September 19, 2024

ನಗರಸಭೆ ಅಧ್ಯಕ್ಷರಾಗಿ ಸುಜಾತಶಿವಕುಮಾರ್-ಉಪಾಧ್ಯಕ್ಷರಾಗಿ ಅನುಮಧುಕರ್ ಆಯ್ಕೆ

0
ನಗರಸಭೆ ಅಧ್ಯಕ್ಷರಾಗಿ ಸುಜಾತಶಿವಕುಮಾರ್-ಉಪಾಧ್ಯಕ್ಷರಾಗಿ ಅನುಮಧುಕರ್ ಆಯ್ಕೆ

ನಗರಸಭೆ ಅಧ್ಯಕ್ಷರಾಗಿ ಸುಜಾತಶಿವಕುಮಾರ್-ಉಪಾಧ್ಯಕ್ಷರಾಗಿ ಅನುಮಧುಕರ್ ಆಯ್ಕೆ

ಚಿಕ್ಕಮಗಳೂರು: ನಗರಸಭೆಯ ಚುನಾವಣೆಯು ಗುರುವಾರ ಚುನಾವಣಾಧಿಕಾರಿಯಾಗಿದ್ದ ಉಪ ವಿಭಾಗಾಧಿಕಾರಿ ದಲ್ಜೀತ್ ಕುಮಾರ್ ಅವರ ನೇತೃತ್ವದಲ್ಲಿ ಮತದಾನ ಪ್ರಕ್ರಿಯೆ ನಡೆದು ಅಂತಿಮವಾಗಿ ಹೆಚ್ಚು ಮತಗಳನ್ನು ಪಡೆದ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಸುಜಾತ ಶಿವಕುಮಾರ್ ಅಧ್ಯಕ್ಷರಾಗಿ ಹಾಗೂ ಅನು ಮಧುಕರ್ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾಹಿತಿ ನೀಡಿದ ಚುನಾವಣಾಧಿಕಾರಿ ದಲ್ಜೀತ್ ಕುಮಾರ್ ರವರು ಅಧ್ಯಕ್ಷ ಸ್ಥಾನಕ್ಕೆ ೪ ಮಂದಿ ನಾಮಪತ್ರ ಸಲ್ಲಿಸಿದ್ದರು. ಅಂತಿಮವಾಗಿ ಸುಜಾತ ಶಿವಕುಮಾರ್ ಹಾಗೂ ಗೌಸಿಯಾ ಖಾನ್ ಈ ಇಬ್ಬರು ಕಣದಲ್ಲಿದ್ದು ಮತದಾನ ನಡೆದಾಗ ಸುಜಾತ ಶಿವಕುಮಾರ್‌ರವರಿಗೆ ೨೫ ಮತಗಳು ಹಾಗೂ ಗೌಸಿಯಾ ಖಾನ್‌ರವರಿಗೆ ೧೫ ಮತಗಳು ಬಂದವು ಎಂದರು.

ಅದೇ ರೀತಿ ಉಪಾಧ್ಯಕ್ಷ ಸ್ಥಾನಕ್ಕೆ ಅಂತಿಮವಾಗಿ ಸ್ಪರ್ಧೆಯ ಕಣದಲ್ಲಿ ಉಳಿದಿದ್ದ ಅನು ಮಧುಕರ್ ಮತ್ತು ಇಂದಿರಾಶಂಕರ್ ಇವರಿಗೆ ಮತದಾನ ನಡೆದಾಗ ಅನುಮಧುಕರ್ ಪರವಾಗಿ ೨೫ ಮತಗಳು ಹಾಗೂ ಇಂದಿರಾ ಶಂಕರ್ ಪರವಾಗಿ ೧೫ ಮತಗಳು ಬಂದವು ಎಂದು ತಿಳಿಸಿದರು.

ಅಧ್ಯಕ್ಷ ಸ್ಥಾನಕ್ಕೆ ಹೆಚ್ಚು ಮತ ಪಡೆದ ಸುಜಾತ ಶಿವಕುಮಾರ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅನು ಮಧುಕರ್ ಇವರ ಹೆಸರನ್ನು ಘೋಷಣೆ ಮಾಡಲಾಯಿತೆಂದು ಚುನಾವಣಾಧಿಕಾರಿ ದಲ್ಜೀತ್ ಕುಮಾರ್ ಹೇಳಿದರು.

ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ನೂತನ ಅಧ್ಯಕ್ಷೆ ಉಪಾಧ್ಯಕ್ಷೆಯನ್ನು ಅಭಿನಂದಿಸಿ ಮಾತನಾಡಿ ನಗರಸಭೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸೋಲಿಸಲು ಕಾಂಗ್ರೆಸ್ ಪಕ್ಷ ಹಣದ ಆಮಿಷದ ಮೂಲಕ ಸಂಚು ನಡೆಸಿತ್ತು. ಆದರೆ ನಮ್ಮ ಎರಡೂ ಪಕ್ಷದ ಸದಸ್ಯರು ಅದನ್ನು ವಿಫಲಗೊಳಿಸಿದ್ದಾರೆ ಎಂದು ತಿಳಿಸಿದರು.

ಇದು ನಗರಸಭೆ ಚುನಾವಣೆಯೋ ರಾಜ್ಯ ಸಭೆ ಚುನಾವಣೆಯೋ ಎನ್ನುವ ರೀತಿ ಕಾಂಗ್ರೆಸ್ ಸದಸ್ಯರು ದೊಡ್ಡ ಮಟ್ಟದ ಆಮಿಷ ವೊಡ್ಡಿದ್ದರು. ಆದರೂ ನಮ್ಮ ಎರಡೂ ಪಕ್ಷದ ಸದಸ್ಯರು ಅದಕ್ಕೆ ಮಣಿಯದೆ ಮೈತ್ರಿ ಅಭ್ಯರ್ಥಿಗಳಿಗೇ ಮತ ಹಾಕಿದ್ದಾರೆ. ಗೆಲುವಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇವೆ. ನಗರಸಭೆಯಲ್ಲಿ ಎರಡೂ ಪಕ್ಷಕ್ಕೆ ಅಧಿಕಾರ ಹಂಚಿಕೆ ಆಗಿದೆ. ಈ ಬಗ್ಗೆ ನಾವು ಮಾತನಾಡಿಕೊಂಡಿದ್ದೇವೆ ಎಂದು ತಿಳಿಸಿದರು.

ಲೋಕಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಯಲ್ಲಿ ಮಾಡಿಕೊಂಡಿದ್ದ ಹೊಂದಾಣಿಕೆಗೆ ಜನತೆ ಬೆಂಬಲಿಸಿದ್ದರು. ಇದೇ ಕಾರಣಕ್ಕೆ ನಗರಸಭೆ ಚುನಾವಣೆಯಲ್ಲೂ ಮೈತ್ರಿ ಮುಂದುವರಿಸಿದ ಕಾರಣ ನಮ್ಮ ಅಭ್ಯರ್ಥಿಗಳು ೧೦ ಮತಗಳ ದೊಡ್ಡ ಅಂತರದಿಂದ ಗೆಲುವು ಸಾಧಿಸಲು ಸಾಧ್ಯವಾಗಿದೆ. ಇದಕ್ಕಾಗಿ ಎಂಎಲ್‌ಸಿ ಬೋಜೇಗೌಡ ಹಾಗೂ ಜೆಡಿಎಸ್ ಸದಸ್ಯರಿಗೆ ಅಭಿನಂದುಸುತ್ತೇನೆ.

ಇದೇ ವೇಳೆ ಲೋಕಸಭಾ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಅವರು ಹಾಜರಿದ್ದು ಮತ ಚಲಾಯಿಸಿದ್ದಾರೆ. ನಂತರ ಶೃಂಗೇರಿ ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಮತ ಚಲಾಯಿಸಲು ತೆರಳಿದ್ದಾರೆ. ಜಿಲ್ಲಾಡಳಿತ ಈ ರೀತಿ ಒಂದೇ ದಿನ ಎರಡು ಕಡೆಗಳಲ್ಲಿ ಚುನಾವಣೆ ನಡೆಸಬಾರದು ಎಂದರು.

ನೂತನ ಅಧ್ಯಕ್ಷ-ಉಪಾಧ್ಯಕ್ಷರಿಬ್ಬರಿಗೂ ಅಭಿನಂದಿಸುತ್ತೇವೆ. ನಗರದ ಜನತೆಗೆ ಎಷ್ಟು ಸಾಧ್ಯವೋ ಅಷ್ಟು ಒಳ್ಳೆ ಆಡಳಿತ ನೀಡಲು ಎನ್‌ಡಿಎ ಮಾಡುತ್ತದೆ.
ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮಾತನಾಡಿ ಜೆಡಿಎಸ್-ಬಿಜೆಪಿ ಒಗ್ಗಟ್ಟಿಗೆ ಅಭೂತಪೂರ್ವ ಜಯ ಸಿಕ್ಕಿದೆ. ಈ ಒಗ್ಗಟ್ಟು ಸದಾ ಮುಂದುವರಿಯಬೇಕು ಎನ್ನುವುದು ನಮ್ಮೆಲ್ಲರ ಆಶಯ. ಇದರಿಂದ ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಪಾಠ ಕಲಿಸುವ ಕೆಲಸ ಮಾಡುತ್ತೇವೆ. ಜಿಲ್ಲಾ ಮಟ್ಟದಲ್ಲಿ ಹೊಂದಾಣಿಕೆ ಯಶಸ್ಸಾಗಿರುವುದನ್ನು ಕಾಂಗ್ರೆಸ್ ಅರಿತುಕೊಳ್ಳಬೇಕಾಗುತ್ತದೆ ಎಂದರು.

ಅಧ್ಯಕ್ಷ-ಉಪಾಧ್ಯಕ್ಷರು ಜನ ಮೆಚ್ಚುವ ರೀತಿ ಕೆಲಸ ಮಾಡಬೇಕು ಅವರೊಂದಿಗೆ ನಾವು ಸದಾ ಇರುತ್ತೇವೆ. ಮುಂದೆ ಒಡಂಬಡಿಕೆ ಯಾವುದೇ ಸಂಶಯವಿಲ್ಲದೆ ಅಬಾಧಿತವಾಗಿ ಮುಂದುವರಿಯುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್, ಶಾಸಕ ಹೆಚ್.ಡಿ.ತಮ್ಮಯ್ಯ, ನಗರಸಭೆ ಆಯುಕ್ತರಾದ ಬಸವರಾಜ್, ಸದಸ್ಯರುಗಳು ಉಪಸ್ಥಿತರಿದ್ದರು.

Sujatashivakumar elected as municipal council president-Anumadhukar as vice president

About Author

Leave a Reply

Your email address will not be published. Required fields are marked *

You may have missed