September 19, 2024

ವೈದ್ಯರ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಎಸ್ಸಿ ಮೋರ್ಚಾ ಆಗ್ರಹ

0
ವೈದ್ಯರ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಎಸ್ಸಿ ಮೋರ್ಚಾ ಆಗ್ರಹ

ವೈದ್ಯರ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಎಸ್ಸಿ ಮೋರ್ಚಾ ಆಗ್ರಹ

ಚಿಕ್ಕಮಗಳೂರು:  ನಗರದ ಸರ್ಕಾರಿ ಆಸ್ಪತ್ರೆಯ ಕರ್ತವ್ಯ ನಿರತ ವೈದ್ಯರ ಮೇಲೆ ಹಲ್ಲೆ ಮಾಡಿರುವ ಕ್ರಮವನ್ನು ಬಿಜೆಪಿ ಎಸ್ಸಿ ಮೋರ್ಚಾ ಖಂಡಿಸುತ್ತದೆ ಎಂದು ಜಿಲ್ಲಾಧ್ಯಕ್ಷ ಕೆ.ಪಿ ವೆಂಕಟೇಶ್ ತಿಳಿಸಿದ್ದಾರೆ.

ಅವರು ಇಂದು ಈ ಸಂಬಂಧ ಎಸ್‌ಪಿ ಅವರಿಗೆ ದೂರು ನೀಡಿ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ವೈದ್ಯೋ ನಾರಾಯಣ ಎಂಬಂತೆ ಕಷ್ಟಗಳು ಬಂದಾಗ ದೇವರ ಬಳಿಗೆ ಹೋಗುತ್ತೇವೆ. ಅದೇ ರೀತಿ ಕಾಯಿಲೆಗಳು ಬಂದಾಗ ವೈದ್ಯರ ಹತ್ತಿರ ಹೋಗುತ್ತೇವೆ. ರೋಗಗಳನ್ನು ಗುಣಪಡಿಸುವ ವೈದ್ಯರ ಮೇಲೆ ಚಪ್ಪಲಿ ಎಸೆದು ಕೊರಳಪಟ್ಟಿ ಹಿಡಿದು ಎಳೆದಾಡಿ ಅಪಮಾನ ಮಾಡಿದ್ದಾರೆಂದು ಆರೋಪಿಸಿದರು.

ಕೋವಿಡ್ ಸಂದರ್ಭದಲ್ಲಿ ವೈದ್ಯರು ತಮ್ಮ ಜೀವವನ್ನೇ ಪಣವಿಟ್ಟು ಸೇವೆ ಸಲ್ಲಿಸಿದ್ದಾರೆ. ಸಾವಿರಾರು ನಾಗರೀಕರ ಪ್ರಾಣ ರಕ್ಷಣೆ ಮಾಡಿದ್ದಾರೆ. ಡೆಂಗ್ಯೂ ಪ್ರಕರಣದಲ್ಲಿ ರಾಜ್ಯದಲ್ಲೇ ಜಿಲ್ಲೆ ಎರಡನೇ ಸ್ಥಾನದಲ್ಲಿದ್ದು ಇಂತಹ ಸಂದರ್ಭದಲ್ಲಿ ಆಸ್ಪತ್ರೆ ತುಂಬಾ ರೋಗಿಗಳು ಇದ್ದಾಗ ವೈದ್ಯರ ಮೇಲೆ ಹಲ್ಲೆ ನಡೆಸಿರುವುದನ್ನು ಬಿಜೆಪಿ ಎಸ್ಸಿ ಮೋರ್ಚಾ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಗೌರಿ-ಗಣೇಶ ಹಬ್ಬದ ಅಂಗವಾಗಿ ಮೂರು ದಿನ ಆಸ್ಪತ್ರೆಗೆ ರಜೆ ಇದ್ದರೂ ವೈದ್ಯರು ರೋಗಿಗಳ ಪರೀಕ್ಷೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ರೋಗಿಯನ್ನು ಮೊದಲು ನೋಡಬೇಕೆಂದು ಒತ್ತಾಯಪಡಿಸಿ, ವೈದ್ಯರ ಮೇಲೆ ಹಲ್ಲೆ ನಡೆಸಿದ ಆರೋಪಿಗಳಿಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಇದೂವರೆಗೆ ಇದೇ ಆಸ್ಪತ್ರೆಯಲ್ಲಿ ಮೂರ್ಲ್ನಾಲ್ಕು ಗಲಾಟೆ ಪ್ರಕರಣಗಳು ನಡೆದಿದ್ದು, ಆರೋಪಿಗಳಿಗೆ ಸೂಕ್ತ ಶಿಕ್ಷೆ ಆಗದಿರುವುದೇ ವೈದ್ಯರ ಮೇಲೆ ಹಲ್ಲೆ ನಡೆಸುವ ಘಟನೆಗಳು ಮರುಕಳಿಸಲು ಕಾರಣವಾಗಿದೆ. ಆದ್ದರಿಂದ ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ಸೂಕ್ತ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.

ವೈದ್ಯರ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳಿಗೆ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದ ಅವರು, ಶಿಕ್ಷೆ ನೀಡದಿದ್ದರೆ ಎಸ್‌ಪಿ ಕಚೇರಿ ಎದುರು ಬಿಜೆಪಿಯಿಂದ ಬೃಹತ್ ಪ್ರತಿಭಟನೆ ನಡೆಸುವುದಾಗಿ ಹೇಳಿದರು.

ಮನವಿ ಸ್ವೀಕರಿಸಿ ಮಾತನಾಡಿದ ಪ್ರಭಾರಿ ಎಸ್‌ಪಿ ಈ ಘಟನೆ ಹಿನ್ನೆಲೆಯಲ್ಲಿ ೧೧೨ ವಾಹನದ ಜೊತೆಗೆ ಹೆಚ್ಚುವರಿ ಪೊಲೀಸರನ್ನು ಆಸ್ಪತ್ರೆಗೆ ನಿಯೋಜನೆ ಮಾಡುವುದಾಗಿ ಭರವಸೆ ನೀಡಿ ಅನುಮಾನ ಬಂದ ವ್ಯಕ್ತಿಗಳು ಕಂಡುಬಂದರೆ ಸೂಕ್ತ ಕ್ರಮ ವಹಿಸುವಂತೆ ಸೂಚಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಎಸ್ಸಿ ಮೋರ್ಚಾ ಉಪಾಧ್ಯಕ್ಷ ಕವೀಶ್, ಪ್ರಧಾನ ಕಾರ್ಯದರ್ಶಿ ಸುಜಿತ್, ಮುಖಂಡರುಗಳಾದ ಸುರೇಶ್, ಕನಕರಾಜ್ ಅರಸ್, ಸೀತಾರಾಮ್ ಮತ್ತಿತರರು ಉಪಸ್ಥಿತರಿದ್ದರು.

SC Morcha demands severe punishment for those accused of assaulting doctors

About Author

Leave a Reply

Your email address will not be published. Required fields are marked *

You may have missed