September 22, 2024

ಕಾಂಗ್ರೆಸ್ ಸರ್ಕಾರದಿಂದ ಬಿಪಿಎಲ್ ಕಾರ್ಡ್ ರದ್ದುಗೊಳಿಸುವ ಹುನ್ನಾರ

0
ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ

ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ

ಚಿಕ್ಕಮಗಳೂರು: ಗೃಹಲಕ್ಷ್ಮಿ ಯೋಜನೆಗೆ ಹಣ ಹೊಂದಿಸಲು ರಾಜ್ಯದ ಕಾಂಗ್ರೆಸ್ ಸರ್ಕಾರ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸುವ ಹುನ್ನಾರ ನಡೆಸಿದ್ದು ಬಿಜೆಪಿ ಕಾರ್ಯಕರ್ತರು ಇದನ್ನು ಪ್ರತಿಭಟಿಸಿ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಬೇಕು ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಕರೆ ನೀಡಿದರು.

ಅವರು ಶನಿವಾರ ನಗರದ ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಸಂಬಂಧ ಪ್ರಮುಖರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುಮಾರು ೫೦,೦೦೦ ಬಿಪಿಎಲ್ ಕಾರ್ಡುಗಳು ರದ್ದಾಗುವ ಸಾಧ್ಯತೆಗಳಿವೆ.

ಈ ಸಂಬಂಧ ರಾಜ್ಯ ಸರ್ಕಾರ ಸಮೀಕ್ಷೆಯನ್ನು ಸಹ ನಡೆಸುತ್ತಿದೆ. ಸಾವಿರಾರು ಬಡ ಜನರಿಗೆ ತೊಂದರೆ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಪಕ್ಷದ ಮಹಿಳಾ ಮೋರ್ಚ ಅಥವಾ ಬೇರೆ ಯಾವುದಾದರೂ ಘಟಕದಿಂದ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿ ಬಡವರ ಪಡಿತರ ಚೀಟಿಗಳನ್ನು ರದ್ದುಪಡಿಸಿದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಬೇಕು ಎಂದರು.

ಇದರಿಂದ ಕನಿಷ್ಠಪಕ್ಷ ಬಿಪಿಎಲ್ ಕಾರ್ಡುಗಳಿಗೆ ಸ್ವಲ್ಪಮಟ್ಟಿನ ರಿಯಾಯಿತಿಯಾದರೂ ಸಿಗಬಹುದು. ಬಡವರಿಗೆ ಅನುಕೂಲವಾಗಬಹುದು ಎಂದರು. ಇಡೀ ದೇಶದಲ್ಲಿ ಪಕ್ಷದ ಸದಸ್ಯತ್ವ ಅಭಿಯಾನ ನಡೆಯುತ್ತಿದೆ. ನಮ್ಮ ನಮ್ಮ ಬೂತ್ ಗಳಲ್ಲಿ ಅಭಿಯಾನಕ್ಕೆ ವೇಗ ನೀಡಬೇಕು. ಕೆಲವೆಡೆ ತುಂಬಾ ಚೆನ್ನಾಗಿ ನಡೆದಿದೆ. ಪ್ರಮುಖವಾಗಿ ಮಹಾಶಕ್ತಿ ಕೇಂದ್ರಗಳು, ಮಂಡಲಗಳಲ್ಲಿ ಇನ್ನಷ್ಟು ಚುರುಕಾಗಿ ಸದಸ್ಯತ್ವ ಅಭಿಯಾನ ನಡೆಯಬೇಕಿದೆ ಎಂದು ಕರೆ ನೀಡಿದರು.

ಮಂಡಲಗಳು ಮತ್ತು ಶಕ್ತಿ ಕೇಂದ್ರದ ನಿಜವಾದ ಶಕ್ತಿಯ ಅರವಿಗೆ ಬರುವುದೇ ಸದಸ್ಯತ್ವ ನೊಂದಣಿಯ ಆಧಾರದ ಮೇಲೆ. ಈ ಹಿನ್ನೆಲೆಯಲ್ಲಿ ಪಕ್ಷದ ಎಲ್ಲಾ ಮೋರ್ಚಾಗಳು ಜವಾಬ್ದಾರಿಯನ್ನು ತೆಗೆದುಕೊಂಡು ಆಯಾ ಬೂತ್, ಶಕ್ತಿ ಕೇಂದ್ರ ಹಾಗೂ ಮಂಡಲಗಳ ಪ್ರಮುಖರನ್ನು ಜೋಡಿಸಿಕೊಂಡು ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದೆ.

ವಿಧಾನಪರಿಷತ್ ಸದಸ್ಯ ಸಿಟಿ ರವಿ ಮಾತನಾಡಿ ಸದಸ್ಯತ್ವ ಅಭಿಯಾನ ಕೇವಲ ಸಂಖ್ಯಾತ್ಮಕವಾಗಿ ಆದರೆ ಸಾಲದು. ಅದು ಗುಣಾತ್ಮಕವಾಗಿರಬೇಕು. ಕೇವಲ ತಾಂತ್ರಿಕವಾಗಿ ಸದಸ್ಯರಾದರೆ ಸಾಕಾಗುವುದಿಲ್ಲ. ಪಕ್ಷದೊಂದಿಗೆ ನೂತನ ಸದಸ್ಯರನ್ನು ಭಾವನಾತ್ಮಕವಾಗಿ ಬೆರೆತುಕೊಳ್ಳುವಂತೆ ಮಾಡಬೇಕು. ಅಂತವರನ್ನೇ ಸದಸ್ಯರನ್ನಾಗಿ ನೋಂದಾಯಿಸಬೇಕು.

ಯಾವ ಕಾರಣಕ್ಕೆ ಸದಸ್ಯತ್ವ ತೆಗೆದುಕೊಂಡಿದ್ದೇನೆ ಎನ್ನುವುದು ಅವರಿಗೆ ಗೊತ್ತಾಗಬೇಕು. ಈ ಹಿನ್ನೆಲೆಯಲ್ಲಿ ನೂತನವಾಗಿ ಸದಸ್ಯತ್ವ ಪಡೆಯುವವರಿಗೆ ಕೇಂದ್ರದ ನಾಯಕತ್ವ, ಪಕ್ಷದ ತತ್ವ, ಸಿದ್ಧಾಂತದ ಬಗ್ಗೆ ಮನವರಿಕೆ ಮಾಡಬೇಕು ಎಂದರು.

ಪಕ್ಷದ ಕಾರ್ಯವು ವಿಸ್ತಾರವಾಗಬೇಕಾದರೆ ಅದಕ್ಕೆ ಸದಸ್ಯತ್ವವು ಒಂದು ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಕೊಳಗೇರಿಯಿಂದ ಹಿಡಿದು ಮೇಲ್ಮಟ್ಟದ ಹೊರಗಿನವರನ್ನು ಸದಸ್ಯರನ್ನಾಗಿ ಮಾಡಿಕೊಳ್ಳಬೇಕು. ಪ್ರಜಾಪ್ರಭುತ್ವದಲ್ಲಿ ಮತದಾನದ ಅಧಿಕಾರ ಸಮಾನವಾಗಿದೆ. ಜಾತಿ ಭೇದ, ಬಡವ ಶ್ರೀಮಂತ, ದಡ್ಡ ಬುದ್ಧಿವಂತ ಎನ್ನುವುದು ಇರುವುದಿಲ್ಲ. ಹಾಗೆಯೇ ನಾವು ಸದಸ್ಯತ್ವ ಅಭಿಯಾನದ ವೇಳೆ ಎಲ್ಲರಿಗೂ ಅವಕಾಶ ಕೊಡಬೇಕು ಎಂದು ಕರೆ ನೀಡಿದರು.

ಜನರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡಿದ ಪರಿಣಾಮ ನಗರದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಭಾರತೀಯ ಜನತಾ ಪಕ್ಷ ಇಂದು ಮೊದಲನೇ ಸ್ಥಾನಕ್ಕೆ ಏರಿದೆ. ಜನಪರ ಹೋರಾಟದ ಮೂಲಕ ಪಕ್ಷವನ್ನು ಸಾರ್ವಜನಿಕರ ಹೃದಯದಲ್ಲಿ ಪ್ರತಿಷ್ಠಾಪನೆ ಮಾಡಬೇಕಾಗುತ್ತದೆ. ಪಕ್ಷದ ಸಕ್ರಿಯ ಸದಸ್ಯರಾಗಲು ಕನಿಷ್ಠ ೧೦೦ ಜನರನ್ನು ಸದಸ್ಯರನ್ನಾಗಿ ಮಾಡಿಸಬೇಕಾಗುತ್ತದೆ. ಅಂತವರು ಪಕ್ಷದಲ್ಲಿ ಜವಾಬ್ದಾರಿಗಳನ್ನು ಪಡೆದುಕೊಳ್ಳಲು ಅರ್ಹತೆ ಪಡೆಯುತ್ತಾರೆ ಎಂದರು.

ಸದಸ್ಯತ್ವ ಅಭಿಯಾನ ಪ್ರಕ್ರಿಯೆಯ ತಾಂತ್ರಿಕ ವಿಚಾರಗಳು ಇನ್ನೂ ಅರ್ಥವಾಗಿಲ್ಲವಾದರೆ ಪ್ರಮುಖರುಗಳಾದ ರಾಕೇಶ್, ಸಂತೋಷ್ ಕೋಟ್ಯಾನ್, ಸಮೃದ್ಧ ಪೈ ಅವರನ್ನು ಭೇಟಿ ಮಾಡಿ ಗೊಂದಲಗಳಿದ್ದರೆ ಸರಿಪಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಬಿಜೆಪಿ ನಗರಾಧ್ಯಕ್ಷ ಕೆಂಪನಹಳ್ಳಿ ಪುಷ್ವರಾಜ್ ಮಾತನಾಡಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ೧೦ ವರ್ಷಗಳಿಂದ ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತ ನೀಡುತ್ತಿದ್ದು, ಜನಪರ ಯೋಜನೆಗಳನ್ನು ನೀಡುವುದರ ಮೂಲಕ ಜನರ ವಿಶ್ವಾಸ ಗಳಿಸಿದೆ, ನಗರ ಮಂಡಳದಲ್ಲಿ ೧೧೨ ಬೂತ್‌ಗಳಿದ್ದು ಪ್ರತಿ ಬೂತುಗಳಲ್ಲಿಯೂ ೩೦೦ ಕ್ಕೂ ಹೆಚ್ಚು ಜನ ಸದಸ್ಯರುಗಳನ್ನು ಸದಸ್ಯತ್ವ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ ಆರ್ ದೇವರಾಜ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಡಾ. ನರೇಂದ್ರ, ಬೆಳವಾಡಿ ರವೀಂದ್ರ, ಮುಖಂಡರುಗಳಾದ ಪ್ರೇಮ್ ಕುಮಾರ್, ಬಿ.ರಾಜಪ್ಪ, ಜಸಂತಾಅನಿಲ್ ಕುಮಾರ್, ಪವಿತ್ರ, ಸಂತೋಷ್ ಕೋಟ್ಯಾನ್, ಬಸವರಾಜ್, ಜಿ.ಶಂಕರ ಉಪಸ್ಥಿತರಿದ್ದರು.

BPL card canceled by Congress government

 

 

About Author

Leave a Reply

Your email address will not be published. Required fields are marked *

You may have missed