September 19, 2024

ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆ.ಜೆ.ಜಾರ್ಜ್ ನೇಮಕ

0

ಚಿಕ್ಕಮಗಳೂರು: ಸಚಿವ ಕೆ.ಜೆ.ಜಾರ್ಜ್ ಅವರಿಗೆ ಮತ್ತೊಮ್ಮೆ ಜಿಲ್ಲೆಯ ನಂಟು ಬೆಸೆದುಕೊಂಡಿದೆ. ಎರಡನೇ ಬಾರಿಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕ ಗೊಂಡಿದ್ದು, ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ ಎಂಬ ನಿರೀಕ್ಷೆಗಳನ್ನು ಜನ ಹೊತ್ತಿದ್ದಾರೆ.

ಹೊರ ಜಿಲ್ಲೆಯವರನ್ನೇ ಹೆಚ್ಚು ಉಸ್ತುವಾರಿ ಸಚಿವರನ್ನಾಗಿ ನೋಡಿರುವ ಜಿಲ್ಲೆಗಳಲ್ಲಿ ಚಿಕ್ಕಮಗಳೂರು ಕೂಡ ಒಂದು. ಹತ್ತು ವರ್ಷಗಳಲ್ಲಿ ಹತ್ತು ಉಸ್ತುವಾರಿ ಸಚಿವರನ್ನು ಜಿಲ್ಲೆ ಕಂಡಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆಲ ದಿನಗಳಷ್ಟೇ ಸಿ.ಟಿ.ರವಿ ಉಸ್ತುವಾರಿ ಸಚಿವರಾಗಿದ್ದರು. ಅದನ್ನು ಹೊರತುಪಡಿಸಿ ಹತ್ತು ವರ್ಷಗಳ ಅವಧಿಯಲ್ಲಿ ಹೊರ ಜಿಲ್ಲೆಯರೇ ಉಸ್ತುವಾರಿ ಸಚಿವರು.

2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಅವಧಿಯ ಐದು ವರ್ಷಗಳಲ್ಲಿ ಮೂವರು ಉಸ್ತುವಾರಿ ಸಚಿವರು ಬದಲಾದರು. ಮೊದಲಿಗೆ ಅಭಯಚಂದ್ರ ಜೈನ್ ಸಚಿವರಾದರು, ಸಚಿವ ಸಂಪುಟ ವಿಸ್ತರಣೆ ವೇಳೆ ಅವರನ್ನು ಸಂಪುಟದಿಂದ ಕೈಬಿಟ್ಟಾಗ ಜಿ.ಪರಮೇಶ್ವರ್ ಸಚಿವರಾದರು. ಬಳಿಕ ರೋಷನ್‌ ಬೇಗ್‌ ಅವರು ಉಸ್ತುವಾರಿ ಸಚಿವರಾಗಿ ಬಂದರು.

2018ರ ವಿಧಾನಸಭೆ ಚುನಾವಣೆ ಬಳಿಕ ಸಮ್ಮಿಶ್ರ ಸರ್ಕಾರ ರಚನೆಯಾಗಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಯಾದರು. ಆ ಅವಧಿಯಲ್ಲಿ ಕೆ.ಜೆ.ಜಾರ್ಜ್ ಅವರು ಮೊದಲ ಬಾರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದರು. ಸರ್ಕಾರ ಬದಲಾದ ಬಳಿಕ ಬಿ.ಎಸ್.ಯಡಿಯೂರಪ್ಪ ಅವರ ಮಂತ್ರಿ ಮಂಡಲದಲ್ಲಿ ಸಚಿವರಾದ ಸಿ.ಟಿ.ರವಿ ಅವರು ಜಿಲ್ಲಾ ಉಸ್ತುವಾರಿ ಸಚಿವರಾದರು. ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ಬಳಿಕ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನಂತರ ಎಸ್.ಅಂಗಾರ, ಕೆ.ಎಸ್‌. ಈಶ್ವರಪ್ಪ, ಬೈರತಿ ಬಸವರಾಜು ಅವರು ಜಿಲ್ಲೆಯ ಉಸ್ತುವಾರಿ ನಿರ್ವಹಿಸಿದರು. ಕೋವಿಡ್ ಸಂದರ್ಭದಲ್ಲಿ ಉಸ್ತುವಾರಿ ಸಚಿವರೇ ಇಲ್ಲದ ವೇಳೆ ಕೋಟ ಶ್ರೀನಿವಾಸ ಪೂಜಾರಿ ಮತ್ತು ಅರಗ ಜ್ಞಾನೇಂದ್ರ ಅವರೂ ಉಸ್ತುವಾರಿ ಹೊಣೆ ನಿಭಾಯಿಸಿದರು.

ಇದೆಲ್ಲದರ ನಡುವೆ 2021ರ ಜನವರಿ 26ರ ಗಣರಾಜ್ಯೋತ್ಸವದ ದಿನ ಧ್ವಜಾರೋಹಣಕ್ಕೆ ಸೀಮಿತವಾಗಿ ಅಂದಿನ ಸಚಿವ ಅರವಿಂದ ಲಿಂಬಾವಳಿ ಬಂದಿದ್ದರು. ಈ ಬಾರಿ ಕಾಂಗ್ರೆಸ್ ಪಕ್ಷದ ಐವರು ಶಾಸಕರಿದ್ದರೂ ಸಚಿವ ಸ್ಥಾನ ಯಾರಿಗೂ ಸಿಗಲಿಲ್ಲ. ಮೊದಲಿಗೆ ಕೆ.ಜೆ.ಜಾರ್ಜ್ ಅವರು ಉಸ್ತುವಾರಿ ಸಚಿವರಾಗಿ ನೇಮಕ ಗೊಂಡಿದ್ದಾರೆ.

KJ George appointed as District In-charge Minister

 

About Author

Leave a Reply

Your email address will not be published. Required fields are marked *

You may have missed