September 19, 2024

ಒತ್ತುವರಿ ತೆರವುಗೊಳಿಸದಿರುವ ಕೆರೆಗಳನ್ನು ಶೀಘ್ರವಾಗಿ ಒತ್ತುವರಿ ತೆರವುಗೊಳಿಸುವಂತೆ ಸೂಚನೆ

0
ಜಿಲ್ಲಾ ಪಂಚಾಯಿತಿ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಸಮಗ್ರ ಅಭಿವೃದ್ಧಿ ಪರಿಶೀಲನಾ ಸಭೆ

ಜಿಲ್ಲಾ ಪಂಚಾಯಿತಿ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಸಮಗ್ರ ಅಭಿವೃದ್ಧಿ ಪರಿಶೀಲನಾ ಸಭೆ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ಕೆರೆಗಳನ್ನು ಜಂಟಿ ಸರ್ವೇ ಮಾಡಿ ಒತ್ತುವರಿ ತೆರವುಗೊಳಿಸುವಂತೆ ಈಗಾಗಲೇ ಸೂಚಿಸಿದ್ದರು. ಒತ್ತುವರಿಯಾಗಿರುವ ಅನೇಕ ಕೆರೆಗಳ ಒತ್ತುವರಿಯನ್ನು ಇನ್ನೂ ತೆರವುಗೊಳಿಸಿರುವುದಿಲ್ಲ ಕೂಡಲೇ ಜಂಟಿ ಸರ್ವೇ ಕಾರ್ಯಕೈಗೊಂಡು ಒತ್ತುವರಿ ತೆರವುಗೊಳಿಸುವಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲೆಯ ಸಮಗ್ರ ಅಭಿವೃದ್ಧಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಈ ಬಾರಿ ಹೆಚ್ಚು ಮಳೆಯಾಗಿದ್ದು, ಮಳೆ ನೀರು ಸಂಗ್ರಹ ಘಟಕಗಳಾದ ಕೆರೆ-ಕಟ್ಟೆಗಳನ್ನು ಸುವ್ಯವಸ್ಥಿತವಾಗಿ ನಿರ್ವಹಣೆ ಮಾಡಬೇಕು. ಜಿಲ್ಲೆಯಾದ್ಯಂತ ಜಿಲ್ಲಾ ಪಂಚಾಯಿತಿ ಹಾಗೂ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಸೇರಿದ ಅನೇಕ ಕೆರೆಗಳು ಒತ್ತುವರಿಯಾಗಿದ್ದು, ಒತ್ತುವರಿದಾರರಿಗೆ ನೋಟೀಸ್ ನೀಡಿ ಕಾನೂನಾತ್ಮಕ ಕ್ರಮಗಳಿಂದ ಯಾವುದೇ ಸಬೂಬುಗಳಿಲ್ಲದೆ ಕಡ್ಡಾಯವಾಗಿ ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಬೇಕು ಹಾಗೂ ಕೆರೆಗೆ ನೀರು ಹರಿದು ಬರುವ ರಾಜ ಕಾಲುವೆಗಳು ಒತ್ತುವರಿಯಾಗಿದ್ದಲ್ಲಿ ಒತ್ತುವರಿ ತೆರವುಗೊಳಿಸಿ ಕೆರೆಯ ಸುತ್ತ ಬಯೋ ಫೆನ್ಸಿಂಗ್ (ನೈಸರ್ಗಿಕ ಬೇಲಿ) ಆಳವಡಿಸಿ ಕೆರೆಯ ನಿರ್ವಹಣೆಯನ್ನು ಸುವ್ಯವಸ್ಥಿತವಾಗಿ ನಿರ್ವಹಿಸುವಂತೆ ಹೇಳಿದರು.

ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ಮಾತನಾಡಿ ಜಿಲ್ಲೆಯಲ್ಲಿ ಒಟ್ಟು ೧೭೨೯ ಇಲಾಖಾ ವ್ಯಾಪ್ತಿಗೆ ಒಳಪಡುವ ಕೆರೆಗಳಿದ್ದು, ೭೬೧ ಕೆರೆಗಳು ಒತ್ತುವರಿ ಎಂದು ಗುರುತಿಸಲಾಗಿದೆ. ಇವುಗಳಲ್ಲಿ ೨೨೯ ಕೆರೆಗಳ ಒತ್ತುವರಿಯನ್ನು ಈಗಾಗಲೇ ತೆರವುಗೊಳಿಸಿದ್ದು, ೫೩೨ ಕೆರೆಗಳ ಒತ್ತುವರಿ ತೆರವುಗೊಳಿಸಲು ಕ್ರಮವಹಿಸಲಾಗಿದೆ ಎಂದರು.

ಮಳೆಯಿಂದ ಹಾನಿಯಾಗಿರುವ ಮತ್ತು ದುರಸ್ಥಿ ಅಗತ್ಯವಿರುವ ಶಾಲಾ ಕಟ್ಟಡಗಳನ್ನು ಸಮೀಕ್ಷೆ ಮಾಡಿ ಶೀಘ್ರವಾಗಿ ದುರಸ್ಥಿ ಮಾಡುವಂತೆ ಹಾಗೂ ಹೊಸ ಕಟ್ಟಡಗಳ ಅವಶ್ಯಕತೆ ಇದ್ದಲ್ಲಿ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಕ್ರಮವಹಿಸಬೇಕು ಎಂದ ಅವರು ಮಳೆಯಿಂದಾಗಿ ಹಾಳಾಗಿರುವ ರಸ್ತೆಗಳನ್ನು ಶೀಘ್ರವಾಗಿ ದುರಸ್ತಿ ಪಡಿಸಿ ಸಾರ್ವಜನಿಕರ ಓಡಾಟಕ್ಕೆ ಅನುವು ಮಾಡಿಕೊಡಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿಗಳು ಮಾಹಿತಿ ನೀಡಿ ೨೦೨೨-೨೩ನೇ ಸಾಲಿನ ವಿವೇಕಾ ಯೋಜನೆಯಡಿ ಒಟ್ಟು ೧೬೯ ಶಾಲಾ ಕೊಠಡಿಗಳ ದುರಸ್ಥಿ ಕಾಮಗಾರಿ ಕ್ರಮ ಯೋಜನೆಗೆ ಅನುಮೋದನೆ ಪಡೆಯಲಾಗಿದ್ದು, ಈವರೆಗೆ ಒಟ್ಟು ೧೪೧ ಕೊಠಡಿಗಳ ಕಾಮಗಾರಿ ಪೂರ್ಣಗೊಂಡಿದೆ ಹಾಗೂ ೨೧ ಕಾಮಗಾರಿಗಳು ಪ್ರಗತಿಯಲ್ಲಿದ್ದು, ೦೭ ಕಾಮಗಾರಿಗಳು ಪ್ರಾರಂಭವಾಗಬೇಕಿದೆ. ೨೦೨೨-೨೩ನೇ ಸಾಲಿನ ರಾಜ್ಯ ವಲಯ ಸರ್ಕಾರಿ ಶಾಲೆಗಳ ತುರ್ತು ಕೊಠಡಿಗಳ ದುರಸ್ಥಿ ಯೋಜನೆಯಡಿ ಒಟ್ಟು ೪೪ ಶಾಲೆಗಳ ೧೩೧ ಕೊಠಡಿ ದುರಸ್ಥಿ ಕಾಮಗಾರಿಗೆ ಅನುಮೋದನೆಗೊಂಡಿದ್ದು, ೧೦೯ ಕೊಠಡಿಗಳ ಕಾಮಗಾರಿಗಳು ಪೂರ್ಣಗೊಂಡಿದ್ದು, ೨೨ ಕಾಮಗಾರಿಗಳು ಪ್ರಗತಿಯಲ್ಲಿದೆ ಹಾಗೂ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಮತ್ತು ಶಾಲಾ ಶಿಕ್ಷಣ ಇಲಾಖೆಯ ಅನುದಾನದ ಒಗ್ಗೂಡಿಸುವ ಮೂಲಕ ಜಿಲ್ಲೆಗೆ ೨೫೩ ಶಾಲೆಗಳ ಶೌಚಾಲಯ ನಿರ್ಮಾಣಕ್ಕಾಗಿ ಕ್ರಮ ಯೋಜನೆ ಅನುಮೋದನೆಗೊಂಡಿದ್ದು, ೪೫ ಕಾಮಗಾರಿ ಪೂರ್ಣಗೊಂಡಿದೆ. ೫೮ ಕಾಮಗಾರಿಗಳ ಪ್ರಗತಿಯಲ್ಲಿದೆ ಹಾಗೂ ೧೫೦ ಕಾಮಗಾರಿಗಳು ಪ್ರಾರಂಭವಾಗಬೇಕಿದೆ ಎಂದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಕ್ಕೆ ಕ್ರಮವಹಿಸಬೇಕು ಜಿಲ್ಲೆಯ ಎಲ್ಲಾ ಶಾಲೆಯ ಶಿಕ್ಷಕರು ವಿಷಯವಾರು ಕೈಪಿಡಿಗಳನ್ನು ಸಿದ್ಧಪಡಿಸಿಕೊಂಡು ಮಕ್ಕಳ ವ್ಯಾಸಂಗಕ್ಕೆ ಅಗತ್ಯವಾದ ವಾತಾವರಣ ಕಲ್ಪಿಸಬೇಕು. ವಿಶೇಷ ತರಗತಿಗಳನ್ನು ನಡೆಸುವಂತೆ ತಿಳಿಸಿದ ಅವರು ಉತ್ತಮ ಫಲಿತಾಂಶ ಪಡೆಯಲು ಅಗತ್ಯ ಕಾರ್ಯ ಯೋಜನೆ ರೂಪಿಸಬೇಕೆಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು.

ಇನ್ನು ಮುಂದೆ ಯಾವುದೇ ಇಲಾಖೆ ಕಛೇರಿಗಳಿಗೆ ಬರುವ ಅರ್ಜಿಗಳನ್ನು ಮುಂದಿನ ಹಂತದ ಪರಿಶೀಲನೆಗೆ ಇ-ಆಫೀಸ್ ತಂತ್ರಾಂಶದ ಮೂಲಕ ತಮ್ಮ ಮೇಲಾಧಿಕಾರಿಗಳಿಗೆ ಕಳುಹಿಸಬೇಕು. ಇದರಿಂದ ಸಮಯ ಉಳಿತಾಯ ಮತ್ತು ಕಾಗದ ಉಳಿತಾಯದೊಂದಿಗೆ ಸಾರ್ವಜನಿಕರ ಸಮಸ್ಯೆ, ಅಹವಾಲುಗಳಿಗೆ ಶೀಘ್ರವಾಗಿ ಉತ್ತರ ನೀಡಿ ಉತ್ತಮ ಸೇವೆ ಒದಗಿಸಲು ಸಾಧ್ಯವಾಗುತ್ತದೆ ಎಂದ ಅವರು. ಪ್ರತಿಯೊಂದು ಇಲಾಖೆ ಕಛೇರಿಗಳಲ್ಲಿ ಕಡ್ಡಾಯವಾಗಿ ಇ-ಆಫೀಸ್ ತಂತ್ರಾಂಶವನ್ನು ಆಳವಡಿಸಿಕೊಂಡು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಾಣಾಧಿಕಾರಿ ಹೆಚ್.ಎಸ್. ಕೀರ್ತನಾ, ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ, ಚಿಕ್ಕಮಗಳೂರು ಉಪವಿಭಾಗಾಧಿಕಾರಿ ದಲ್ಜೀತ್ ಕುಮಾರ್, ತರೀಕೆರೆ ಉಪವಿಭಾಗಾಧಿಕಾರಿ ಕಾಂತರಾಜ್ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Notice to de-encroach the unencroached lakes as soon as possible

About Author

Leave a Reply

Your email address will not be published. Required fields are marked *

You may have missed