September 21, 2024

ಎಸ್.ಎಸ್.ಎಲ್.ಸಿ ಉತ್ತಮ ಫಲಿತಾಂಶಕ್ಕೆ ಶಿಕ್ಷಕರು ವಿಶೇಷ ಕಾಳಜಿ ವಹಿಸಿ

0
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಪ್ರೌಢ ಶಾಲಾ ಶಿಕ್ಷಕರ ಪೂರ್ವ ಸಿದ್ಧತಾ ಸಭೆ

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಪ್ರೌಢ ಶಾಲಾ ಶಿಕ್ಷಕರ ಪೂರ್ವ ಸಿದ್ಧತಾ ಸಭೆ

ಚಿಕ್ಕಮಗಳೂರು: ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಉತ್ತಮ ಫಲಿತಾಂಶ ಬರಲು ಶಿಕ್ಷಕರು ಹಾಗೂ ಉಪನ್ಯಾಸಕರ ಪಾತ್ರ ತುಂಬಾ ಪ್ರಮುಖವಾಗಿದ್ದು ಶಿಕ್ಷಕರು ಮತ್ತು ಉಪನ್ಯಾಸಕರು ವಿಶೇಷ ಕಾಳಜಿ ವಹಿಸಿ ಅಗತ್ಯ ಕಾರ್ಯ ಯೋಜನೆ ರೂಪಿಸಬೇಕು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್ ಶಿಕ್ಷಣ ಇಲಾಖೆ  ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇಂದು ಜಿಲ್ಲೆಯಲ್ಲಿ ೨೦೨೪-೨೫ ಪ್ರಸಕ್ತ ಸಾಲಿನಲ್ಲಿ ಗುಣಮಟ್ಟದಿಂದ ಕೂಡಿದ ಶೇಕಡವಾರು ೧೦೦ರಷ್ಟು ಫಲಿತಾಂಶ ಬರಲು ಕಾರ್ಯಯೋಜನೆ ರೂಪಿಸಿಸುವ ಪ್ರೌಢ ಶಾಲಾ ಶಿಕ್ಷಕರ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಾಲೆಯ ಒಟ್ಟು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ವಿಭಾಗಿಸಿ ಎಲ್ಲಾ ಶಿಕ್ಷಕರಿಗೂ ಇಂತಿಷ್ಟು ವಿದ್ಯಾರ್ಥಿಗಳೆಂದು ದತ್ತು ನೀಡುವ ವ್ಯವಸ್ಥೆ ಜಾರಿಗೊಳಿಸಿ ಆಯಾ ಶಿಕ್ಷಕರು ಅವರ ಶೈಕ್ಷಣಿಕ  ಪ್ರಗತಿಯ ಬಗ್ಗೆ ಮೇಲುಸ್ತುವಾರಿ ನೋಡಿಕೊಳ್ಳಬೇಕು. ಇದೇ ರೀತಿ ಉತ್ತಮವಾಗಿ ಓದುವ ವಿದ್ಯಾರ್ಥಿಗಳ ಜೊತೆ ಸಾಧಾರಣ ಮತ್ತು ಕಲಿಕೆಯಲ್ಲಿ ಹಿಂದುಳಿದ  ವಿದ್ಯಾರ್ಥಿಗಳ ಜೊತೆ ಓದಲು ಬಿಡಬೇಕು.
ಇದರಿಂದಾಗಿ ಸಾಧಾರಣ ವಿದ್ಯಾರ್ಥಿಗಳು ಹಾಗೂ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಉತ್ತೀರ್ಣರಾಗಲು ಸಹಕಾರಿಯಾಗುತ್ತದೆ. ಇವೆಲ್ಲವೂ ಶಿಕ್ಷಕರ ಮಾರ್ಗದರ್ಶನದಲ್ಲಿಯೇ ನಡೆಯಬೇಕು ಎಲ್ಲಾ ಮಕ್ಕಳನ್ನು ಶಿಕ್ಷಕರು ದತ್ತು ತೆಗೆದುಕೊಂಡು ಕಲಿಕೆಗೆ ಪ್ರೋತ್ಸಾಹ ನೀಡುವಂತೆ ತಿಳಿಸಿದರು.
ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳು ವಿಷಯವಾರು ರಸಪ್ರಶ್ನೆ ಕಾರ್ಯಕ್ರಮಗಳು ಮುಂತಾದ ಪಠ್ಯೇತರ ಚಟುವಟಿಕೆಗಳನ್ನು ಏರ್ಪಡಿಸುವ ಮೂಲಕ ವಿದ್ಯಾರ್ಥಿಗಳು ಭಯಭೀತರಾಗದಂತೆ ಧೈರ್ಯವಾಗಿ ಪರೀಕ್ಷೆಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು. ಶಾಲೆಯ ಮುಖ್ಯ ಶಿಕ್ಷಕರಿಗೆ ಎಸ್.ಎಸ್.ಎಲ್.ಸಿ ಯ ಎಲ್ಲಾ ವಿದ್ಯಾರ್ಥಿಗಳ ಸಂಪೂರ್ಣ ಮಾಹಿತಿ ಹೊಂದಿರಬೇಕು ಹಾಗೂ ಆಯಾ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹೆಚ್ಚಿನ ನಿಗಾ ವಹಿಸಬೇಕಾಗಿ ನಿರ್ದೇಶನ ನೀಡಿದರು.
ಜಿಲ್ಲೆ ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ೧೦ನೇ ಸ್ಥಾನದಲ್ಲಿದ್ದು, ಈ ಬಾರಿ ಮೊದಲ ಸ್ಥಾನ ಬರಲು ಕ್ರಮ ವಹಿಸುವಂತೆ ತಿಳಿಸಿದರು.
ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್. ಕೀರ್ತನಾ ಮಾತನಾಡಿ ಎಸ್.ಎಸ್.ಎಲ್.ಸಿ ಫಲಿತಾಂಶದ ವೃದ್ಧಿಗೆ ಶಿಕ್ಷಕರು ಹೆಚ್ಚಿನ ಗಮನ ಹರಿಸಬೇಕು. ವಿಶೇಷ ತರಗತಿಗಳನ್ನು ತೆಗೆದುಕೊಳ್ಳಬೇಕಲ್ಲದೆ ಗುಂಪು ಚರ್ಚೆ, ಶಾಲಾ ಅವಧಿಯ ಮೊದಲು ಮತ್ತು ನಂತರ ಒಂದು ಗಂಟೆ ವಿಶೇಷ ತರಗತಿ ಆಯೋಜಿಸಬೇಕು. ಮುಖ್ಯ ಶಿಕ್ಷಕರು ಅದಕ್ಕಾಗಿ ವಿಷಯವಾರು ವೇಳಾಪಟ್ಟಿ ರಚಿಸಬೇಕು.
ಶಿಕ್ಷಕರು ಪ್ರತಿ ವಿದ್ಯಾರ್ಥಿಯ ವೈಯಕ್ತಿಕ ಕಡತ ನಿರ್ವಹಣೆ ಮಾಡಬೇಕು. ಕಿರುಪರೀಕ್ಷೆ ನಡೆಸಬೇಕಲ್ಲದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರಿಗೆ ವಿಶೇಷ ಗಮನಹರಿಸಬೇಕು. ಎಲ್ಲಾ ವಿಷಯದ ಶಿಕ್ಷಕರು ಅಧ್ಯಾಯ ಮಾಹಿತಿ ನಂತರ ಪ್ರಶ್ನೆಗಳ ಕೋರಿ ತಯಾರಿಸಿ ಮಕ್ಕಳನ್ನು ಸಜ್ಜುಗೊಳಿಸಬೇಕು. ಇಲಾಖೆ ಆಗಾಗ್ಗೆ ನೀಡುತ್ತಿರುವ ತರಬೇತಿಯಲ್ಲಿ ಪಡೆದಿರುವ ಹೊಸ ತಂತ್ರಾಂಶಗಳನ್ನು ತರಗತಿಯಲ್ಲಿ ಬಳಸಬೇಕು ಎಂದು ಸಲಹೆ ನೀಡಿದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಕೆ. ಪುಟ್ಟರಾಜು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪುಟ್ಟನಾಯಕ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು, ಎಲ್ಲಾ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಹಾಜರಿದ್ದರು.
Pre-preparatory meeting of high school teachers at Zilla Panchayat Hall

About Author

Leave a Reply

Your email address will not be published. Required fields are marked *