September 20, 2024

Installation of 8000 LED street lights started: ನಗರದಲ್ಲಿ 8000 ಎಲ್‌ಇಡಿ ಬೀದಿ ದೀಪಗಳನ್ನು ಅಳವಡಿಸುವ ಕಾರ್ಯಕ್ಕೆ ಚಾಲನೆ

0

ಚಿಕ್ಕಮಗಳೂರುಎಕ್ಸ್‌ಪ್ರೆಸ್: ನಗರದಲ್ಲಿ ೮೦೦೦ ಎಲ್‌ಇಡಿ ಬೀದಿ ದೀಪಗಳನ್ನು ಅಳವಡಿಸುವ ಕಾರ್ಯಕ್ಕೆ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಶುಕ್ರವಾರ ಚಾಲನೆ ನೀಡಿದರು.
ಮಾರ್ಕೆಟ್ ರಸ್ತೆಯ ಸಂತೆ ಮೈದಾನ ಬಳಿ ಬಲ್ಬ್ ಅಳವಡಿಸುವ ವಾಹನಕ್ಕೆ ಪೂಜೆ ನೆರವೇರಿಸಿದ ನಂತರ ದೀಪಗಳನ್ನು ಅಳವಡಿಸುವ ಕಾರ್ಯ ಆರಂಭವಾಯಿತು.

ಈ ವೇಳೆ ಮಾತನಾಡಿದ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಜಿಲ್ಲೆಯಲ್ಲಿ ಒಟ್ಟು ೧೨ ಸಾವಿರ ಎಲ್‌ಇಡಿ ಬಲ್ಬ್‌ಗಳನ್ನು ಅಳವಡಿಸಲು ಒಟ್ಟು ೨೦ ಕೋಟಿ ರೂ.ಅನುದಾನ ಬಿಡುಗಡೆ ಮಾಡಿದೆ. ಈ ಪೈಕಿ ೮ ಸಾವಿರಕ್ಕೂ ಅಧಿಕ ಬಲ್ಬ್‌ಗಳನ್ನು ಚಿಕ್ಕಮಗಳೂರು ನಗರಸಭೆ ವ್ಯಾಪ್ತಿಯಲ್ಲಿ ಅಳವಡಿಸಲಾಗುತ್ತಿದೆ ಎಂದು ತಿಳಿಸಿದರು.

ನಗರಸಭೆಗೆ ಹೊಸ ಆಡಳಿತ ಮಂಡಳಿ ಬಂದ ನಂತರ ಒಂದು ಬಲ್ಬ್‌ಸಹ ಕೊಡಲಾಗದ ಸ್ಥಿತಿ ಇತ್ತು. ಇದೀಗ ಕೆಟ್ಟು ನಿಂತಿರುವ ಬಲ್ಬ್‌ಗಳು ಸೇರಿ ಹಳೆಯ ಬಲ್ಬ್‌ಗಳನ್ನು ಬದಲಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಈ ಸಂಬಂಧ ಜಿಲ್ಲಾಡಳಿತ ದೆಹಲಿ ಮೂಲದ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಿದೆ ಎಂದು ತಿಳಿಸಿದರು.

ಚಿಕ್ಕಮಗಳೂರು ಹಬ್ಬದ ಹಿನ್ನೆಲೆಯಲ್ಲಿ ಪ್ರಮುಖ ರಸ್ತೆಗಳಲ್ಲಿ ಮೊದಲು ದೀಪಗಳನ್ನು ಅಳವಡಿಸಿ ನಂತರ ವಾರ್ಡ್ ನಂ.೧ ರಿಂದ ಪ್ರಾರಂಭಿಸಿ ಎಲ್ಲಾ ವಾರ್ಡ್‌ಗಳಿಗೂ ವಿಸ್ತರಿಸಲಾಗುವುದು ಎಂದು ಹೇಳಿದರು.

ದೀಪಗಳನ್ನು ಅಳವಡಿಸುವಾಗ ಸಾರ್ವಜನಿಕರು ಸಹಕರಿಸಬೇಕು. ಚಿಕ್ಕಮಗಳೂರು ಹಬ್ಬ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಮುಖ ರಸ್ತೆಯಲ್ಲಿ ಸಾವಿರಾರು ಮಂದಿ ಓಡಾಡಲಿದ್ದಾರೆ. ಅವರಿಗೆ ಸೂಕ್ತ ಬೆಳಕಿನ ವ್ಯವಸ್ಥೆ ಮಾಡಬೇಕಿರುವುದು ನಮ್ಮ ಜವಾಬ್ದಾರಿ. ಇನ್ನೊಂದು ತಿಂಗಳಲ್ಲಿ ಇಡೀ ನಗರ ವ್ಯಾಪ್ತಿಯಲ್ಲಿ ದೀಪಗಳ ಅಳವಡಿಕೆ ಕಾರ್ಯ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್ ಮಾತನಾಡಿ, ಕಳೆದ ಎರಡೂ ವರ್ಷಗಳಿಂದಲೂ ಬೀದಿ ದೀಪಗಳನ್ನು ಅಳವಡಿಸಲು ಸಾಧ್ಯವಾಗಿರಲಿಲ್ಲ. ಸಾರ್ವಜನಿಕರಿಂದಲೂ ಒತ್ತಡ ಇತ್ತು. ಅವರಿಗೆ ಉತ್ತರ ಹೇಳುವುದು ಕಷ್ಟವಾಗಿತ್ತು. ಇಂದಿನಿಂದ ನಗರ ವ್ಯಾಪ್ತಿಯಲ್ಲಿರುವ ಎಲ್ಲಾ ಕಂಬಬಳಿಗೂ ಎಲ್‌ಇಡಿ ದೀಪಗಳನ್ನು ಅಳವಡಿಸಲು ಚಾಲನೆ ನೀಡಲಾಗಿದೆ ಎಂದರು.

ಈ ತಿಂಗಳಾಂತ್ಯಕ್ಕೆ ನಗರಸಭೆ ವ್ಯಾಪ್ತಿಯ ಎಲ್ಲಾ ಕಂಬಗಳಿಗೂ ಎಲ್‌ಇಡಿ ದೀಪಗಳನ್ನು ಅಳವಡಿಸುತ್ತೇವೆ. ಇದರಿಂದ ನಗರಸಭೆಗೂ ಆರ್ಥಿಕವಾಗಿ ಅನುಕೂಲವಾಗುತ್ತಿದೆ. ಗುತ್ತಿಗೆ ಕಂಪನಿಗೆ ನಗರಸಭೆಯಿಂದ ಯಾವುದೇ ರೀತಿಯ ಹಣ ನೀಡುವುದಿಲ್ಲ. ಪ್ರತಿ ತಿಂಗಳು ನಾವು ಮೆಸ್ಕಾಂಗೆ ಭರಿಸುತ್ತಿದ್ದ ವಿದ್ಯುತ್ ಶುಲ್ಕದ ಶೇ.೭೦ ರಷ್ಟು ಹಣವನ್ನು ಈ ಕಂಪನಿಗೆ ನೀಡಬೇಕಾತುತ್ತದೆ.

ಒಟ್ಟು ೮೦೦೦ ಎಲ್‌ಇಡಿ ಬಲ್ಬ್‌ಗಳು ಚಿಕ್ಕಮಗಳೂರು ನಗರಕ್ಕೆ ಹಂಚಿಕೆಯಾಗಿವೆ. ಹೆಚ್ಚುವರಿಯಾಗಿ ಇನ್ನೂ ೨೦೦೦ ಲೈಟ್‌ಗಳು ಬೇಕಾಗಬಹುದು ಅವನ್ನು ಖರೀದಿ ಮಾಡಿ ಅಳವಡಿಸಲು ಕ್ರಮ ಕ್ಯಗೊಳ್ಳುತ್ತೇವೆ ಎಂದು ತಿಳಿಸಿದರು.

ಈ ವೇಳೆ ನಗರಸಭೆ ಉಪಾಧ್ಯಕ್ಷೆ ಉಮಾದೇವಿ ಕೃಷ್ಣಪ್ಪ, ಸದಸ್ಯೆ ರೂಪಾ ಕುಮಾರ್, ಇಂಜಿನೀಯರ್ ಚಂದನ್ ಸೇರಿದಂತೆ ಇತರರು ಇದ್ದರು.

Installation of 8000 LED street lights started

Community-verified icon

About Author

Leave a Reply

Your email address will not be published. Required fields are marked *