September 19, 2024

ವಿದ್ಯಾರ್ಥಿಗಳು ಕ್ರೀಡಾ ಮನೋಭಾವದಿಂದ ಸ್ಪರ್ಧೆಯಲ್ಲಿ ಭಾಗವಹಿಸಿ

0
ತಾಲ್ಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟನೆ

ತಾಲ್ಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟನೆ

ಚಿಕ್ಕಮಗಳೂರು:  ವಿದ್ಯಾರ್ಥಿಗಳು ಸಂಸ್ಕಾರವಂತರಾದಾಗ ಮಾತ್ರ ಭಾರತ ದೇಶದ ಸಂಸ್ಕೃತಿ ಪರಂಪರೆಗೆ ಅರ್ಥ ಬರುತ್ತದೆ ಎಂದು ನಗರಸಭಾಧ್ಯಕ್ಷೆ ಸುಜಾತ ಶಿವಕುಮಾರ್ ಅಭಿಪ್ರಾಯಿಸಿದರು.

ಅವರು ಇಂದು ನೇತಾಜ್ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ತೇಗೂರಿನ ಮುರಾರ್ಜಿ ದೇಸಾಯಿ ವಸತಿ ಪದವಿ ಪೂರ್ವ ಕಾಲೇಜು ಹಾಗೂ ಚಿಕ್ಕಮಗಳೂರು ಪದವಿ ಪೂರ್ವ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ತಾಲ್ಲೂಕು ಮಟ್ಟದ ಕ್ರೀಡಾಕೂಟ ೨೦೨೪-೨೫ ನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಉತ್ಸಾಹದಿಂದ ಭಾಗವಹಿಸಿರುವುದು ಸಂತಸ ತಂದಿದೆ, ಇದನ್ನು ನೋಡಿದಾಗ ನಮ್ಮ ಶಾಲಾ-ಕಾಲೇಜಿನ ವ್ಯಾಸಂಗದ ದಿನಗಳು ನೆನಪಿಗೆ ಬರುತ್ತದೆ. ಎಲ್ಲರೂ ಗೆಲ್ಲುತ್ತೇವೆಂಬ ಭಾವನೆಯಿಂದ ಕ್ರೀಡೆಯಲ್ಲಿ ಭಾಗವಹಿಸಿದ್ದು, ಸೋತವರು ದೃತಿಗೆಡದೆ ಮುಂದೆ ಯಶಸ್ಸು ಗಳಿಸುತ್ತೇವೆಂಬ ಆಶಾಭಾವನೆ ಹೊಂದಿರಿ ಎಂದರು.

ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಜಿಲ್ಲೆ, ರಾಜ್ಯ, ದೇಶಕ್ಕೆ ಒಳ್ಳೆಯ ಕೀರ್ತಿ ತರಬೇಕೆಂದು ಹಾರೈಸಿದ ಅವರು ಒಲಂಪಿಕ್ ಕ್ರೀಡಾಕೂಟದಲ್ಲಿ ೫ ಚಿನ್ನ, ೧ ಬೆಳ್ಳಿ ಪದಕವನ್ನು ತಂದು ಭಾರತ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ ಕ್ರೀಡಾಪಟುಗಳಿಗೆ ಅಭಿನಂದಿಸಿ ಈ ನಿಟ್ಟಿನಲ್ಲಿ ನೀವೂ ಸಹ ಸಾಧನೆ ಮಾಡಿ ಎಂದು ಹೇಳಿದರು.

ಪೋಷಕರ ಆಸೆಯಂತೆ ಪಠ್ಯ ಚಟುವಟಿಕೆಗೆ ಪ್ರಥಮ ಆದ್ಯತೆ ನೀಡಿ ದೇಶಪ್ರೇಮ, ಸಂಸ್ಕೃತಿ ಮರೆಯಬಾರದು, ವಿದ್ಯಾರ್ಥಿನಿಯರು ಮಾದಕ ವ್ಯಸನ ವ್ಯಕ್ತಿಗಳಿಂದ ದೂರ ಇರಬೇಕೆಂದು ಕಿವಿಮಾತು ಹೇಳಿದರು.

ಪಿಯು ಮಂಡಳಿ ಉಪನಿರ್ದೇಶಕ ಪುಟ್ಟನಾಯಕ್ ಮಾತನಾಡಿ, ದೇಶಕ್ಕೆ ರೈತರು ಕೃಷಿಯಲ್ಲಿ ಬೆನ್ನೆಲುಬಾಗಿದ್ದರೆ ಅದೇ ರೀತಿ ಕ್ರೀಡಾ ಚಟುವಟಿಕೆಯಲ್ಲಿ ಕ್ರೀಡಾ ಶಿಕ್ಷಕರು ಬೆನ್ನೆಲೆಬಾಗಿದ್ದಾರೆ. ಕ್ರೀಡೆಗಳು ಸುಗಮ, ಸುಲಲಿತವಾಗಿ ನಡೆಯಬೇಕಾದರೆ ಕ್ರೀಡಾ ಶಿಕ್ಷಕರ ಶ್ರಮ ಮುಖ್ಯ ಎಂದರು.

ಕ್ರೀಡೆಗಳು ಹಾಗೂ ಕ್ರೀಡಾಪಟುಗಳು ದೇಶದ ಭಾವೈಕ್ಯತೆಯ ಸಂಕೇತ. ಕ್ರೀಡೆಗೆ ಎಲ್ಲಿ ಉತ್ಸಾಹ, ಪ್ರೋತ್ಸಾಹ ದೊರೆಯುತ್ತದೆಯೋ ಅಲ್ಲಿ ಭಾವೈಕ್ಯತೆ ಸಮ್ಮಿಲನವಾಗುತ್ತದೆ ಎಂದು ತಿಳಿಸಿದರು.

ಕ್ರೀಡೆ ಶಿಕ್ಷಣದ ಒಂದು ಭಾಗವಾಗಿದ್ದು, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಭಾಗವಹಿಸುವ ಮೂಲಕ ರಾಜ್ಯ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಬೇಕೆಂದು ಹಾರೈಸಿದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ದೇವೇಂದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡಾ ಮನೋಭಾವದಿಂದ ಭಾಗವಹಿಸಬೇಕು. ಸೋತವರು ದೃತಿಗೆಡದೆ ಮುಂದೆ ಅವಕಾಶ ಬರುತ್ತದೆ ಎಂಬ ಸಂಕಲ್ಪದೊಂದಿಗೆ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ಹೇಳಿದರು.

ಸೆ.೧೩, ೧೪ ರಂದು ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಆಯೋಜನೆ ಮಾಡುತ್ತಿದ್ದು, ಸೆ.೧೩ ರಂದು ಇದೇ ಆಟದ ಮೈದಾನದಲ್ಲಿ ಹಾಗೂ ಸೆ.೧೪ ರಂದು ರಾಮನಹಳ್ಳಿಯ ಪೊಲೀಸ್ ಆಟದ ಮೈದಾನದಲ್ಲಿ ಕ್ರೀಡಾಕೂಟ ನಡೆಯಲಿದ್ದು, ಇಲ್ಲಿ ಭಾಗವಹಿಸಿರುವ ಎಲ್ಲಾ ಕ್ರೀಡಾಪಟುಗಳು ಜಿಲ್ಲಾಮಟ್ಟದ ಕ್ರೀಡೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪ್ರಾಚಾರ್ಯ ಸಂಘದ ಅಧ್ಯಕ್ಷೆ ತಸ್ಸೀಮಾ ಭಾನು, ಪ್ರಾಂಶುಪಾಲ ರುದ್ರಯ್ಯ, ಮುರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.ವಿಜಯಕುಮಾರ್ ಸ್ವಾಗತಿಸಿ, ಶೃತಿ ನಿರೂಪಿಸಿ, ಲತಾಮಣಿ ವಂದಿಸಿದರು.

Students participate in the competition with sportsmanship

About Author

Leave a Reply

Your email address will not be published. Required fields are marked *

You may have missed