September 20, 2024

ಅಂಧಮಕ್ಕಳ ಪಾಠಶಾಲೆ ಶಿಕ್ಷಕರಿಗೆ ವಸತಿ ನಿರ್ಮಿಸಲು ಅನುದಾನಕ್ಕೆ ಸಚಿವರ ಭರವಸೆ

0
ಆಶಾಕಿರಣ ಅಂಧಮಕ್ಕಳ ಪಾಠಶಾಲೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಭೇಟಿ

ಆಶಾಕಿರಣ ಅಂಧಮಕ್ಕಳ ಪಾಠಶಾಲೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಭೇಟಿ

ಚಿಕ್ಕಮಗಳೂರು: ಇಲ್ಲಿನ ಆಶಾಕಿರಣ ಅಂಧಮಕ್ಕಳ ಪಾಠಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿಗೆ ಅನುಕೂಲವಾಗುವಂತೆ ಸುಮಾರು ೫೦ ಲಕ್ಷ ರೂ ವೆಚ್ಚದಲ್ಲಿ ೫ ಮನೆಗಳನ್ನು ನಿರ್ಮಿಸಲು ಅನುದಾನ ನೀಡುವುದಾಗಿ ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಅವರು ಭರವಸೆ ನೀಡಿದರು.

ಅವರು ಇಂದು ಆಶಾಕಿರಣ ಅಂಧಮಕ್ಕಳ ಪಾಠಶಾಲೆಗೆ ಭೇಟಿನೀಡಿ ೧೧.೨೦ ಲಕ್ಷ ರೂ ವೆಚ್ಚದಲ್ಲಿ ಮೆಸ್ಕಾಂ ಸಿಆರ್‌ಎಸ್ ಅನುದಾನದಲ್ಲಿ ಪೀಠೋಪಕರಣ, ಕಂಪ್ಯೂಟರ್, ಸೋಲಾರ್ ಸಾಮಾಗ್ರಿಗಳನ್ನು ಹಸ್ತಾಂತರಿಸಿ ಮಾತನಾಡಿದರು.
ತಮ್ಮ ಸ್ವಂತ ಹಣವನ್ನು ಒಂದು ಮನೆಗೆ ನೀಡುವುದಾಗಿ ಭರವಸೆ ನೀಡಿದ ಸಚಿವರು ಉಳಿದ ನಾಲ್ಕು ಮನೆಗಳಿಗೆ ಮೆಸ್ಕಾಂ ಇಲಾಖೆಯಿಂದ ಹಣ ನೀಡುವುದಾಗಿ ತಿಳಿಸಿದರು.

ಮಕ್ಕಳಿಗೆ ಚಿಕ್ಕಿ, ಹಾಲು, ಮೊಟ್ಟೆ ಕೊಡುವಂತೆ ಶಾಲೆಯ ಸಂಸ್ಥಾಪಕ ಡಾ. ಜೆ.ಪಿ ಕೃಷ್ಣೇಗೌಡ ಅವರು ಮನವಿ ಮಾಡಿದ ಮೇರೆಗೆ ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಈ ಬೇಡಿಕೆಯನ್ನು ಈಡೇರಿಸುವುದಾಗಿ ಹೇಳಿದರು.
ಡಾ. ಜೆ.ಪಿ ಕೃಷ್ಣೇಗೌಡ ಅವರ ಕೆಲಸ ರಾಜ್ಯಕ್ಕೇ ಮಾದರಿಯಾಗಿದ್ದು, ಇಂತಹವರು ಸಮಾಜ ಸೇವೆಗೆ ತೊಡಗಿಸಿಕೊಳ್ಳುವ ಮುಖಂಡರಿಗೆ ಬೆನ್ನೆಲುಬಾಗಿ ನಿಂತು ಕೈಲಾದ ಸಹಾಯ ಮಾಡುವುದಾಗಿ ವಿಶ್ವಾಸ ವ್ಯಕ್ತಿಪಡಿಸಿದರು.

ಈ ಶಾಲೆಗೆ ಭೇಟಿ ನೀಡಿರುವುದು ಸಂತಸ ತಂದಿದೆ, ಈ ಶಾಲೆಯ ಹೆಸರು ಕೇಳಿದ್ದೆ ನೋಡಿರಲಿಲ್ಲ, ಗೃಹಜ್ಯೋತಿ ಮಾದರಿಯಲ್ಲಿ ಅಂಧಮಕ್ಕಳ ಪಾಠಶಾಲೆಗೆ ಉಚಿತ ವಿದ್ಯುತ್ ಸರಬರಾಜು ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.

ಶಾಲೆಯ ಸಂಸ್ಥಾಪಕ ಡಾ. ಜೆ.ಪಿ ಕೃಷ್ಣೇಗೌಡ ಮಾತನಾಡಿ, ಕಳೆದ ೩೪ ವರ್ಷಗಳಿಂದ ಆಶಾಕಿರಣ ಅಂಧಮಕ್ಕಳ ಶಾಲೆ ನಡೆಸುತ್ತಿದ್ದು, ರಾಜ್ಯಾದ್ಯಂತ ೬ ರಿಂದ ೧೬ ವರ್ಷದ ಒಳಗಿನ ಅಂಧ ಮಕ್ಕಳಿಗೆ ಉಚಿತ ವಸತಿ, ಊಟೋಪಚಾರ, ಸಮವಸ್ತ್ರ ಹಾಗೂ ಔಷದೋಪಚಾರಗಳನ್ನು ನೀಡಿ, ಬ್ರೈಲ್ ಲಿಪಿಯಲ್ಲಿ ಶಿಕ್ಷಣ, ಸಂಗೀತ, ತಾಳವಾದ್ಯ, ಕಂಪ್ಯೂಟರ್, ಗುಡಿ ಕೈಗಾರಿಕೆಗಳ ಜೊತೆಗೆ ಆಟೋಟ ತರಬೇತಿಗಳನ್ನು ನಡೆಸಲಾಗುತ್ತಿದೆ ಎಂದರು.

ದಕ್ಷಿಣ ಕರ್ನಾಟಕದಲ್ಲಿ ಅತ್ಯುತ್ತಮ ವ್ಯವಸ್ಥೆಗಳೊಂದಿಗೆ ಶಿಕ್ಷಣ ನೀಡುತ್ತಿರುವ ಈ ಶಾಲೆಗೆ ಇನ್ನಷ್ಟು ಮೂಲಭೂತ ಸೌಕರ್ಯಗಳ ಅವಶ್ಯಕತೆ ಇದ್ದು, ಶಾಲೆಯಲ್ಲಿ ಅಪೂರ್ಣವಾಗಿರುವ ರಿಟೈನಿಂಗ್ ವಾಲ್ ಹಾಗೂ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಕಾಂಪೌಂಡ್‌ನ ಅವಶ್ಯಕತೆ ಎಂದು ಸಚಿವರಿಗೆ ಮನವಿ ಸಲ್ಲಿಸಿದರು.

ಪ್ರಸ್ತುತ ಸರ್ಕಾರದಿಂದ ಮಕ್ಕಳ ನಿರ್ವಹಣ ವೆಚ್ಚ ೧ ಸಾವಿರ ರೂ ಬಿಡುಗಡೆಯಾಗುತ್ತಿದ್ದು, ಇದನ್ನು ಮಾಸಿಕ ೨ ಸಾವಿರ ರೂಗಳಿಗೆ ಹೆಚ್ಚಿಸಬೇಕು. ಈ ವಿಶೇಷ ಶಾಲೆಗೆ ಪ್ರಸ್ತುತ ವಾರ್ಷಿಕ ಸಾದಿಲ್ವಾರು ವೆಚ್ಚ ೧೦ ಸಾವಿರ ರೂಗಳನ್ನು ನೀಡುತ್ತಿದ್ದು, ಗರಿಷ್ಟ ೨ ಲಕ್ಷ ರೂಗಳಿಗೆ ಹೆಚ್ಚಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯ ೩೩ ವಿಶೇಷ ಶಾಲೆಗಳನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಮಾಸಿಕ ವಿದ್ಯುತ್ ಬಿಲ್‌ನ್ನು ಉಚಿತವಾಗಿ ನೀಡಬೇಕು, ಶಾಲೆಯ ದಿವ್ಯಾಂಗ ಮಕ್ಕಳಿಗಾಗಿಯೇ ಒಂದು ವಿಶ್ವವಿದ್ಯಾನಿಲಯ ಸ್ಥಾಪಿಸಲು ಗುರಿ ಹೊಂದಲಾಗಿದ್ದು, ಈ ಕಾರ್ಯಕ್ಕೆ ಸರ್ಕಾರದಿಂದ ಭೂಮಿ ಮಂಜೂರಾತಿ ನೀಡಿ ಆರ್ಥಿಕ ನೆರವನ್ನು ಕಲ್ಪಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಶಾಸಕ ಹೆಚ್.ಡಿ ತಮ್ಮಯ್ಯ, ಮಾಜಿ ವಿಧಾನ ಪರಿಷತ್ ಸದಸ್ಯೆ ಗಾಯಿತ್ರಿ ಶಾಂತೇಗೌಡ, ಜಿಲ್ಲಾಧಿಕಾರಿ ಮೀನಾನಾಗರಾಜ್.ಸಿ.ಎನ್, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್ ಕೀರ್ತನ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ ಅಮಟೆ, ಹರ್ಷಅಭಿಷೇಕ್, ಗೌರಿವರುಣ್, ಡಾ. ಜ್ಯೋತಿಕೃಷ್ಣ, ಸಾಗರ್‌ಹೆಗ್ಗಡೆ, ಹೆಚ್.ಸಿ ಮಹೇಶ್, ಕೆ.ಮೋಹನ್ ಸೇರಿದಂತೆ ಅಂಧಮಕ್ಕಳ ಪಾಠಶಾಲೆಯ ಟ್ರಸ್ಟಿಗಳು ಉಪಸ್ಥಿತರಿದ್ದರು.

Minister’s promise for grant to build housing for teachers of school for blind children

About Author

Leave a Reply

Your email address will not be published. Required fields are marked *