September 20, 2024

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿಸ್ವಾರ್ಥದಿಂದ ಜನಸೇವೆ

0
ಸುಜ್ಞಾನ ನಿಧಿ ಶಿಷ್ಯ ವೇತನ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮ

ಸುಜ್ಞಾನ ನಿಧಿ ಶಿಷ್ಯ ವೇತನ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮ

ಚಿಕ್ಕಮಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜನಪರ ಯೋಜನೆಗಳ ಜೊತೆಗೆ ಮಹಿಳೆಯರ ಆರ್ಥಿಕ ಸಬಲೀಕರಣಗೊಳಿಸಿ ಬದುಕಲು ಸರ್ಕಾರಕ್ಕೆ ಸಮಾನವಾಗಿ ಕೆಲಸ ಮಾಡುತ್ತಿದೆ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ತಿಳಿಸಿದರು.

ಅವರು ಇಂದು ಜಿಲ್ಲಾ ಕಚೇರಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಏರ್ಪಡಿಸಿದ್ದ ಸುಜ್ಞಾನ ನಿಧಿ ಶಿಷ್ಯ ವೇತನ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿಸ್ವಾರ್ಥದಿಂದ ಮಾಡುತ್ತಿರುವ ಜನಸೇವೆ ಮಹಿಳೆಯರ ಮತ್ತು ಬಡವರ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ವಾಣಿಜ್ಯ ಬ್ಯಾಂಕ್‌ಗಳ ಮೂಲಕ ಸಾಲಸೌಲಭ್ಯವನ್ನು ನೀಡಿ, ಹಲವು ಗುಡಿ ಕೈಗಾರಿಕೆ ಸೇರಿದಂತೆ ಜನರಪರ ಯೋಜನೆಗಳನ್ನು ರೂಪಿಸಿದೆ ಎಂದು ಶ್ಲಾಘಿಸಿದರು.

ಕೆಲವು ಹಳ್ಳಿಗಳಲ್ಲಿ ಸಣ್ಣ ಸಣ್ಣ ಕೆರೆಗಳನ್ನು ಹೂಳೆತ್ತಿ ನೀರು ಸಂಗ್ರಹವಾಗುವಂತಹ ಅಭಿವೃದ್ಧಿ ಕೆಲಸಗಳ ಜೊತೆಗೆ ನಿರ್ಗತಿಕರಿಗೆ ಮಾಶಾಸನ, ಸ್ಥಳೀಯವಾಗಿ ವಂತಿಕೆ ನೀಡಿದರೆ ಧರ್ಮಸ್ಥಳದಿಂದಲೇ ಉಳಿದ ಶೇ. ೬೦ ಭಾಗ ಹಣವನ್ನು ನೀಡಿ ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡುತ್ತಿದ್ದಾರೆ ಎಂದು ಹೇಳಿದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದದಿಂದ ವ್ಯಸನಮುಕ್ತ, ಮದ್ಯವರ್ಜನ ಶಿಬಿರಗಳನ್ನು ಯಶಸ್ವಿಯಾಗಿ ನಡೆಸುವ ಮೂಲಕ ಜಿಲ್ಲೆ ಮತ್ತು ರಾಜ್ಯದಲ್ಲಿ ಹೆಸರುವಾಸಿಯಾಗಿದೆ ಎಂದು ತಿಳಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರ ಮಕ್ಕಳಿಗೆ ಪ್ರೋತ್ಸಾಹ ನೀಡಲು ಸುಜ್ಞಾನ ನಿಧಿ ಶಿಷ್ಯವೇತನ ಮುಂತಾದ ಚಟುವಟಿಕೆಗಳನ್ನು ಜಾರಿಗೆ ತಂದು ಪ್ರತಿಭೆಯನ್ನು ಗುರುತಿಸಲು ಸಹಕಾರಿಯಾಗಿದ್ದು, ಇದು ಮುಂದೆಯೂ ಇದೇ ರೀತಿ ಸದಾ ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಪರ ಕಾರ್ಯಗಳಲ್ಲಿ ತಾವೂ ಸಹ ಸಹಕಾರ ನೀಡುವುದಾಗಿ ಭರವಸೆ ನೀಡಿದ ಸಚಿವರು, ತಾಂತ್ರಿಕ ವಿದ್ಯಾಭ್ಯಾಸದಲ್ಲಿ ಉತ್ತಮ ಶಿಕ್ಷಣ ಪಡೆದು ವಿದ್ಯಾರ್ಥಿಗಳು ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಲು ಕಿವಿಮಾತು ಹೇಳಿದರು.

ಪೋಷಕರು ತಮ್ಮ ಜೀವನವನ್ನು ಮುಡುಪಾಗಿಟ್ಟು ಪರಿಶ್ರಮದಿಂದ ತಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಶಿಕ್ಷಣ ಕೊಡಿಸುತ್ತಿದ್ದಾರೆ. ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೆ ಈ ನಿಟ್ಟಿನಲ್ಲಿ ತಪಸ್ಸಿನ ರೀತಿ ಉತ್ತಮ ಶಿಕ್ಷಣ ಪಡೆಯಬೇಕಾಗಿರುವುದು ಅಗತ್ಯ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ಮಾತನಾಡಿ, ಪ್ರಸ್ತುತ ವಿದ್ಯಾರ್ಥಿಗಳಿಗೆ ಆಕಾಶದಷ್ಟು ಅಗಲವಾದ ಅವಕಾಶಗಳು ಲಭ್ಯವಾಗಿದ್ದು, ಇದರ ಸದುಪಯೋಗ ಪಡೆದುಕೊಂಡು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸುವಂತೆ ಕರೆನೀಡಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಾರ್ವತ್ರಿಕವಾಗಿ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಸಮಾಜಮುಖಿ ಕೆಲಸ ಮಾಡುತ್ತಿದೆ. ಸಮಾಜದಲ್ಲಿ ಬಡಜನರು ತಮ್ಮ ಕಾಲಮೇಲೆ ತಾವು ನಿಲ್ಲಬೇಕೆಂಬ ದೃಷ್ಟಿಯಿಂದ ರೈತರು, ಶಿಕ್ಷಕರು ಸೇರಿದಂತೆ ಎಲ್ಲಾ ವರ್ಗದವರಿಗೆ ಸಹಾಯಹಸ್ತ ನೀಡುತ್ತಿದೆ ಎಂದು ಶ್ಲಾಘಿಸಿದರು.

ಸಮಾಜದ ಮುಖ್ಯ ವಾಹಿನಿಯಲ್ಲಿ ತಮ್ಮ ಮಕ್ಕಳು ಬರಬೇಕೆಂಬುದು ಎಲ್ಲಾ ಪೋಷಕರ ಅಭಿಲಾಷೆಯಾಗಿದ್ದು, ತಮಗೆ ಎಷ್ಟೇ ಕಷ್ಟಗಳು ಇದ್ದರೂ ಸಹ ತೋರಿಸದ ಮಕ್ಕಳ ಒಳಿತಿಗಾಗಿ ತೊಡಗಿಸಿಕೊಂಡು ದುಡಿಯುತ್ತಿದ್ದಾರೆ ಎಂಬ ಕಷ್ಟದ ಅರಿವು ವಿದ್ಯಾರ್ಥಿಗಳಿಗೆ ಇರಬೇಕು ಎಂದರು.

ಪ್ರತಿಭೆ ಯಾರೊಬ್ಬರ ಆಸ್ತಿ, ಸ್ವತ್ತೂ ಅಲ್ಲ. ಸುಪ್ತ ಪ್ರತಿಭೆಗಳು ಹೊರಬರಬೇಕಾಗದರೆ ಅವಕಾಶಗಳ ಅಗತ್ಯ ಇದೆ. ಇಂತಹ ಅವಕಾಶ ಸದುಪಯೋಗವಾದಾಗ ಐಎಎಸ್, ವೈದ್ಯಕೀಯ, ಇಂಜಿನಿಯರಿಂಗ್ ಸೇರಿದಂತೆ ವಿವಿಧ ಉನ್ನತ ಹುದ್ದೆಯ ಗುರಿಯನ್ನು ಇಟ್ಟುಕೊಂಡರೆ ವಿದ್ಯಾರ್ಥಿಗಳಲ್ಲಿರುವ ಅಗಾಧ ಶಕ್ತಿ ಹೊರಬರಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಕೊರಗಪ್ಪ ಪೂಜಾರಿ ಮಾತನಾಡಿ, ಬಡವರು, ನಿರುದ್ಯೋಗ ಯುವಕ-ಯುವತಿಯರು ಆರ್ಥಿಕ, ಸಾಮಾಜಿಕ, ಸಮಗ್ರ ಸಬಲೀಕರಣಕ್ಕಾಗಿ ಅನೇಕ ಕಾರ್ಯಕ್ರಮಗಳ ಮೂಲಕ ಅಭಯಧಾನ ಹೀಗೆ ಸುಸ್ಥಿರವಾದ ಅನೇಕ ಸಂಸ್ಥೆಗಳನ್ನು ಸ್ಥಾಪಿಸಿ ನಿರಂತರವಾಗಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿದೆ ಎಂದರು.

ಸಮಾಜದಲ್ಲಿನ ಬಡವರ, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ಅವುಗಳಿಗೆ ಶಾಶ್ವತ ಪರಿಹಾರ ನೀಡುವ ಸಲುವಾಗಿ ಆರ್ಥಿಕ, ಸಾಮಾಜಿಕ, ಧಾರ್ಮಿಕವಾಗಿ ಅನೇಕ ಸಮಗ್ರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ರಾಜ್ಯಾದ್ಯಂತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಯಕ ಮಾಡುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಂಐಎಸ್ ಯೋಜನಾಧಿಕಾರಿ ಮಂಜುನಾಥ್ ಹೊಸಮನಿ, ರಮೇಶ್ ನಾಯ್ಕ, ಷಡಾಕ್ಷರಿ, ಎಸ್.ಡಿ.ಎಂ ಮಂಜು ಮತ್ತಿತರರು ಉಪಸ್ಥಿತರಿದ್ದರು.

Sujnana Nidhi Pupil Salary Sanction Letter Distribution Programme

About Author

Leave a Reply

Your email address will not be published. Required fields are marked *