September 20, 2024
ಆರಾಧನಾ ಸಂಗೀತ ಶಾಲೆಯಲ್ಲಿ ನಡೆದ ಅಭಿನಂದನಾ ಸಮಾರಂಭ

ಆರಾಧನಾ ಸಂಗೀತ ಶಾಲೆಯಲ್ಲಿ ನಡೆದ ಅಭಿನಂದನಾ ಸಮಾರಂಭ

ಚಿಕ್ಕಮಗಳೂರು: ನಮ್ಮ ಸಂಸ್ಥೆಯ ಗಾಯಕಿ ಅಮೇರಿಕಾದ ರಿಚ್ಮಂಡ್‌ನಲ್ಲಿ ನಡೆಯುವ ಅಕ್ಕ ಸಮ್ಮೇಳನದಲ್ಲಿ ಗಾಯನ ನೀಡಲು ತೆರಳುತ್ತಿರುವುದು ಹೆಮ್ಮೆಯ ಸಂಗತಿ. ಇದು ಪರಿಶ್ರ್ರಮದ ಸಂಗೀತ ಸಾಧನೆಗೆ ಸಂದ ಫಲ ಎಂದು ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ ಹೇಳಿದರು.

ಗಾಯನ ಕಾರ್ಯಕ್ರಮ ನೀಡಲು ಅಮೇರಿಕಾಕ್ಕೆ ತೆರಳುತ್ತಿರುವ ಗಾಯಕಿ ರಶ್ಮಿ ಮಂಜುನಾಥ್ ಅವರಿಗೆ ನಗರದ ಬಸವನಹಳ್ಳಿ ಮುಖ್ಯರಸ್ತೆಯಲ್ಲಿರುವ ಆರಾಧನಾ ಸಂಗೀತ ಶಾಲೆಯಲ್ಲಿ ಸುಗಮ ಸಂಗೀತ ಗಂಗಾ ಸಂಸ್ಥೆ ಇತ್ತೀಚೆಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಶಾರೀರವನ್ನು ಕಾಪಾಡಿಕೊಳ್ಳುವುದರೊಂದಿಗೆ ಮೈಸೂರು ವಿ.ವಿ.ಯಲ್ಲಿ ಸಂಗೀತ ಉಪನ್ಯಾಸಕಿಯಾಗಿದ್ದುಕೊಂಡು ಸುಗಮ ಸಂಗೀತದ ಬಗ್ಗೆಯೇ ಪಿ.ಎಚ್.ಡಿ. ಮಾಡುತ್ತಿರುವ ರಶ್ಮಿ ತೊಗರಿಹಂಕಲ್‌ನಂತಹ ಪುಟ್ಟ ಹಳ್ಳಿಯಿಂದ ಬಂದವರು. ಸ್ವಯಂ ಸಾಧನೆ ಮತ್ತು ಗುರು ಮಾರ್ಗದರ್ಶನ ಅವರನ್ನು ಈ ಯಶಸ್ಸು, ಗೌರವಕ್ಕೆ ಭಾಜನರನ್ನಾಗಿಸಿದೆ ಎಂದು ಅವರು ನುಡಿದರು.

ಸುಗಮ ಸಂಗೀತ ಗಂಗಾದ ಅರವಿಂದ ದೀಕ್ಷಿತ್ ಮಾತನಾಡಿ, ನಮ್ಮ ನಡುವೆ ಓದಿ ಕಲಿತವರೊಬ್ಬರು ಅಕ್ಕ ಸಮ್ಮೇಳನಕ್ಕೆ ತೆರಳುತ್ತಿರುವುದು ಸಂಸ್ಥೆಗೆ ಸಂದ ಗೌರವ ಎಂದರು.

ಗಾಯಕ ನಾಗರಾಜರಾವ್ ಕಲ್ಕಟ್ಟೆ ಮಾತನಾಡಿ, ರಶ್ಮಿ ಎಂದೂ ಅಹಂಕಾರಿಯಾಗಲೇ ಇಲ್ಲ. ಕೀರ್ತಿ, ಹೆಸರು ಅವರನ್ನು ಅಪ್ಪಿದಾಗಲೂ ಅವರು ಸಂಗೀತ ಸಾಧನೆಯೇ ಸರ್ವಸ್ವ ಎಂದು ನಂಬಿ ವಿನಯದಿಂದ ನಡೆದವರು ಎಂದರು.

ಸುಗಮ ಸಂಗೀತ ಗಂಗಾದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಕಾಮತ್ ಆಶಯ ನುಡಿಯಾಡಿದರು. ಖಜಾಂಚಿ ಸುಮಾ ಪ್ರಸಾದ್, ಪ್ರೀತಿ ಅನಿಸಿಕೆ ವ್ಯಕ್ತಪಡಿಸಿದರು. ಶಾರದಾ ಗಿರೀಶ್, ದೀಪ್ತಿ, ವೀಣಾ ಅರವಿಂದ್, ಶುಭಾ ಮೊದಲಾದವರು ಹಾಜರಿದ್ದರು. ರಶ್ಮಿ ಅವರಿಂದ ಗೀತಗಾಯನ ನಡೆಯಿತು.

Hard work pays off in musical achievement

About Author

Leave a Reply

Your email address will not be published. Required fields are marked *