September 21, 2024

ಬೇಲೂರು ರಸ್ತೆಗೆ ಸರ್. ಎಂ.ವಿಶ್ವೇಶ್ವರಯ್ಯ ಹೆಸರು ನಾಮಕರಣ

0
ಸರ್.ಎಂ. ವಿಶ್ವೇಶ್ವರಯ್ಯನವರ್ ಜನುಮದಿನದ ಅಂಗವಾಗಿ ಚಿಕ್ಕಮಗಳೂರು ಸಿವಿಲ್ ಇಂಜಿನಿಯರ್ ಸಂಘ ಇಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ

ಸರ್.ಎಂ. ವಿಶ್ವೇಶ್ವರಯ್ಯನವರ್ ಜನುಮದಿನದ ಅಂಗವಾಗಿ ಚಿಕ್ಕಮಗಳೂರು ಸಿವಿಲ್ ಇಂಜಿನಿಯರ್ ಸಂಘ ಇಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ

ಚಿಕ್ಕಮಗಳೂರು: ನಗರದ ಬೇಲೂರು ರಸ್ತೆಗೆ ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯನವರ ಹೆಸರನ್ನು ನಾಮಕರಣ ಮಾಡುವ ಮೂಲಕ ಈ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಸರ್.ಎಂ. ವಿಶ್ವೇಶ್ವರಯ್ಯನವರ್ ಜನುಮದಿನದ ಅಂಗವಾಗಿ ಚಿಕ್ಕಮಗಳೂರು ಸಿವಿಲ್ ಇಂಜಿನಿಯರ್ ಸಂಘ ಇಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಹೆಚ್.ಡಿ. ತಮ್ಮಯ್ಯ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಚಿಕ್ಕಮಗಳೂರು ಬೇಲೂರು ರಸ್ತೆ ಬಹಳ ಇತಿಹಾಸವಿರುವ ರಸ್ತೆ, ಈ ರಸ್ತೆಗೆ ಸರ್.ಎಂ. ವಿಶ್ವೇಶ್ವರಯ್ಯನವರ ಜನ್ಮದಿನದ ಪ್ರಯುಕ್ತ ಬೇಲೂರು ಬಸ್‌ಸ್ಟಾಪ್‌ನಿಂದ ಹಿರೇಮಗಳೂರುವರೆಗೆ ಇನ್ನುಮುಂದೆ ಸರ್. ಎಂ. ವಿಶ್ವೇಶ್ವರಯ್ಯ ರಸ್ತೆ ಎಂದು ನಾಮಕರಣ ಮಾಡಲಾಗಿದ್ದು, ತುಂಬಾ ಸಂತೋಷವಾಗಿದೆ. ಈ ಮೂಲಕ ವಿಶ್ವೇಶ್ವರಯ್ಯನವರ ಹೆಸರು ಅಜರಾಮರವಾಗಿರಬೇಕು ಎಂದು ಹಾರೈಸಿದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ ಯಾವುದೇ ಕೆಲಸ ಮಾಡುವಾಗ ವ್ಯಕ್ತಿಯ ಹೆಸರು ಶಾಶ್ವತವಲ್ಲ, ಅವರ ವ್ಯಕ್ತಿತ್ವ ಶಾಶ್ವತ. ಯಾವುದೇ ವ್ಯಕ್ತಿ ತನ್ನ ಹುಟ್ಟು, ಸಾವಿನ ಮಧ್ಯೆ ಜೀವನದಲ್ಲಿ ಯಾವ ರೀತಿ ಬದುಕುತ್ತಾನೆ ಎಂಬುದರ ಮೇಲೆ ಅವರ ವ್ಯಕ್ತಿತ್ವ ಉಳಿಯುತ್ತದೆ ಎಂಬುದಕ್ಕೆ ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯನವರು ಒಂದು ಉದಾಹರಣೆ ಎಂದರು.

ವಿಶ್ವೇಶ್ವರಯ್ಯ ಅವರು ಕಾಯವಾಗಿ ನಮ್ಮ ಜೊತೆ ಇಲ್ಲ, ಆದರೆ ಅವರು ಮಾಡಿದ ಕಾಯಕ ಅವರನ್ನು ಜೀವಂತವಾಗಿಟ್ಟಿದೆ. ಇಂತಹವರ ಹೆಸರನ್ನು ಯಾವತ್ತೋ ಚಿಕ್ಕಮಗಳೂರಿನಲ್ಲಿ ಇಡಬೇಕಾಗಿತ್ತು. ಆದರೂ ತಡವಾಗಿ ಆದರೂ ಬೇಲೂರು ರಸ್ತೆಗೆ ಹೆಸರನ್ನು ನಾಮಕರಣ ಮಾಡುತ್ತಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ.

ಈಗ ವೃತ್ತಿ ಪರವಾದ ಲಾಭಿ ಇಲ್ಲ, ಜಾತಿ ಪರವಾದ ಲಾಭಿ ಹೆಚ್ಚು. ಸರ್.ಎಂ. ವಿಶ್ವೇಶ್ವರಯ್ಯ ಅವರು ಜಾತಿಯನ್ನು ಪ್ರತಿನಿಧಿಸಿದವರಲ್ಲ, ನೀತಿಯನ್ನು ಪ್ರತಿನಿಧಿಸಿದವರು. ಈ ಕಾರಣಕ್ಕಾಗಿ ಅವರು ತಮ್ಮ ಕಾಯಕದ ಮೂಲಕ ಅಜರಾಮರವಾಗಿ ಉಳಿದಿದ್ದಾರೆ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಮಾತನಾಡಿ ಪ್ರಾಮಾಣಿಕತೆಗೆ ಮತ್ತೊಂದು ಹೆಸರೇ ಸರ್.ಎಂ. ವಿಶ್ವೇಶ್ವರಯ್ಯ. ಮೈಸೂರಿನ ಒಡೆಯರ ಕಾಲದಲ್ಲಿ ರಾಜ್ಯಕ್ಕೆ ಕೊಟ್ಟ ಅವರ ಕೊಡುಗೆಗಳು ಇನ್ನೂ ನೆನಪಾಗಿಯೇ ಉಳಿದುಕೊಂಡಿವೆ. ರಾಜ್ಯಕ್ಕೆ ಅವರು ನೀಡಿದ ಕೊಡುಗೆಗಳನ್ನು ನಾವು ಅವಲೋಕನ ಮಾಡಬೇಕಾಗಿದೆ. ಗುಣಮಟ್ಟದ ಕಾಮಗಾರಿಗೆ ನೀಡಿದ ಮಹತ್ವ ಬಹಳ ಮುಖ್ಯವಾಗಿದ್ದು, ಇಂದು ಕಟ್ಟುತ್ತಿರುವಾಗಲೇ ಕಟ್ಟಡ, ಸೇತುವೆಗಳು ನೆಲಕ್ಕುರುಳಿರುವಂತಹ ಉದಾಹರಣೆಗಳು ನಮ್ಮ ಕಣ್ಣಮುಂದೆ ಬಂದು ಹೋಗಿವೆ ಎಂದು ಹೇಳಿದರು.

ಭಾರತದ ಇಂಜಿನಿಯರ್‌ಗಳ ಕೌಶಲ್ಯ ಗಟ್ಟಿಯಾಗಿದ್ದು, ಈ ಕೌಶಲ್ಯಗಳನ್ನು ಸರಿಯಾದ ರೀತಿಯಲ್ಲಿ ಪ್ರೋತ್ಸಾಹಿಸುವ ಕೆಲಸ ಸಕಾರದ ಕರ್ತವ್ಯ ಕೂಡ ಆಗಿದೆ. ವಿಶ್ವೇಶ್ವರಯ್ಯ ಅವರ ವಿಚಾರಧಾರೆಗಳು ಎಂದೆಂದಿಗೂ ಪ್ರಸ್ತುತವಾಗಿದ್ದು, ಇಂತಹ ವ್ಯಕ್ತಿಯ ಮಹಾನ್ ಚೇತನದ ಹೆಸರನ್ನು ಬೇಲೂರು ರಸ್ತೆಗೆ ನಾಮಕರಣ ಮಾಡಿರುವುದು ಪ್ರಸ್ತತ ಹಾಗೂ ಸಂತೋಷದ ಸಂಗತಿ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಿವಿಲ್ ಇಂಜಿನಿಯರ್ ಸಂಘದ ಅಧ್ಯಕ್ಷ ಜಿ. ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ಬೇಲೂರು ರಸ್ತೆಗೆ ಸರ್.ಎಂ. ವಿಶ್ವೇಶ್ವರಯ್ಯ ಅವರ ಹೆಸರಿಡಬೇಕು ಎಂಬುದು ಹಲವು ವರ್ಷಗಳ ಬೇಡಿಕೆಯಾಗಿದ್ದು, ಇದನ್ನು ಅನುಷ್ಠಾನಗೊಳ್ಳುವಲ್ಲಿ ಸಿವಿಲ್ ಇಂಜಿನಿಯರ್ ಸಂಘದ ಮಾಜಿ ಅಧ್ಯಕ್ಷರು ಸೇರಿದಂತೆ ಹಲವರ ಕೊಡುಗೆ ಇದ್ದು, ಇದನ್ನು ಕಾರ್ಯರೂಪಕ್ಕೆ ತರಲು ಕಾರಣರಾದ ಎಲ್ಲರಿಗೂ ಇಂಜಿನಿಯರ್ ಸಂಘ ಕೃತಜ್ಞತೆ ಸಲ್ಲಿಸುತ್ತದೆ ಎಂದರು.

ನಗರಸಭೆ ಅಧ್ಯಕ್ಷೆ ಬಿ.ಸಿ. ಸುಜಾತ ಶಿವಕುಮಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯಾಜ್ ಅಹಮ್ಮದ್ ಸಮಾರಂಭದಲ್ಲಿ ಮಾತನಾಡಿದರು.

ಸಿವಿಲ್ ಇಂಜಿನಿಯರ್ ಸಂಘದ ಕೋ-ಆರ್ಡಿನೇಟರ್ ಕೆ.ಜಿ. ವೆಂಕಟೇಶ್, ಇಂಜಿನಿಯರ್‌ಗಳಾದ ಬಿ.ಎಸ್. ಹರೀಶ್, ಎಂ.ಎ. ನಾಗೇಂದ್ರ ಹಾಗೂ ಗುರು ಉಪಸ್ಥಿತರಿದ್ದರು. ಸಂಘದ ಖಜಾಂಚಿ ಅಬ್ದುಲ್ ಕಬೀರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಇದೇ ಸಂದರ್ಭದಲ್ಲಿ ಇಂಜಿನಿಯರ್ ಸಂಘದ ಸಿಹಿ ವಿತರಣೆ ಮಾಡಲಾಯಿತು.

Belur road is named after Sir M. Visveswaraiah

About Author

Leave a Reply

Your email address will not be published. Required fields are marked *