September 19, 2024

An emotional tribute meeting to R.Druvanarayan in Chikkamagaluru city: ಆರ್.ದೃವನಾರಾಯಣ್ ಅವರಿಗೆ ಚಿಕ್ಕಮಗಳೂರು ನಗರದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಭೆ

0

ಚಿಕ್ಕಮಗಳೂರು:  ಜಿಲ್ಲೆಯಲ್ಲಿ ಯಾವುದೇ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರೂ ಸಹ ಭಾಗವಹಿಸಿ ಪಕ್ಷಕ್ಕೆ ಸಂಬಂಧಿಸಿದ ಸಲಹೆ, ಸೂಚನೆಗಳನ್ನು ನೀಡುವ ಮೂಲಕ ಪಕ್ಷ ಸಂಘಟನೆಯ ಬಗ್ಗೆ ಚಿಂತಿಸುತ್ತಿದ್ದರು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಕೆ.ಪಿ.ಅಂಶುಮತ್ ನೆನಪಿಸಿಕೊಂಡರು.

ಅವರು ಶನಿವಾರ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿಗಳು ಇಂದು ನಿಧನರಾದ ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿ ಆರ್.ದೃವನಾರಾಯಣ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುವ ಸಭೆಯಲ್ಲಿ ಮಾತನಾಡಿದರು.

ಆರ್.ದೃವನಾರಾಯಣ್ ಅವರು ಬಹಳ ಸಜ್ಜನ, ಸರಳ, ಧೀಮಂತ ರಾಜಕಾರಣಿಯಾಗಿದ್ದರು. ಸರಳತೆಯಿಂದ ಎಲ್ಲರನ್ನು ವಿಶ್ವಾಸಗಳಿಸಿದ್ದ ಅವರು ಯಾವಾಗಲೂ ಪಕ್ಷ ಸಂಘಟನೆ ಬಗ್ಗೆ ಚಿಂತಿಸುತ್ತಿದ್ದ ಮಹಾನ್ ಚೇತನ. ಧೀಮಂತ ನಾಯಕನನ್ನು ಕಳೆದುಕೊಂಡ ಚಿಕ್ಕಮಗಳೂರು ಜಿಲ್ಲೆ ಬಡವಾಗಿದೆ ಎಂದರು.

ಆರ್.ದೃವನಾರಾಯಣ್ ಅವರ ಆದರ್ಶ ಮೌಲ್ಯಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು. ಅವರು ಹಾಕಿಕೊಟ್ಟಿರುವ ಮಾರ್ಗದರ್ಶನದಲ್ಲಿ ಪಕ್ಷವನ್ನು ಸದೃಗೊಳಿಸಲು ಮುಖಂಡರು ಹಾಗೂ ಕಾರ್ಯಕರ್ತರು ಮುಂದಾಗಬೇಕು ಎಂದು ಹೇಳಿದರು.

ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ಮಾತನಾಡಿ, ಆರ್.ದೃವನಾರಾಯಣ್ ಅವರು ಪಕ್ಷದ ಯಾವುದೇ ಕೆಲಸವಿರಲಿ ಬಹಳ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದರು. ಸಂಘಟನಾ ಚತುರರಾಗಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುತ್ತಿದ್ದರು. ಅವರ ಅಗಲಿಕೆಯಿಂದ ಪಕ್ಷಕ್ಕೆ ತುಂಬಲಾರದ ನಷ್ಟವುಂಟಾಗಿದೆ ಎಂದು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಎಲ್.ಮೂರ್ತಿ ಮಾತನಾಡಿ, ವಿದ್ಯಾರ್ಥಿ ದಿಸೆಯಿಂದಲೇ ಆರ್.ದೃವನಾರಾಯಣ್ ಅವರು ರಾಜಕೀಯಕ್ಕೆ ಬಂದವರು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಉತ್ತಮ ಸಂದೇಶವನ್ನು ಸಾರಿದ ಮಹಾನ್ ನಾಯಕ ಆರ್.ದೃವನಾರಾಯಣ್ ಎಂದು ಬಣ್ಣಿಸಿದರು.

ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ.ಡಿ.ಎಲ್.ವಿಜಯಕುಮಾರ್ ಮಾತನಾಡಿ, ಆರ್.ದೃವನಾರಾಯಣ್ ಹಾಗೂ ಮಹದೇವ ಪ್ರಸಾದ್ ಅವರುಗಳು ಉತ್ತಮ ರಾಜಕಾರಣಿಗಳು. ಇಬ್ಬರೂ ಸರಳ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡವರು. ಪಕ್ಷದ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಉತ್ತಮ ಸಂಸದ ಪಟು ಎಂಬ ಹೆಸರನ್ನು ಪಡೆದ ನಾಯಕ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ, ಆರ್.ದೃವನಾರಾಯಣ್ ಅವರಲ್ಲಿ ಗಟ್ಟಿತನವಿತ್ತು. ನೇರ ನುಡಿ ಅವರ ಸ್ವಾಭಾವವಾಗಿತ್ತು. ಅವರ ನಿಧನದಿಂದ ಜಿಲ್ಲಾ ಕಾಂಗ್ರೆಸ್‌ಗೆ ತುಂಬಲಾರದ ನಷ್ಟವುಂಟಾಗಿದ್ದು, ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ತಿಳಿಸಿದರು.

ರಾಜ್ಯ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ರೇಖಾಹುಲಿಯಪ್ಪ ಗೌಡ ಮಾತನಾಡಿ, ಆರ್.ದೃವನಾರಾಯಣ್ ಅವರು ಸರಳ, ಸಜ್ಜನ, ನೇರ, ನುಡಿ ಹೊಂದಿದ ರಾಜಕಾರಣಿ. ಅವರ ನಿಧನದಿಂದ ಪಕ್ಷಕ್ಕೆ ತುಂಬಲಾರದ ನಷ್ಟವುಂಟಾಗಿದೆ. ಸಾಮಾನ್ಯ ಕಾರ್ಯಕರ್ತನೊಂದಿಗೆ ನಿಕಟ ಸಂಬಂಧವನ್ನು ಹೊಂದಿದ ಅಪರೂಪದ ರಾಜಕಾರಣಿ ಎಂದು ಹೇಳಿದರು.

ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ಮಾತನಾಡಿ, ರಾಜ್ಯದಲ್ಲಿರುವ ಶೋಷಿತರ ಪರವಾಗಿ ಧ್ವನಿ ಎತ್ತಿದ ರಾಜಕಾರಣಿ ಅಂದರೆ ಆರ್.ದೃವನಾರಾಯಣ್. ಪಕ್ಷ ನಿಷ್ಠೆ ಅವರಲ್ಲಿ ಬಹಳ ಇತ್ತು. ಇವರ ನಿಧನದಿಂದ ತಳಸಮುದಾಯಕ್ಕೆ ಹಾನಿಯಾಗಿದೆ. ಸಂವಿಧಾನದ ಪೀಠಿಕೆಯನ್ನು ತಮ್ಮಲ್ಲಿ ಅಳವಡಿಸಿಕೊಂಡಿದ್ದ ಧೀಮಂತ ನಾಯಕ ಎಂದು ಬಣ್ಣಿಸಿದರು.

ಕೆಪಿಸಿಸಿ ಸದಸ್ಯ ಎ.ಎನ್.ಮಹೇಶ್ ಮಾತನಾಡಿ, ಆರ್.ದೃವನಾರಾಯಣ್ ಅವರು ಎಲ್ಲಾ ಸಮುದಾಯದ ಜನನಾಯಕರು. ಎಲ್ಲರನ್ನು ಪ್ರೀತಿ, ಗೌರವಪೂರ್ವಕವಾಗಿ ಸ್ಪಂದಿಸುವ ವ್ಯಕ್ತಿತ್ವ ಹೊಂದಿದ ಸಜ್ಜನ ರಾಜಕಾರಣಿ ಎಂದು ಹೇಳಿದರು.

ಕೆಪಿಸಿಸಿ ವಕ್ತಾರ ಹೆಚ್.ಹೆಚ್.ದೇವರಾಜ್ ಮಾತನಾಡಿ, ರಾಜ್ಯ ಮತ್ತು ದೇಶಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ದೃವನಾರಾಯಣ್ ಅವರ ಅಗಲಿಕೆ ತುಂಬಲಾರದ ನಷ್ಟವುಂಟಾಗಿದೆ. ದೃವನಾರಾಯಣ್ ಕೇವಲ ದಲಿತ ನಾಯಕರಲ್ಲ ಎಲ್ಲಾ ಜನಾಂಗದ ನಾಯಕರಾಗಿದ್ದವರು ಎಲ್ಲರನ್ನು ಸರಿಸಮಾನಾಗಿ ನೋಡುವ ಗುಣವನ್ನು ಹೊಂದಿದ್ದ ಅಪರೂಪದ ರಾಜಕಾರಣಿ ಎಂದು ತಿಳಿಸಿದರು.

ಕಾಂಗ್ರೆಸ್ ಮುಖಂಡ ಹೆಚ್.ಡಿ.ತಮ್ಮಯ್ಯ ಮಾತನಾಡಿ, ಆರ್.ದೃವನಾರಾಯಣ್ ಅವರು ಜನಮನವನ್ನು ಗೆದ್ದಂತ ಜನನಾಯಕರು. ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವ ಮೂಲಕ ಎಲ್ಲಾ ವರ್ಗದವರನ್ನು ಪ್ರೀತಿ, ವಿಶ್ವಾಸದಿಂದ ಸೆಳೆಯುತ್ತಿದ್ದ ಉತ್ತಮ ರಾಜಕಾರಣಿ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ಬಿ.ಹೆಚ್.ಹರೀಶ್ ಮಾತನಾಡಿ, ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ, ಚಿಕ್ಕಮಗಳೂರು ಉಸ್ತುವಾರಿಗಳಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗಟ್ಟಿಗೊಳಿಸಿದ ಮಹಾನ್ ರಾಜಕಾರಣಿ. ಅವರ ಅಗಲಿಕೆಯಿಂದ ಪಕ್ಷಕ್ಕೆ ಮತ್ತು ಜಿಲ್ಲೆಗೆ ಅಪಾರವಾದ ಹಾನಿಯಾಗಿದೆ ಎಂದರು.

ಪ್ರಚಾರ ಸಮಿತಿ ಅಧ್ಯಕ್ಷ ಸೈಯದ್ ಹನೀಪ್, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಮಹಮದ್ ನಯಾಜ್, ಜಿಲ್ಲಾ ವಕ್ತಾರ ರೂಬಿನ್ ಮೊಸಸ್, ಎಸ್.ಸಿ ಘಟಕದ ಪ್ರಧಾನ ಕಾರ್ಯದರ್ಶಿ ಹೆಚ್.ಎನ್.ಸುರೇಶ್ ಆರ್.ದೃವನಾರಾಯಣ್ ಅವರ ಬಗ್ಗೆ ಮಾತನಾಡಿದರು.

ಶ್ರದ್ಧಾಂಜಲಿ ಸಭೆಯಲ್ಲಿ ನಗರಾಧ್ಯಕ್ಷ ತನೋಜ್ ಕುಮಾರ್ ನಾಯ್ಡು, ಎಸ್.ಸಿ.ಘಟಕದ ಜಿಲ್ಲಾಧ್ಯಕ್ಷ ಮಲ್ಲೇಶಸ್ವಾಮಿ, ನಗರಸಭೆ ಸದಸ್ಯರು, ವಿವಿಧ ಘಟಕಗಳ ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರುಗಳು, ಪಕ್ಷದ ಮುಖಂಡರುಗಳು, ಕಾರ್ಯಕರ್ತರು, ಅಭಿಮಾನಿಗಳು ಸೇರಿದಂತೆ ಮತ್ತಿತರರು ಇದ್ದರು.

An emotional tribute meeting to R.Druvanarayan in Chikkamagaluru city

About Author

Leave a Reply

Your email address will not be published. Required fields are marked *

You may have missed