿವ ರ್ತನೆಯಾಗಿ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಲು ಸೂಕ್ತ ಜಾಗವೆನಿಸುತ್ತದೆ ಎಂದು ಅಧಿಕಾರಿಗಳು ಲೆಕ್ಕಾಚಾರ ಹಾಕಿದ್ದಾರೆ.

ಒಟ್ಟು ಐದು ಅಂತಸ್ತಿನ ಬಸ್ ನಿಲ್ದಾಣದ ಕಟ್ಟಡ ನಿರ್ಮಿಸಲು ೧೫೦ ಕೋಟಿ ರೂಪಾಯಿಗಳ ವೆಚ್ಚ ಅಂದಾಜಿಸಿದ್ದು.ನೆಲ ಅಂತಸ್ತಿನಲ್ಲಿ ೨೦೦ ಕಾರು ೫೦೦ ಬೈಕುಗಳ ನಿಲುಗಡೆಗೆ ಸ್ಥಳಾವಕಾಶವಾಗಲಿದ್ದು ಮೊದಲ ಅಂತಸ್ತಿನಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಲು ಹಾಗೂ ಅದರ ಎರಡು, ಮೂರು,ನಾಲ್ಕನೇ ಅಂತಸ್ತಿನಲ್ಲಿ ಕಚೇರಿಗಳು ಹಾಗೂ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎನ್ನಲಾಗಿದೆ.

ಉದ್ದೇಶಿತ ಯೋಜನೆ ಕಾರ್ಯಕರ್ತವಾಗಲು ಜಿಲ್ಲಾಡಳಿತ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಪ್ರಮುಖ ಪಾತ್ರ ವಹಿಸಬೇಕಾಗಿದೆ.ಒಮ್ಮೆಲೆ ಐದು ಅಂತಸ್ತಿನ ಕಟ್ಟಡಕ್ಕೆ ಅನುಮೋದನೆ ತರಲು ಕಷ್ಟವಾದರೂ ಎರಡು ಅಂತಸ್ತಿನ ಯೋಜನೆ ರೂಪಿಸಿಕೊಂಡರೆ ಹಂತ ಹಂತವಾಗಿ ಐದು ಅಂತಸ್ತಿನ ಕಟ್ಟಡವನ್ನು ಪೂರ್ಣಗೊಳಿಸಬಹುದಾಗಿದೆ.

ಈಗಾಗಲೇ ಕೆಎಸ್‌ಆರ್‌ಟಿಸಿ ಚಿಕ್ಕಮಗಳೂರು ವಿಭಾಗದ ನಿಯಂತ್ರಣಾಧಿಕಾರಿ ಜಗದೀಶ್‌ಕುಮಾರ್ ಈ ಬಗ್ಗೆ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿ ಮೀನಾನಾಗರಾಜ್ ಅವರಿಗೆ ವಿವರಿಸಿದ್ದು ಜಿಲ್ಲಾಧಿಕಾರಿಗಳು ಮೌಖಿಕವಾಗಿ ಒಪ್ಪಿಗೆ ನೀಡಿದ್ದು ಯೋಜನೆ ಕಾರ್ಯಕರ್ತಗೊಳಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಿದ್ಧಪಡಿಸಿಕೊಳ್ಳಲು ಸೂಚಿಸಿದ್ದಾರೆನ್ನಲಾಗಿದೆ.

ಮುಖ್ಯವಾಗಿ ಜಿಲ್ಲೆಯ ಐದು ಮಂದಿ ಶಾಸಕರುಮ ವಿಧಾನ ಪರಿಷತ್ ಸದಸ್ಯರು ಜಿಲ್ಲಾ ಉಸ್ತುವಾರಿ ಸಚಿವರನ್ನು ಒಳಗೊಂಡಂತೆ ಸಾರಿಗೆಸಚಿವರು ಮತ್ತು ಮುಖ್ಯಮಂತ್ರಿಗಳನ್ನು ಮನವೊಲಿಸಿ ಅನುದಾನ ತರುವಲ್ಲಿ ಯಶಸ್ವಿಯಾಗುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

A high-tech touch for the city’s KSRTC bus stand

About Author

Leave a Reply

Your email address will not be published. Required fields are marked *