September 19, 2024

ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸುವ ವ್ಯಕ್ತಿ ಗುರಿ ಮುಟ್ಟುತ್ತಾನೆ

0
ಜಿಲ್ಲಾ ಆಟದ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟ

ಜಿಲ್ಲಾ ಆಟದ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟ

ಚಿಕ್ಕಮಗಳೂರು: ಸಮಾಜದಲ್ಲಿ ಎದುರಾಗುವ ಪ್ರತಿಯೊಂದು ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸುವ ವ್ಯಕ್ತಿ ತನ್ನ ಗುರಿ ಮುಟ್ಟುವಲ್ಲಿ ಯಶಸ್ವಿಯಾಗುತ್ತಾನೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಅಭಿಪ್ರಾಯಿಸಿದರು.

ಅವರು ಇಂದು ನೇತಾಜಿ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟ-೨೦೨೪-೨೫ ಉದ್ಘಾಟಿಸಿ ಮಾತನಾಡಿದರು.

ಜೀವನವನ್ನು ಆನಂದವಾಗಿ ಪಡೆಯಲು ಅತ್ಯಂತ ಸರಳವಾಗಿರುವ ಆಟೋಟಗಳನ್ನು ಬದುಕಿನ ಭಾಗವಾಗಿ ಮಾಡಿಕೊಳ್ಳಬೇಕು. ಇದಕ್ಕೆ ನಿಯಮದಿಂದ ಕೂಡಿರುವ ಕ್ರೀಡೆ ಸಹಕಾರಿ ಎಂದರು.

ಕ್ರೀಡಾಕೂಟಗಳಲ್ಲಿ ಭಾಗವಹಿಸುವುದೇ ಹೆಚ್ಚುಗಾರಿಕೆ ಇದ್ದು, ಗೆಲುವಿನ ಹಂಬಲ ಪ್ರತಿಯೊಬ್ಬರಿಗೂ ಇರುತ್ತದೆ. ಹಂಬಲವೇ ಒಂದು ಉತ್ಸಾಹ ಮೂಡಿಸಲು ಕಾರಣವಾಗುತ್ತದೆ, ಇದರಿಂದ ಸವಾಲಾಗಿ ಸ್ವೀಕಾರ ಮಾಡುವಂತಹ ಆತ್ಮವಿಶ್ವಾಸ ಮೂಡುತ್ತದೆ ಎಂದು ತಿಳಿಸಿದರು.

ಸೋಲಿನಿಂದ ಕುಗ್ಗದೆ ಸವಾಲುಗಳಿಗೆ ಎದೆಗುಂದದೆ ವಿರೋಧಕ್ಕೆಂದು ಬಗ್ಗದಂತಹ ಗಟ್ಟಿತನವನ್ನು ಬೆಳೆಸುವ ಎಂಬಂತೆ ಗೆದ್ದರೆ ಸಂಭ್ರಮಿಸಿಬೇಕು, ಸೋತರೆ ಹತಾಶೆಗೊಳಗಾಗಬಾರದು, ಮತ್ತೊಮ್ಮೆ ಗೆಲ್ಲುತ್ತೇವೆಂಬ ವಿಶ್ವಾಸದೊಂದಿಗೆ ಮುಂದುವರಿಯಬೇಕೆಂದು ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದರು.

ಕ್ರೀಡೆ ಬದುಕಿನ ಭಾಗವಾದರೆ ಜೀವನಕ್ಕೊಂದು ಅರ್ಥ ಬರುತ್ತದೆ. ನಾವೆಲ್ಲಾ ಕ್ರೀಡೆಯನ್ನು ಬದುಕಿನ ಭಾಗವಾಗಿಸಬೇಕಾದರೆ ಬಾಲ್ಯದಿಂದಲೇ, ವಿದ್ಯಾರ್ಥಿದೆಸೆಯಿಂದಲೇ ಪಾಠದ ಜೊತೆಗೆ ಆಟವೂ ಕೂಡ ಜೋಡಿಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ ಎಂದು ತಿಳಿಸಿದರು.

ಇತ್ತೀಚೆಗೆ ನಡೆದ ಒಲಂಪಿಕ್ಸ್ ಮತ್ತು ಪ್ಯಾರಾಲಂಪಿಕ್ಸ್‌ನಲ್ಲಿ ಈ ಹಿಂದಿನ ದಾಖಲೆಗಳನ್ನು ಭಾರತ ತನ್ನ ದಾಖಲೆಗಳನ್ನು ಮೀರಿ ಸಾಧನೆ ಮಾಡಿದೆ ಎಂದು ಶ್ಲಾಘಿಸಿದ ಅವರು ಚೀನಾ, ಅಮೇರಿಕಾ, ಇಂಗ್ಲೆಂಡ್ ಮತ್ತಿತರೆ ಅಂತರಾಷ್ಟ್ರೀಯ ಮಟ್ಟಕ್ಕೆ ಹೋಲಿಕೆ ಮಾಡಿಕೊಂಡಾಗ ಮಾತ್ರ ಅಲ್ಲದೆ ಸಣ್ಣ ಸಣ್ಣ ರಾಷ್ಟ್ರಗಳ ಸಾಧನೆಗೆ ಹೋಲಿಸಿಕೊಂಡರೆ ಒಲಂಪಿಕ್ಸ್‌ನ ಸಾಧನೆ ಸಮಾದಾನಕರವಾಗಿಲ್ಲ. ಆದರೆ ಹಿಂದಿಗಿಂತ ಹೆಚ್ಚು ಪದಕ ಗಳಿಸಿದ್ದೇವೆ ಎಂಬ ಸಮಾದಾನದ ಸಂಗತಿಯಾಗಿದೆ ಎಂದರು.

೧೪೦ ಕೋಟಿ ಜನಸಂಖ್ಯೆ ಇರುವ ಭಾರತದಂತಹ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾಡಿದ ಸಾಧನೆ ಸಮಾಧಾನಪಟ್ಟುಕೊಳ್ಳುವ ಸಂಗತಿಯಲ್ಲ ಎಂದು ವಿಷಾಧಿಸಿದರು.

ಪ್ರಧಾನಿ ನರೇಂದ್ರ ಮೋದಿ ಖೇಲ್ ಇಂಡಿಯಾ ಮೂಲಕ ವಿದ್ಯಾರ್ಥಿಗಳಲ್ಲಿ ಕ್ರೀಡೆಯ ಬಗ್ಗೆ ಆಸಕ್ತಿ ಬೆಳೆಸಲು ವಿಶೇಷವಾದ ಪ್ರಯತ್ನ ಮಾಡಿದ್ದಾರೆ. ತಾವೂ ಕೂಡ ರಾಜ್ಯದಲ್ಲಿ ಕ್ರೀಡೆ ಮತ್ತು ಪ್ರವಾಸೋದ್ಯಮ ಸಚಿವರಾಗಿದ್ದಾಗ ಚಿಕ್ಕಮಗಳೂರು ನಗರಕ್ಕೆ ೧೪ ಕೋಟಿ ರೂ ಕೇಂದ್ರ ಸರ್ಕಾರದಿಂದ ಮಂಜೂರು ಮಾಡಿಸಿ, ಇದರಿಂದ ಇಂಡೋರ್ ಸ್ಟೇಡಿಯಂ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದ್ದು, ಸಿಂಥೆಟಿಕ್ ಟ್ರ್ಯಾಕ್ ಕಾಮಗಾರಿ ಗುತ್ತಿಗೆದಾರನ ವಿಳಂಭದಿಂದಾಗಿ ನೆನೆಗುದಿಗೆ ಬಿದ್ದಿದೆ ಎಂದು ಹೇಳಿದರು.

ಜಿಲ್ಲಾ ಆಟದ ಮೈದಾನ ಸೇರಿದಂತೆ ನಗರದ ವಿವಿದೆಡೆಯಲ್ಲಿ ೮ಕ್ಕೂ ಹೆಚ್ಚು ಬಯಲು ಜಿಮ್ನಾಸ್ಟಿಕ್ ಯೂನಿಟ್‌ಗಳಿಗೆ ಹಣ ನೀಡಿ ಕ್ರೀಡಾಸಕ್ತಿಯನ್ನು ವ್ಯಾಯಾಮದ ಮೂಲಕ ಆರೋಗ್ಯ ಕಾಪಾಡಲು ಬೇಕಾದ ಒಂದು ಪೂರಕ ಪ್ರಯತ್ನ ಮಾಡಿರುವುದಾಗಿ ಈ ಸಂದರ್ಭದಲ್ಲಿ ಸ್ಮರಿಸಿದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದೇವೇಂದ್ರ ಮಾತನಾಡಿ, ಕ್ರೀಡೆಗಳು ವ್ಯಕ್ತಿಗಳಲ್ಲಿರುವ ಒತ್ತಡಗಳನ್ನು ಕಡಿಮೆ ಮಾಡಲು ಸಹಕಾರಿಯಾಗಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕೆಂದು ಕರೆನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯ ಸಂಘದ ಅಧ್ಯಕ್ಷೆ ತಸ್ನಿಮ್ ಫಾತಿಮಾ, ತೇಜಸ್ವಿನಿ, ನಾಗರಾಜ್, ರಾಜೇಂದ್ರ, ಮತ್ತಿತರರು ಉಪಸ್ಥಿತರಿದ್ದರು.

A district level sports meet for pre-graduation college students organized at the district playground

About Author

Leave a Reply

Your email address will not be published. Required fields are marked *

You may have missed