September 19, 2024

ಅಭಿವೃದ್ಧಿಯ ಫಲ ಎಲ್ಲಾ ನಾಗರಿಕರಿಗೆ ತಲುಪಿಸಲು ಗುರಿ

0
ದೊಡ್ಡಮುತ್ತಿನಮ್ಮ ದೇವಿ ದೇವಾಲಯದ ಭೂಮಿಪೂಜೆ

ದೊಡ್ಡಮುತ್ತಿನಮ್ಮ ದೇವಿ ದೇವಾಲಯದ ಭೂಮಿಪೂಜೆ

ಚಿಕ್ಕಮಗಳೂರು: ಅಭಿವೃದ್ಧಿಯ ಫಲ ಕ್ಷೇತ್ರದ ಪ್ರತಿಯೊಬ್ಬ ನಾಗರೀಕರಿಗೂ ತಲುಪಿಸಬೇಕೆಂಬುದು ಎಲ್ಲಾ ಜನಪ್ರತಿನಿಧಿಗಳ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಪಕ್ಷಾತೀತವಾಗಿ ಅಭಿವೃದ್ಧಿಗೆ ಸ್ಪಂದಿಸುತ್ತಿರುವುದಾಗಿ ಶಾಸಕ ಹೆಚ್.ಡಿ ತಮ್ಮಯ್ಯ ತಿಳಿಸಿದರು.

ಅವರು ಇಂದು ಹಿರೇಮಗಳೂರಿನಲ್ಲಿ ಸುಮಾರು ೮೫ ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ದೊಡ್ಡಮುತ್ತಿನಮ್ಮ ದೇವಿ ದೇವಾಲಯದ ಭೂಮಿಪೂಜೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಭಿವೃದ್ಧಿ ಹಾಗೂ ಕುಡಿಯುವ ನೀರು ವಿಷಯದಲ್ಲಿ ಪಕ್ಷದಲ್ಲಿ ಬೇರೆ ಬೇರೆಯಾದರೂ ಕ್ಷೇತ್ರದ ರೈತರ ವಿಷಯದಲ್ಲಿ ಸಿ.ಟಿ ರವಿ ಹಾಗೂ ತಾವು ಒಗ್ಗಟ್ಟಿನಿಂದ ಕೆಲಸಮಾಡಲು ಬದ್ಧವಾಗಿದ್ದು, ಸಿ.ಟಿ ರವಿಯವರು ಮಂಜೂರು ಮಾಡಿಸಿದ ಮೆಡಿಕಲ್ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇವುಗಳನ್ನು ಮುಂದುವರೆಸುವುದಾಗಿ ತಿಳಿಸಿದ ಅವರು ರಾಜಕೀಯ ದುರುದ್ದೇಶದಿಂದ ತೊಂದರೆ ಮಾಡದೆ ಸರ್ಕಾರ ಬದಲಾಗಿದೆ ಎಂಬ ಕಾರಣಕ್ಕೆ ನಿಲ್ಲಿಸಬಾರದೆಂದು ನನ್ನ ಅಭಿಲಾಷೆಯಾಗಿದೆ ಎಂದರು.

ಹೊಸಾ ಯೋಜನೆಗಳಿಗಿಂತ ಹಳೆಯ ರೈಲ್ವೆ ನಿಲ್ದಾಣಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಮೇಲ್ದರ್ಜೆಗೇರಿಸಿ ಅವುಗಳನ್ನು ಪೂರ್ಣಗೊಳಿಸುವ ಪ್ರಕ್ರಿಯೆ ನಡೆಸುತ್ತಿದ್ದು, ಅದೇ ಮಾದರಿಯಲ್ಲಿ ಕ್ಷೇತ್ರದಾದ್ಯಂತ ಕೈಗೊಳ್ಳಲಾಗಿರುವ ಹಳೆ ಕಾಮಗಾರಿಗಳನ್ನು ಅಡೆತಡೆ ಇಲ್ಲದಂತೆ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.

ದೇವಾಲಯಗಳು ಎಷ್ಟು ಮುಖ್ಯವೋ, ಆಸ್ಪತ್ರೆಗಳ ಅಗತ್ಯತೆ ಅಷ್ಟೇ ಮುಖ್ಯ. ಯಾವುದೇ ಅಭಿವೃದ್ಧಿ ಕೆಲಸಗಳನ್ನು ನಿಲ್ಲಿಸದೆ ಈಗಿರುವ ಕಾಂಗ್ರೆಸ್ ಸರ್ಕಾರದಲ್ಲಿ ಅನುದಾನ ತಂದು ಪೂರ್ಣಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಪಂಚ ಗ್ಯಾರಂಟಿಗಳ ಅನುಷ್ಠಾನದಿಂದಾಗಿ ಇತರೆ ಅಭಿವೃದ್ಧಿಗೆ ಹಿನೆಡೆಯಾಗಿದೆ ಎಂಬುದನ್ನು ಒಪ್ಪಿಕೊಳ್ಳುತ್ತ ಮುಂದೆ ಹೆಚ್ಚು ಅನುದಾನ ಬಿಡುಗಡೆಯಾಗುವ ಸಂದರ್ಭದಲ್ಲಿ ಅದರ ಸಿಂಹಪಾಲು ಅನುದಾನವನ್ನು ಹಿರೇಮಗಳೂರಿಗೆ ನೀಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಭಾವನೆಗಳ ಮೇಲೆ ನಡೆಯುತ್ತಿರುವ ಭಾರತ ದೇಶದಲ್ಲಿ ಸಂಸ್ಕಾರ ಇದೆ, ಹಿಂದೆ ಹಲವರು ದಾಳಿ ಮಾಡಿ ಸಂಪತ್ತು ಲೂಟಿ ಮಾಡಿದ್ದರು, ಆದರೆ ಸಂಸ್ಕೃತಿ-ಸಂಸ್ಕಾರ ತೆಗೆದುಕೊಂಡು ಹೋಗಲು ಸಾಧ್ಯವಾಗಿಲ್ಲ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಮಾತನಾಡಿ, ಅಧಿಕಾರ ಶಾಶ್ವತವಲ್ಲ, ಮಾಡಿದ ಕೆಲಸ ಶಾಶ್ವತವಾಗಿ ಮಾತನಾಡುತ್ತೆ. ಹುಟ್ಟು-ಸಾವು ಎರಡಕ್ಷರವಾದರೆ ಮಧ್ಯೆ ಜೀವನ ಮೂರಕ್ಷರ. ಈ ಜೀವನದಲ್ಲಿ ಒಳ್ಳೆಯ ಕೆಲಸ ಮಾಡಿದರೆ ಸಾವಿನ ಬಳಿಕವೂ ಜೀವಂತವಾಗಿ ಇರುತ್ತಾರೆ. ನೀವು ನೀಡಿದ ಅಧಿಕಾರವನ್ನು ಸಧ್ಬಳಕೆ ಮಾಡಿಕೊಂಡು ಕೆಲಸ ಮಾಡಿದ್ದೇನೆ ಎಂದರು.

ಅಭಿವೃದ್ಧಿಯಲ್ಲಿ ಒಳ್ಳೆಯ ಕೆಲಸಕ್ಕೆ ಶಾಸಕ ತಮ್ಮಯ್ಯ ತಾವು ಸೇರಿ ಜೋಡೆತ್ತಿನ ರೀತಿ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತೇವೆ ಎಂದ ಅವರು ಹಿರೇಮಗಳೂರಿಗೆ ೨ ಅಂಬೇಡ್ಕರ್ ಭವನ, ಪುಷ್ಕರಣಿ ಪುನರ್ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡಿದ್ದು, ಪ್ರಗತಿಯ ತೇರನ್ನು ಸಾಧ್ಯವಾದರೆ ಮುಂದಕ್ಕೆ ಎಳೆಯಿರಿ, ಹಿಂದಕ್ಕೆ ಎಳೆಯಬೇಡಿ ಎಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಹೇಳಿದಂತೆ ನಮ್ಮ ಪ್ರಗತಿಯ ತೇರನ್ನು ಮುಂದಕ್ಕೆ ಎಳೆಯೋಣ ಎಂದು ಹೇಳಿದರು.

ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್ ಮಾತನಾಡಿ, ಶಾಸಕರಾದ ಸಿ.ಟಿ ರವಿ, ಹೆಚ್.ಡಿ ತಮ್ಮಯ್ಯ ಇಬ್ಬರೂ ಸಂಕಲ್ಪಿಸಿ ಮುತ್ತಿನಮ್ಮ ದೇವಸ್ಥಾನ ನಿರ್ಮಾಣಕ್ಕೆ ಭೂಮಿ ಪೂಜೆ ನೆರೆವೇರಿಸಿದ್ದಾರೆ. ಈ ಗ್ರಾಮದೇವತೆಗೆ ಗ್ರಾಮವೇ ನಡೆಯುವುದು ಸಂಸ್ಕೃತಿ ಎಂದು ತಿಳಿಸಿದರು.

ಹಿರೇಮಗಳೂರಿಗೆ ಸಿದ್ದರಕಟ್ಟೆ, ಕೊಪ್ಪಳ ಮಂಟಪ, ತೆಪ್ಪ ಮಂಟಪ, ಪರಶುರಾಮ ಗುಡಿ, ರಾಮ ದೇವಾಲಯ, ಮುತ್ತಿನಮ್ಮ ದೇವಾಲಯ, ಆಂಜನೇಯ ದೇವಾಲಯ, ಯಾತ್ರಿ ನಿವಾಸ ಇವೆಲ್ಲವನ್ನು ಶಾಸಕರಾಗಿದ್ದ ಸಿ.ಟಿ ರವಿ ಅವರು ಅನುದಾನ ನೀಡಿದ್ದಾರೆ. ಅವರನ್ನು ಅಭಿನಂದಿಸುವುದಾಗಿ ಹೇಳಿದರು.

ಧರ್ಮ ಕಾರ್ಯಗಳು ಸದಾ ನೆರವೇರಲಿ, ಎಲ್ಲಾ ದೇವರು ಒಂದೆಡೆ ಸೇರುವಂತೆ ಭಗವಂತ ಅನುಕರಿಸಲಿ ಎಂದು ಹಾರೈಸಿದರು.ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಜಾತಶಿವಕುಮಾರ್, ದೇಸ್ಥಾನ ಸಮಿತಿ ಅಧ್ಯಕ್ಷ ಜಾನಯ್ಯ, ಮಾಜಿ ಸಿಡಿಎ ಅಧ್ಯಕ್ಷ ಕೋಟೆ ರಂಗನಾಥ್, ಹಿರೇಮಗಳೂರು ಕೇಶವ, ರೇವನಾಥ್, ಜಗದೀಶ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯಾಜ್ ಅಹಮದ್, ಡಾ. ವಿಜಯ್ ಕುಮಾರ್, ಕುರುವಂಗಿ ವೆಂಕಟೇಶ್, ಹಿರೇಮಗಳೂರು ಪುಟ್ಟಸ್ವಾಮಿ, ನಾರಾಯಣ್, ಹಿರೇಮಗಳೂರು ರಾಮಚಂದ್ರ, ಬಸವರಾಜ್, ರಾಜ್‌ಕುಮಾರ್, ಮತ್ತಿತರರು ಉಪಸ್ಥಿತರಿದ್ದರು.

Bhoomipuja of Doddamuttinamma Devi Temple

About Author

Leave a Reply

Your email address will not be published. Required fields are marked *

You may have missed